ಸಂಪಾಜೆ: ಸರತಿ ಸಾಲಿನಲ್ಲಿ ನಿಂತಿದ್ದ ಲಘುವಾಹನ ಬೆಳಿಗ್ಗೆ ಮೂರು ಗಂಟೆ ಬಳಿಕ ಹಾಗೂ ಘನ ವಾಹನಗಳನ್ನು ಆರು ಗಂಟೆಗೆ ಬಿಟ್ಟ ಪೊಲೀಸರು

0

ಸಂಪಾಜೆಯಿಂದ ಕಲ್ಲುಗುಂಡಿ ತನಕ ಸರತಿ ಸಾಲಿನಲ್ಲಿ ನಿಂತಿದ್ದ ವಾಹನಗಳು

ಸಂಪಾಜೆ – ಮಡಿಕೇರಿ ರಸ್ತೆಯಲ್ಲಿ ಗುಡ್ಡ ಕುಸಿಯುವ ಭೀತಿಯಿಂದ ರಾತ್ರಿಯ ವೇಳೆ ಸಂಚಾರ ಸ್ಥಗಿತಗೊಳಿಸಲಾಗಿದ್ದು, ಜು.18ರಂದು ರಾತ್ರಿ ಸಂಪಾಜೆ ಅರಣ್ಯ ತಪಾಸಣಾ ಚೆಕ್ ಪೋಸ್ಟ್ ಬಳಿ ಬಂದು ಸರತಿ ಸಾಲಿನಲ್ಲಿ ನಿಂತಿದ್ದ ವಾಹನಗಳ ಪೈಕಿ ಲಘು ವಾಹನಗಳನ್ನು ಜು.19ರಂದು ಬೆಳಗ್ಗಿನ ಜಾವ ಮೂರು ಗಂಟೆಯ ಬಳಿಕ ಹಾಗೂ ಘನ ವಾಹನಗಳನ್ನು ಬೆಳಿಗ್ಗೆ ಆರು ಗಂಟೆಯ ಬಳಿಕ ಬಿಟ್ಟು ಕಳುಹಿಸಲಾಗಿರುವುದಾಗಿ ತಿಳಿದುಬಂದಿದೆ.

ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮದೆನಾಡಿನ ಕರ್ತೋಜಿ ಎಂಬಲ್ಲಿ ರಸ್ತೆಯಲ್ಲಿ ಬಿರುಕು ಕಾಣಿಸಿದ್ದು, ಪಕ್ಕದ ಗುಡ್ಡದಿಂದ ಮಣ್ಣು ಕುಸಿದು ರಸ್ತೆಗೆ ಬರುತ್ತಿರುವ ಹಿನ್ನೆಲೆಯಲ್ಲಿ ಸಂಪಾಜೆ – ಮಡಿಕೇರಿ ರಸ್ತೆಯಲ್ಲಿ ಜು.18ರಿಂದ ಜು. 22ರವರೆಗೆ ರಾತ್ರಿ 8ರಿಂದ ಬೆಳಿಗ್ಗೆ 6ರ ತನಕ ಸಂಚಾರ ಸ್ಥಗಿತಗೊಳಿಸಿ ಕೊಡಗು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು.


ಏಕಾಏಕಿಯಾಗಿ ರಸ್ತೆ ಬಂದ್ ಮಾಡಿರುವ ಬಗ್ಗೆ ಗಮನಕ್ಕೆ ಬಾರದೆ ಮಂಗಳೂರು – ಪುತ್ತೂರು ಹಾಗೂ ಕಾಸರಗೋಡು ಕಡೆಯಿಂದ ಮಡಿಕೇರಿ ಕಡೆಗೆ ತೆರಳುವ ಪ್ರಯಾಣಿಕರು ರಾತ್ರಿಯ ವೇಳೆ ಸಂಪಾಜೆ ಅರಣ್ಯ ತಪಾಸಣಾ ಚೆಕ್ ಪೋಸ್ಟ್ ಬಳಿ ಬಂದಾಗ ಪೊಲೀಸರು ವಾಹನಗಳನ್ನು ತಡೆದು ನಿಲ್ಲಿಸಿದ್ದು, ಕಲ್ಲುಗುಂಡಿ ಪೇಟೆಯ ತನಕ ರಾತ್ರಿಯ ವೇಳೆ ವಾಹನಗಳ ಸರತಿ ಸಾಲು ಇತ್ತೆಂದು ತಿಳಿದುಬಂದಿದೆ.


ಜು.19ರಂದು ಬೆಳಗ್ಗಿನ ಜಾವ ಮೂರು ಗಂಟೆ ವೇಳೆಗೆ ಸಂಪಾಜೆ ಪೊಲೀಸರು ದ್ವಿಚಕ್ರ ವಾಹನ ಸೇರಿದಂತೆ ಲಘು ವಾಹನಗಳನ್ನು ಬಿಟ್ಟು ಕಳಿಸಿದ್ದು, ಬೆಳಿಗ್ಗೆ ಆರು ಗಂಟೆಯ ಬಳಿಕ ಲಘು ವಾಹನಗಳನ್ನು ಬಿಟ್ಟು ಕಳುಹಿಸಿರುವುದಾಗಿ ತಿಳಿದುಬಂದಿದೆ.