ನಗದು ಹಾಗೂ ಅಂಗಡಿ ಸಾಮಾಗ್ರಿ ಕಳವು
ರಾತ್ರಿಯ ವೇಳೆ ಗೂಡಂಗಡಿಗೆ ನುಗ್ಗಿದ ಕಳ್ಳರು ನಗದು ಸೇರಿದಂತೆ ಅಂಗಡಿ ಸಾಮಾಗ್ರಿಗಳನ್ನು ಕಳವು ಮಾಡಿರುವ ಘಟನೆ ದ.ಕ. ಸಂಪಾಜೆ ಗ್ರಾಮದ ಚೌಕಿಯಲ್ಲಿ ಜೂ.6ರಂದು ರಾತ್ರಿ ಸಂಭವಿಸಿದೆ.
ಚೌಕಿಯ ರಸ್ತೆ ಬದಿಯಲ್ಲಿರುವ ಚಿದಾನಂದ ಮತ್ತು ಪಾರ್ವತಿ ಎಂಬವರ ಗೂಡಂಗಡಿಗೆ ರಾತ್ರಿ ವೇಳೆ ನುಗ್ಗಿದ್ದು, ಅಂಗಡಿಯಲ್ಲಿ ಬೆಳಕು ಕಾಣುತ್ತಿರುವ ಕಾರಣದಿಂದ ಅಂಗಡಿ ಪಕ್ಕದ ಮನೆಯವರು ಕೂಡಲೇ ಅಂಗಡಿ ಮಾಲಕರಿಗೆ ವಿಷಯ ತಿಳಿಸಿದರೆನ್ನಲಾಗಿದೆ.
ಈ ವೇಳೆ ಅಲ್ಲಿಯ ಸ್ಥಳೀಯರು ಸೇರಿ ಕಳ್ಳರನ್ನು ಹಿಡಿಯಲು ಹೋದರೆಂದೂ, ಆ ವೇಳೆ ಇಬ್ಬರು ವ್ಯಕ್ತಿಗಳು ತಪ್ಪಿಸಿ, ಪರಾರಿಯಾದರೆಂದು ತಿಳಿದುಬಂದಿದೆ.
ಈ ಗೂಡಂಗಡಿಗೆ ಬಾಗಿಲು ಇಲ್ಲದ ಕಾರಣದಿಂದ ಪ್ರತಿನಿತ್ಯ ರಾತ್ರಿವೇಳೆ ಅಂಗಡಿ ಮಾಲಕರು ಟರ್ಪಲ್ ಹಾಸಿ, ಎರಡೂ ಬದಿಗೆ ಕಲ್ಲು ಇಟ್ಟು ಹೋಗುತ್ತಿದ್ದರೆನ್ನಲಾಗಿದೆ.
ಆದರೆ ಬೆಳಿಗ್ಗೆ ಬಂದು ನೋಡುವಾಗ ಅಂಗಡಿಯ ಎರಡೂ ಬದಿಯಲ್ಲಿ ಇಟ್ಟಿದ್ದ ಕಲ್ಲು, ಇತ್ತೀಚಿನ ಕೆಲ ದಿನಗಳಿಂದ ಸೈಡಿಗೆ ಇರುತ್ತಿದ್ದು, ಒಟ್ಟು ನಾಲ್ಕು ಬಾರಿ ಕಳ್ಳತನ ಆಗಿರುವುದಾಗಿ ಅಂಗಡಿ ಮಾಲಕರು ತಿಳಿಸಿದ್ದಾರೆ.
ಗೂಡಂಗಡಿಗೆ ನುಗ್ಗಿದ ಕಳ್ಳರು ಅಂಗಡಿಯಲ್ಲಿ ಮಾರಾಟಕ್ಕಿರಿಸಿದ್ದ ಜ್ಯೂಸ್ ಬಾಟಲಿಗಳು, ಬೇಕರಿ ತಿಂಡಿ ತಿನಿಸುಗಳು, ಸಿಗರೇಟ್ ಪ್ಯಾಕೇಟ್ ಹಾಗೂ ದೇವಸ್ಥಾನಕ್ಕೆಂದು ಇರಿಸಿದ್ದ ಒಂದು ಸಾವಿರ ರೂ. ನಗದನ್ನು ಕಳವುಗೈದಿದ್ದು, ಈ ಬಗ್ಗೆ ಪೊಲೀಸ್ ದೂರು ದಾಖಲಾಗಿಲ್ಲ ಎಂದು ತಿಳಿದುಬಂದಿದೆ.