ಎಲಿಮಲೆ ಪ್ರೌಢಶಾಲಾ ಮೈದಾನದ ತಡೆಗೋಡೆ ಮತ್ತೆ ಕುಸಿತ – ಹತ್ತಿರದ ಮನೆಯ ಪಿಲ್ಲರ್ ನಲ್ಲಿ‌ ಬಿರುಕು

0

ಮಣ್ಣಿನಡಿ ಆದ ಅಡಿಕೆ ಗಿಡಗಳು

ಸರಕಾರಿ ಎಲಿಮಲೆ ಪ್ರೌಢಶಾಲೆಯ ಮೈದಾನಕ್ಕೆ ಒಂದು ಬದಿ ಕಟ್ಟಿದ್ದ ತಡೆಗೋಡೆ ಕೆಲದಿನಗಳ ಹಿಂದೆ ಕುಸಿತಗೊಂಡಿದ್ದು, ಇದೀಗ ಮತ್ತೆ ಕುಸಿತಗೊಂಡಿರುವುದಾಗಿ ವರದಿಯಾಗಿದೆ. ಪರಿಣಾಮ ಹತ್ತಿರದ ಮನೆಯ ಪಿಲ್ಲರ್ ಬಿರುಕು ಬಿಟ್ಟಿದ್ದು, ಮನೆಯವರು ಆತಂಕ‌ ಎದುರಿಸುವ ಪರಿಸ್ಥಿತಿ ನಿರ್ಮಾಣ ವಾಗಿದೆ.‌

ಎಲಿಮಲೆ‌ ಸರಕಾರಿ ಪ್ರೌಢಶಾಲೆಯ ಮೈದಾನದ ಸುತ್ತಲೂ ತಡೆಗೋಡೆ ಮಾಡಲಾಗಿದ್ದು, ಒಂದು ಬದಿ ಜಗದೀಶ ಅಂಬೆಕಲ್ಲು ಎಂಬವರ ಮನೆ ಇರುವ ಭಾಗದಲ್ಲಿ ನಿರ್ಮಿಸಲಾಗಿದ್ದ ತಡೆಗೋಡೆ ಕೆಲ ದಿನಗಳ ಹಿಂದೆ ಕುಸಿತಗೊಂಡಿತ್ತು. ಪರಿಣಾಮ ವಿದ್ಯುತ್ ಕಂಬ ಧರೆಗುಳಿಯಿತು ಹಾಗೂ ತಡೆಗೋಡೆ ಮತ್ತು ಜಗದೀಶ ಅಂಬೆಕಲ್ಲು ಎಂಬವರ ಮನೆಯ ಗೋಡೆಯ ಮಧ್ಯೆ ಸಾಕುತ್ತಿದ್ದ ಸುಮಾರು 20 ಊರಕೋಳಿಗಳು ಮಣ್ಣಿನಡಿಗೆ ಸಿಲುಕಿ ಸಾವಿಗೀಡಾಗಿತ್ತು. ಇದೀಗ ಅದೇ ತಡೆಗೀಡೆ ಮತ್ತೆ ಜರಿದಿದೆ. ಪರಿಣಾಮ ಜಗದೀಶ ಅಂಬೆಕಲ್ಲು ಎಂಬವರ ಮನೆಯ ಪಿಲ್ಲರ್ ಬಿರುಕು‌ ಬಿಟ್ಟಿದೆ.

ಮೊದಲು ಜರಿದಲ್ಲಿಂದ ಮಣ್ಣು ತೆಗೆಯುವ ಕಾರ್ಯ ಮಾಡಲಾಗಿತ್ತು.‌ ಆದರೆ ಇದೀಗ ಮತ್ತೆ ಕುಸಿತಗೊಂಡಿದೆ. ಜಗದೀಶರವರು ಸುಮಾರು 400ರಷ್ಟು ಅಡಿಕೆ ಗಿಡಗಳನ್ನು ಮಾಡಿದ್ದರು.‌ ಮಣ್ಣು ಕುಸಿತದಿಂದ ಎಲ್ಲಾ ಅಡಿಕೆ ಗಿಡಗಳು ಮಣ್ಣಿನಡಿಗೆ ಆಗಿದೆ ಎಂದು ಜಗದೀಶರು ತಿಳಿಸಿದ್ದಾರೆ.‌ ಮತ್ತೆ ಮತ್ತೆ ತಡೆಗೋಡೆ ಕುಸಿತಗೊಳ್ಳುತ್ತಿರುವುದರಿಂದ ತಡೆಗೋಡೆಯಿಂದ ಕೆಲವೇ ಅಂತರದಲ್ಲಿರುವ ಜಗದೀಶ ಅಂಬೆಕಲ್ಲು ಮನೆಯವರಿಗೂ ಆತಂಕ ಎದುರಾಗಿದೆ.