ಜಟ್ಟಿಪಳ್ಳ, ನಾವೂರು, ಬೋರುಗುಡ್ಡೆ ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ನಿವಾರಣೆ

0

ನ.ಪಂ., ವಾರ್ಡ್ ಸದಸ್ಯರ ಪರಿಶ್ರಮ – ಊರವರ ಸಹಕಾರ

ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ಜಟ್ಟಿಪಳ್ಳ, ನಾವೂರು, ಬೋರುಗುಡ್ಡೆ ಪರಿಸರದಲ್ಲಿ ಕಳೆದ ೨೦ ದಿನಗಳಿಂದ ಕಂಡು ಬಂದಿದ್ದ ನೀರಿನ ಸಮಸ್ಯೆ ನಿವಾರಣೆಯಾಗಿರುವುದಾಗಿ ತಿಳಿದು ಬಂದಿದೆ. ನಗರ ಪಂಚಾಯತ್ ಅಧಿಕಾರಿಗಳು, ಗುತ್ತಿಗೆದಾರರು ಹಾಗೂ ವಾರ್ಡ್ ಸದಸ್ಯರುಗಳಾದ ಉಮ್ಮರ್ ಕೆ.ಎಸ್., ಶರೀಫ್ ಕಂಠಿಯವರ ಸತತ ಪ್ರಯತ್ನದ ಫಲವಾಗಿ ಮತ್ತು ಊರವರ ಸಹಕಾರದಿಂದ ಸದ್ಯಕ್ಕೆ ಸಮಸ್ಯೆ ಇತ್ಯರ್ಥ ಕಂಡಿರುವುದಾಗಿ ಹೇಳಲಾಗಿದೆ.


ಮಳೆ ಹೆಚ್ಚಾಗಿ ಬಂದು ಹೊಳೆಯಲ್ಲಿ ಕೆಸರು ಮಿಶ್ರಿತ ಹರಿಯುತ್ತಿತ್ತು. ನ.ಪಂ. ವತಿಯಿಂದ ವಾರ್ಡ್ ವ್ಯಾಪ್ತಿಯಲ್ಲಿ ಸರಬರಾಜಾಗುತ್ತಿದ್ದ ನೀರು ಇದೇ ಆಗಿದ್ದರಿಂದ ಪೈಪ್‌ಗಳಲ್ಲಿ ಕೆಸರು ನೀರು ಹರಿದು, ಕೆಲವು ಕಡೆ ಕೆಸರು ಗಟ್ಟಿಯಾಗಿ ನಿಂತು ಕೆಲವೆಡೆ ಬ್ಲಾಕ್ ಆಗಿ ನೀರು ಮನೆಗಳಿಗೆ ಹೋಗುತ್ತಿರಲಿಲ್ಲ. ಇದು ಹೆಚ್ಚಾಗಿ ಸುಳ್ಯದ ಜಟ್ಟಿಪಳ್ಳ, ನಾವೂರು ಹಾಗೂ ಬೋರುಗುಡ್ಡೆ ವಾರ್ಡ್‌ನಲ್ಲಿ ಕಂಡು ಬಂದಿತ್ತು. ಆ ಭಾಗದ ವಾರ್ಡ್ ಸದಸ್ಯರು ಟ್ಯಾಂಕರ್ ಮೂಲಕ ನೀರಿಲ್ಲದ ಮನೆಯವರಿಗೆ ನೀರು ಕೊಡುವ ವ್ಯವಸ್ಥೆ ಮಾಡಿದ್ದರು. ಆದರೆ ಸಮಸ್ಯೆ ಎಲ್ಲಿ ಎಂದು ಗೊತ್ತಾಗುತ್ತಿರಲಿಲ್ಲ. ಎಲ್ಲಿ ಅಗೆದರೂ ಬ್ಲಾಕ್ ಆದ ಜಾಗ ಸಿಗುತ್ತಿರಲಿಲ್ಲ. ಸತತ ಪ್ರಯತ್ನದ ಫಲವಾಗಿ ಇದೀಗ ಸಮಸ್ಯೆ ಇತ್ಯರ್ಥವಾಗಿ ಮೂರು ವಾರ್ಡ್‌ಗಳಲ್ಲಿಯೂ ಮನೆಗಳಿಗೆ ನೀರು ಸರಾಬರಾಜಗುತ್ತಿರುವುದಾಗಿ ತಿಳಿದು ಬಂದಿದೆ.


ಈ ಕುರಿತು ಸುದ್ದಿಗೆ ಪ್ರತಿಕ್ರಿಯೆ ನೀಡಿರುವ ನಾವೂರು ವಾರ್ಡ್ ಸದಸ್ಯ ಶರೀಫ್ ಕಂಠಿಯವರು, ೧೫ – ೨೦ ದಿನಗಳಿಂದ ಜಟ್ಟಿಪಳ್ಳ, ನಾವೂರು, ಬೋರುಗುಡ್ಡೆ ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಎದುರಾಗಿತ್ತು. ಪೈಪ್‌ಗಳಲ್ಲಿ ಕೆಸರು ತುಂಬಿ ಕೆಲವು ಕಡೆ ಬ್ಲಾಕ್ ಆಗಿತ್ತು. ನ.ಪಂ. ಅಧಿಕಾರಿಗಳು, ಬೋರುಗುಡ್ಡೆ ವಾರ್ಡ್ ಸದಸ್ಯ ಉಮ್ಮರ್ ಕೆ.ಎಸ್. ಹಾಗೂ ನಾವು ಸೇರಿಕೊಂಡು ಹಾಗೂ ಗುತ್ತಿಗೆದಾರರ ಸಹಕಾರದಿಂದ ಬ್ಲಾಕ್ ಆಗಿರುವ ಸ್ಥಳದಲ್ಲಿ ಸತತವಾಗಿ ಕೆಲಸ ನಿರ್ವಹಿಸಿ ಇದೀಗ ಸರಿಪಡಿಸಲಾದ್ದು, ಇದೀಗ ಸಮಸ್ಯೆ ಇತ್ಯರ್ಥವಾಗಿದೆ. ಊರವರು ಸಹಕಾರ ನೀಡಿದ್ದಾರೆ. ಮುಂದೆ ನೀರಿನ ಸಮಸ್ಯೆ ಕಂಡು ಬಂದರೆ ನಮಗೆ ತಿಳಿಸಬಹುದು” ಎಂದು ಅವರು ಹೇಳಿದ್ದಾರೆ.