ಜೂನ್ 7 :ವಿಶ್ವ ಆಹಾರ ಸುರಕ್ಷತಾ ದಿನ…

0

ನಮ್ಮ ಆಹಾರ ಎಷ್ಟು ಸುರಕ್ಷಿತ ?

ಒಬ್ಬ ವ್ಯಕ್ತಿಯ “ದೈಹಿಕ, ಮಾನಸಿಕ, ಬೌದ್ಧಿಕ ಹಾಗೂ ಸರ್ವತೋಮುಖ ಬೆಳವಣಿಗೆಗೆ ಸಮತೋಲಿತ, ಸುರಕ್ಷಿತ ಆಹಾರ ಅತೀ ಅಗತ್ಯ. ಬಹುತೇಕ ರೋಗಗಳನ್ನು ನಮ್ಮ ಜೀವನ ಶೈಲಿ ಮತ್ತು ಆಹಾರ ಪದ್ಧತಿಗಳನ್ನು ಸರಿಪಡಿಸಿ ಪ್ರಾರಂಭಿಕ ಹಂತದಲ್ಲಿಯೇ ತಡೆಯಬಹುದು. ಉತ್ತಮ ದೈಹಿಕ ವ್ಯಾಯಾಮ ಮತ್ತು ವಿಟಮಿನ್, ಪ್ರೋಟಿನ್, ಲವಣಾಂಶ, ಪೋಷಕಾಂಶ, ಶರ್ಕದ ಪಿಷ್ಠ ಮತ್ತು ನಾರುಯುಕ್ತ ಸಮತೋಲಿತ ಆಹಾರದಿಂದ ನೂರು ಕಾಲ ಆರೋಗ್ಯವಂತರಾಗಿ ಬಾಳಬಹುದು ಎಂದು ಎಲ್ಲರಿಗೂ ತಿಳಿದ ವಿಚಾರವಾಗಿದೆ. ಆದರೂ ಹಾಳು ಮೂಳು ಆಹಾರಗಳಾದ ಬರ್ಗರ್, ಫಿಜ್ಹಾ, ಕೋಕ್, ಪೆಪ್ಸಿ, ಕೇಕ್, ಬಿಸ್ಕತ್ತ್, ಕುರುಕುರೆ ಮುಂತಾದ ಅಸುರಕ್ಷಿತ ಆಹಾರಗಳನ್ನು ಸೇವಿಸಿ ದೇಹವನ್ನು ಜಳ್ಳಾಗಿಸಿ ಖಾಯಿಲೆಯ ಹಂದರವಾಗಿ ಮಾಡಿಕೊಳ್ಳುವುದೇ ಈಗಿನ ದುರಂತವೇ ಸರಿ.

ಹೆಚ್ಚುತ್ತಿರುವ ಕೈಗಾರಿಕೀಕರಣ, ಜಾಗತೀಕರಣ ಮತ್ತು ಅಭಿವೃದ್ಧಿಯ ನೆಪದಲ್ಲಿ ಆಹಾರ ಸರಪಳಿಯಲ್ಲಿ ವಿಪರೀತವಾದ ವ್ಯತ್ಯಾಸವುಂಟಾಗಿ ಸುರಕ್ಷಿತ ಆಹಾರ ಎಲ್ಲರಿಗೂ ಸಿಗದಿರುವುದೇ ಬಹುದೊಡ್ಡ ವಿಪರ್ಯಾಸ ಮತ್ತು ಕಳವಳಕಾರಿ ವಿಚಾರವಾಗಿದೆ. ಜಗತ್ತಿನಾದ್ಯಂತ ಬಡ ಮತ್ತು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಸುರಕ್ಷಿತ ಆಹಾರದ ಕೊರತೆಯಿಂದಾಗಿ ಪ್ರತಿವರ್ಷ ಎರಡರಿಂದ ಮೂರು ಲಕ್ಷ ಜನರು ಸಾವಿಗೀಡಾಗುತ್ತಿದ್ದಾರೆ. ವಿಷಕಾರಕ ವಿಷಾಣುಗಳು ಮತ್ತು ಕ್ಯಾನ್ಸರ್‍ಕಾರಕ ರಾಸಾಯನಿಕಗಳ ಜೊತೆಗೆ ರೋಗಕಾರಕ ಬ್ಯಾಕ್ಟೀರಿಯಾಗಳು, ರೋಗಾಣುಗಳು ಮತ್ತು ಪರಾವಲಂಬಿ ಜೀವಾಣುಗಳು ಸೇರಿಕೊಂಡು ಆಹಾರದ ಮುಖಾಂತರ ದೇಹಕ್ಕೆ ಸೇರಿ ಹೊಟ್ಟೆನೋವು, ವಾಂತಿ, ಬೇದಿ, ಅತಿಸಾರದಂತಹ ಸಾಮಾನ್ಯರೋಗಳಿಂದ ಹಿಡಿದು ಕ್ಯಾನ್ಸರ್ ಹೃದಯ ಕಾಯಿಲೆಯಂತಹ ಗಂಭೀರವಾದ ಖಾಯಿಲೆಗಳಿಗೆ ನಾಂದಿ ಹಾಡುತ್ತಿದೆ ಎಂದರೂ ತಪ್ಪಲ್ಲ. ವಿಷಪೂರಿತ ಅಸುರಕ್ಷಿತ ಆಹಾರ ಸೇವನೆಯಿಂದಾಗಿ ಕಾಲೆರಾ, ಟೈಫಾಯ್ಡ್, ಜಾಂಡಿಸ್, ಹೆಪಟೈಟಿಸ್ ಮುಂತಾದ ರೋಗಗಳು ಬೇಗನೆ ಹರಡುತ್ತದೆ. ವಾಂತಿ ಬೇಧಿ ಮತ್ತು ಅತಿಸಾರ ಸಾಮಾನ್ಯ ಖಾಯಿಲೆಯಾಗಿದ್ದರೂ. ವಿಪರೀತ ವಿರ್ಜಲೀಕರಣರಿಂದಾಗಿ ಗಂಭೀರವಾದ ಅನಾರೋಗ್ಯಕ್ಕೆ ನಾಂದಿ ಹಾಡಿ ಸಾವಿಗೆ ಮುನ್ನುಡಿ ಬರೆದದ್ದೂ ಇದೆ.

ಯಾವ ರೀತಿಯ ಆಹಾರ ಸೇವಿಸಬೇಕು ?

ಕೆಲವೊಂದು ಆಹಾರ ಪದಾರ್ಥಗಳನ್ನು ಕಂಡಾಗ ಮನಸ್ಸು ಚುಬಲವಾಗಿ ಆರೋಗ್ಯವನ್ನು ನಿರ್ಲಕ್ಷಿಸಿ ಬಿಡುತ್ತೇವೆ. ಬಾಯಿ ರುಚಿಯ ಚಪಲಕ್ಕಾಗಿ ಕೇವಲ ಉಪ್ಪಿನಾಂಶ ಕೊಬ್ಬು ಕ್ಯಾಲರಿಗಳಿಂದ ಕೂಡಿದ ಮತ್ತು ವಿಟಮಿನ್, ಪ್ರೋಟಿನ್ ಪೋಷಕಾಂಶ, ಖನಿಜಾಂಶ ಮತ್ತು ನಾರುಗಳಿಲ್ಲದ ಆಹಾರವನ್ನು “ಜಂಕ್‍ಫುಡ್” ಎನ್ನುತ್ತೇವೆ. ಈ ರೀತಿಯ ಜಂಕ್ ಆಹಾರಕ್ಕೆ ಹೆಚ್ಚು ಕಾಲ ಕೆಡದಂತೆ ಶೇಖರಿಸಲು ರಾಸಾಯನಿಕಗಳು ಮತ್ತು ಆಕರ್ಷಕ ಬಣ್ಣ ಬರುವ ರಾಸಾಯನಿಕಗಳನ್ನು ಸೇರಿಸುತ್ತಾರೆ. ಈ ರೀತಿ ಆಹಾರಗಳು ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಹಾಳು ಮಾಡಿ ಕಿಡ್ನಿ, ಪಿತ್ತಜನಕಾಂಗಗಳನ್ನು ಹಾಳು ಮಾಡಿ, ದೇಹದ ರಕ್ಷಣಾ ವ್ಯವಸ್ಥೆಯನ್ನು ಹಾಳುಗೆಡವಿ ರೋಗನಿರೋಧಕ ಶಕ್ತಿಯನ್ನು ಕುಂದುಗೊಳಿಸಿ ದೇಹವನ್ನು ಕೊಬ್ಬು ಬೊಜ್ಜುಗಳಿಂದ ಕೂಡಿದ ರೋಗದ ಹಂದರವಾಗಿ ಮಾಡುತ್ತದೆ.

  • ನಾವು ತಿನ್ನುವ ಆಹಾರ ಕೊಬ್ಬು ರಹಿತ ಮತ್ತು ಕಡಿಮೆ ಕ್ಯಾಲರಿಯಿಂದ ಕೂಡಿರಬೇಕು. ನಮ್ಮ ಪ್ರತಿ ದಿನದ ಆಹಾರದಲ್ಲಿ ಕನಿಷ್ಟ 25ರಿಂದ 35ಗ್ರಾಂಗಳಷ್ಟು ನಾರಿನಾಂಶ ಇರಲೇಬೇಕು. ನಾರುಯುಕ್ತ ಆಹಾರ ದೇಹಕ್ಕೆ ಅತೀ ಅಗತ್ಯ.
  • ಶುಚಿಯಾದ, ಬ್ಯಾಕ್ಟೀರಿಯಾ ರಹಿತವಾದ ಆಹಾರವನ್ನು ಸೇವಿಸಬೇಕು ಮಾಂಸಾಹಾರಿಗಳಾಗಿದ್ದಲ್ಲಿ ಚೆನ್ನಾಗಿ ಬೇಯಿಸಿ ಸೇವಿಸಬೇಕು. ಅರೆಬರೆ ಬೆಂದ ಮಾಂಸಾಹಾರ ಖಂಡಿತಾ ವೇದ್ಯವಲ್ಲ.
  • ಆಹಾರವನ್ನು ಬೇಯಿಸಲು ಶುದ್ಧವಾದ ನೀರನ್ನು ಬಳಸಬೇಕು. ಕಲುಷಿತ ನೀರಿನಿಂದಲೇ ಹಲವಾರು ರೋಗಗಳು ಹರಡುತ್ತದೆ ಮತ್ತು ಆಹಾರ ಶೇಖರಣೆ ಮಾಡುವಾಗ ಸೂಕ್ತ ಉಷ್ಟತೆಯಲ್ಲಿ ಶೇಖರಿಸಬೇಕು.
  • ಹಸಿ ತರಕಾರಿಗಳು ಸೊಪ್ಪು, ದಂಟು ಪಲ್ಯಗಳು ದೇಹಕ್ಕೆ ಅತೀ ಅಗತ್ಯ. ತಾಜಾ ಹಣ್ಣುಗಳನ್ನು ಸೇವಿಸಬೇಕು. ಹಣ್ಣಿನ ರಸಕ್ಕಿಂತ, ಪೂರ್ತಿ ಹಣ್ಣನ್ನು ಸೇವಿಸಿದಲ್ಲಿ ನಾರಿನಾಂಶ ದೇಹಕ್ಕೆ ಸೇರಿ ಆರೋಗ್ಯ ವೃದ್ಧಿಸುತ್ತದೆ. ಕ್ಯಾನ್ಸರ್ ಕಾಯಿಲೆಗಳಿಗೆ ಪೂರಕವಾಗಿ ಕೆಲಸ ಮಾಡುವ ಕ್ಯಾನ್ಸರ್ ಕಾರಕ ವಸ್ತುಗಳು ದೇಹದಲ್ಲಿ ಉಳಿಯದಂತೆ ನಾರು ಸಮರ್ಥವಾಗಿ ಕೆಲಸಮಾಡುತ್ತದೆ. ಆಹಾರದಲ್ಲಿ ನಾರಿನಾಂಶ 30ರಿಂದ 35 ಶೇಕಡಾ ಇದ್ದಲ್ಲಿ ಕ್ಯಾನ್ಸರ್ ಸಮಸ್ಯೆಗಳು ಕಡಿಮೆಯಾಗುತ್ತದೆ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ. ನಾರಿನಾಂಶ ದೇಹದಲ್ಲಿರುವ ನೀರನ್ನು ಹೆಚ್ಚು ಹೀರುತ್ತದೆ. ಈ ಕಾರಣದಿಂದ ಸ್ವಲ್ವ ತಿಂದರೂ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಮತ್ತು ಇದರಲ್ಲಿ ಕ್ಯಾಲರಿ ಅಂಶ ಕಡಿಮೆ ಇರುತ್ತದೆ. ಹೆಚ್ಚು ಹೆಚ್ಚು ನೀರು ಸೇವಿಸುವುದರಿಂದಲೂ ದೇಹದ ಆರೋಗ್ಯ ವೃದ್ಧಿಸುತ್ತದೆ ಮತ್ತು ನಾರುಯುಕ್ತ ಆಹಾರ, ಮಲಬದ್ಧತೆಯನ್ನು ಕಡಿಮೆಮಾಡಿ ಆರೋಗ್ಯವನ್ನು ಹತೋಟಿಯಲ್ಲಿಡುತ್ತದೆ.

ಏನಿದು ಮೂಲಾಹಾರ ?

ಹಿಂದಿನ ಕಾಲದಲ್ಲಿ ನಮ್ಮ ಪೂರ್ವಜರು ಹಸಿಗಡ್ಡೆ ಗೆಣಸು, ಸೊಪ್ಪು, ದಂಟು ಪಲ್ಯಗಳನ್ನು ಸೇವಿಸುತ್ತಿದ್ದರು. ಆಹಾರ ಸಂಸ್ಕರಣೆ ಮತ್ತು ಶೇಖರಣೆಯ ವ್ಯವಸ್ಥೆ ಆಗ ಇರಲಿಲ್ಲ. ವಾತಾವರಣ ಮಲಿನವಾಗಿರಲಿಲ್ಲ. ಜಾಗತೀಕರಣ, ಔದ್ಯೋಗಿಕರಣದ ಚಿಂತೆ ಇರಲಿಲ್ಲ. ಊರು ತುಂಬಾ ಕಾಡುಗಳಿದ್ದು ನೀರು ಈಗಿನಂತೆ ಕಲುಷಿತವಾಗಿರಲಿಲ್ಲ. ಈ ಕಾರಣದಿಂದಲೇ ನಮ್ಮ ಪುರ್ವಜರು 80-90 ವಯಸ್ಸಿನಲ್ಲೂ ಗಟ್ಟಿಮುಟ್ಟಾಗಿರುತ್ತಿದ್ದರು. ಯಾವುದೇ ರಕ್ತದೊತ್ತಡ, ಮಧುವೇಹ, ಹೃದಯದ ಖಾಯಿಲೆಗಳಿಂದ ಬಳಲುತ್ತಿರಲಿಲ್ಲ. ಹಗಲೀಡಿ ಬೆವರಿಳಿಸಿ ದುಡಿದು, ಶುದ್ಧವಾದ ನೀರು, ಸುರಕ್ಷಿತವಾದ ರಾಸಾಯನಿಕಗಳಿಲ್ಲದ ಕಚ್ಚಾ ಆಹಾರವೇ ಅವರ ಆರೋಗ್ಯದ ಮೂಲ ಮಂತ್ರವಾಗಿತ್ತು. ನಿಯಮಿತವಾದ ದೈಹಿಕ ದುಡಿಮೆ, ಒತ್ತಡವಿಲ್ಲದ ಜೀವನ ಶೈಲಿ, ಚಿಂತೆಯಿಲ್ಲದ ಜೀವನ ಮತ್ತು ಸುರಕ್ಷಿತ ಸ್ವಚ್ಚವಾದ ನೀರು ಮತ್ತು ಆಹಾರವೇ ಅವರ ಆರೋಗ್ಯದ ಗುಟ್ಟಾಗಿತ್ತು. ಆದರೆ ಈಗಿನ ಪರಿಸ್ಥಿತಿಯೇ ಬೇರೆ! ದೈಹಿಕವ್ಯಾಯಾಮವಿಲ್ಲದ ದುಡಿಮೆ, ಒತ್ತಡದ ಬದುಕು, ರಾಸಾಯನಿಕ ಮಿಶ್ರಿತ ಆಹಾರ, ಕಲುಷಿತ ನೀರು ಜೊತೆಗೆ ಮಲಿನಗೊಂಡ ವಾತಾವರಣ ಇವೆಲ್ಲಾ ಸೇರಿ ಆರೋಗ್ಯ ಎನ್ನುವುದು ಮರೀಚಿಕೆಯಾಗಿಯೇ ಬಿಟ್ಟಿದೆ. ಶುದ್ಧ ನೀರಿಗಾಗಿ ಹಾಹಾಕಾರ ಬಿಸ್ಲೇರಿ ನೀರಿಲ್ಲದೆ ಬದುಕಲಾರ. ಶುಭ್ರವಾದ ಗಾಳಿಗಾಗಿ ಹವಾನಿಯಂತ್ರಿತ ವ್ಯವಸ್ಥೆ ಅಥವಾ ಆಕ್ಸಿಜನ್ ಕ್ಲಿನಿಕ್‍ಗಳು, ಮಾನಸಿಕ ಒತ್ತಡದ ನಿರ್ವಹಣೆಗಾಗಿ ಕ್ಲಬ್‍ಗಳು, ಕುಡಿತಗಳು ಮತ್ತು ವಾರಾಂತ್ಯದ ಮೋಜು ಮಸ್ತಿಯ ಪಾರ್ಟಿಗಳು ಇವೆಲ್ಲಾ ಮೈೀಳೈಸಿ ಮನುಷ್ಯ ನಿಧಾನವಾಗಿ ರೋಗಗಳ ಹಂದರವಾಗಿ ಮಾರ್ಪಾಡಾಗುತ್ತಿದ್ದಾನೆ. ವಯಸ್ಸು 50 ದಾಟುವುದರ ಒಳಗೆ ಕ್ಯಾನ್ಸರ್, ಹೃದಯಾಘಾತ, ರಕ್ತದೊತ್ತಡ, ಮಧುವೇಹ ಸೇರಿಕೊಂಡು ಮಕ್ಕಳಾಗದಿರುವುದು, ಕೌಟುಂಬಿಕ ಕಲಹ ಘರ್ಷಣೆ ಇವೆಲ್ಲಾ ಮೈೀಳೈಸಿ 50ರ ಹರೆಯದಲ್ಲೆ ಸುಸ್ತಾಗಿ 90ರ ಮುದುಕರಂತೆ ಗೋಚರವಾದರೂ ಸೋಜಿಗದ ಸಂಗತಿಯಲ್ಲ. ಇದು ನಮ್ಮ ಈ
ಶತಮಾನದ ಪಾಧನೆ ಎಂದರೂ ತಪ್ಪಲ್ಲ.

ಕೊನೆ ಮಾತು :

ಬದುಕುವುದಕ್ಕಾಗಿ ತಿನ್ನಿ ತಿನ್ನಲಿಕ್ಕಾಗಿ ಬದುಕಬೇಡಿ. ಇದು ನಮ್ಮ ಹಿರಿಯರು ಹೇಳಿದ ಮಾತು ನೂರಕ್ಕೆ ನೂರುರಷ್ಟು ಸತ್ಯ. ನಾವು ಏನು ತಿನ್ನಬೇಕು ತಿನ್ನಬಾರದು ಮತ್ತು ಯಾಕಾಗಿ ತಿನ್ನುತ್ತಿದ್ದೇನೆ ಎಂಬುದರ ಪರಿಜ್ಞಾನ ಪ್ರತಿಯೊಬ್ಬರಿಗೂ ಇದ್ದಲ್ಲಿ, ಬಹುತೇಕ ರೋಗಗಳನ್ನು ತಡೆಗಟ್ಟಬಹುದು. ಈ ಕಾರಣಕ್ಕಾಗಿಯೇ ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಗಾದೆ ಹುಟ್ಟಿಕೊಂಡಿದೆ ಎಂದರೂ ತಪ್ಪಲ್ಲ. ಆದರೆ ವಿಪರ್ಯಾಸವೆಂದರೆ ಈಗೀನ ಯುವಜನತೆಯ ತಿನ್ನುವ ಪರಿ ನೋಡಿದರೆ ನಗುಬರುತ್ತದೆ ಮತ್ತು ಮರುಕವೂ ಉಂಟಾಗುತ್ತದೆ. ಕೋಕ್, ಪೆಪ್ಸಿ ಬರ್ಗರ್ ಫಿಜ್ಹಾಗಳನ್ನು ಯಾವ ಪರಿ ಹಟಕಟ್ಟಿ ತಿನ್ನುತ್ತಾರೆ ಎಂದರೆ ನಾಳೆ ನಾವು ತಿನ್ನಲು ಬದುಕಲ್ಲ ಎಂಬ ರೀತಿಯಲ್ಲಿ ತಿನ್ನುವುದನ್ನು ಕಂಡಾಗ ಸಹಜವಾಗಿಯೇ ಮರುಕ ಉಂಟಾಗುತ್ತದೆ. ಬದುಕು ಎನ್ನುವುದು ಕೇವಲ ತಿನ್ನುವ ಕಾಯಕವಾಗಬಾರದು. ತಿನ್ನುವಾಗ ನೂರು ಕಾಲ ಬದುಕುವುದಕ್ಕಾಗಿ ತಿನ್ನಬೇಕು ಮತ್ತು ದುಡಿಯುವಾಗ ನಾಳೆ ಸಾಯುತ್ತೇನೆ ಎಂದು ದುಡಿಯಬೇಕು. ಆದರೆ ವಿಪರ್ಯಾಸವೆಂದರೆ ಜನರು ನಾಳೆ ಸಾಯುತ್ತೇನೆ ಎಂದು ತಿಂದು ನೂರು ವರ್ಷಗಳ ಕಾಲ ಬದುಕುತ್ತೇನೆ ಎಂಬಂರ್ಥದಲ್ಲಿ ಬದುಕುತ್ತಾರೆ ಎಂಬುದೇ ಅರಗಿಸಿಕೊಳ್ಳಲಾಗದ ಕಹಿ ಸತ್ಯ ಸುಂದರ ಸುದೃಢ ಸಮಾಜದ ನಿರ್ಮಾಣಕ್ಕಾಗಿ ನಾವೆಲ್ಲರೂ ನಿಯಮಿತ ದೈಹಿಕ ವ್ಯಾಯಾಮದ ಜೊತೆಗೆ ಸುರಕ್ಷಿತ ಸಮತೋಲಿತ ಕೊಬ್ಬು ರಹಿತ ನಾರುಯುಕ್ತ ಮೂಲಾಹಾರವನ್ನು ಹೆಚ್ಚು ಹೆಚ್ಚು ಸೇವಿಸೋಣ ಎಂದು ಇಂದೇ ಶಪಥ ಮಾಡೋಣ. ಹಾಗೆ ಮಾಡಿದಲ್ಲಿ ಮಾತ್ರ ವಿಶ್ವ ಆರೋಗ್ಯ ವಿನದ ಆಚರಣೆ ಹೆಚ್ಚಿನ ಮೌಲ್ಯ ಬಂದೀತು ಮತ್ತು ನೂರು ವರ್ಷಗಳ ಕಾಲ ಆರೋಗ್ಯವಂಥರಾಗಿ ಬದುಕಬಹುದು ಅದರಲ್ಲಿಯೇ ಸಮಾಜದ ಸ್ವಾಸ್ಥ್ಯವೂ ಅಡಗಿದೆ.

ಡಾ|| ಮುರಲೀ ಮೋಹನ್ ಚೂಂತಾರು