ಸಂಪಾಜೆ: ರಾಜಾರಾಂಪುರದಲ್ಲಿ ಮುಚ್ಚಿದ ಸ್ಥಳದಲ್ಲಿ ಮತ್ತೆ ಬಾಯ್ದೆರೆದ ಹೊಂಡ

0

ದ.ಕ. ಸಂಪಾಜೆ ಗ್ರಾಮದ ದೊಡ್ಡಡ್ಕದ ರಾಜಾರಾಂಪುರ ಪರಿಶಿಷ್ಟ ಜಾತಿ ಕಾಲನಿಯ ಮನೆಯ ಬಳಿ ಬಾರೀ ಮಳೆಗೆ ಬೃಹದಾಕಾರದ ಗುಂಡಿ ನಿರ್ಮಾಣವಾಗಿದ್ದು, ಗ್ರಾಮ ಪಂಚಾಯತಿ ವತಿಯಿಂದ ಜೆಸಿಬಿ ಮೂಲಕ ಜು.16ರಂದು ಮುಚ್ಚಲಾಗಿತ್ತು. ಆದರೆ ಹೊಂಡ ಮುಚ್ಚಿದ ಮರುದಿನ ಮತ್ತದೇ ಸ್ಥಳದಲ್ಲಿ ಹೊಂಡ ನಿರ್ಮಾಣವಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ರಾಜಾರಾಂಪುರ ಪರಿಶಿಷ್ಟ ಜಾತಿ ಕಾಲನಿ ನಿವಾಸಿ ಅಂಗವಿಕಲರಾಗಿರುವ ಬಾಲಪ್ಪ ಅವರ ಮನೆಯ ಪಕ್ಕದಲ್ಲಿ ಬೃಹತ್ ಹೊಂಡ ನಿರ್ಮಾಣವಾಗಿತ್ತು. ವಿಷಯ ತಿಳಿದ ಸಂಪಾಜೆ ಗ್ರಾ.ಪಂ. ವತಿಯಿಂದ ಜೆಸಿಬಿ ಮೂಲಕ ಮುಚ್ಚುವ ಕೆಲಸವನ್ನು ಜು.16ರಂದು ಮಾಡಲಾಗಿತ್ತು.

ಆದರೆ ಜು.17ರಂದು ಬೆಳಗ್ಗಿನ ಜಾವ ಮತ್ತದೇ ಸ್ಥಳದಲ್ಲಿ ಹೊಂಡ ನಿರ್ಮಾಣವಾಗಿದ್ದು, ಸ್ಥಳೀಯ ನಿವಾಸಿಗಳಿಗೆ ಆತಂಕ ಎದುರಾಗಿದೆ. ಸದ್ಯ ಬಾಲಪ್ಪ ಅವರ ಕುಟುಂಬ ಸಮೀಪದ ಸಂಬಂಧಿಕರ ಮನೆಗೆ ಸ್ಥಳಾಂತರಗೊಂಡಿದ್ದು, ಮತ್ತೆ ಗ್ರಾ.ಪಂ. ವತಿಯಿಂದ ಗುಂಡಿ ಮುಚ್ಚುವ ಕಾರ್ಯ ಮಾಡುವುದಾಗಿ ತಿಳಿದುಬಂದಿದೆ.