ಸಿ.ಎಂ. ಸಿದ್ಧರಾಮಯ್ಯರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಹಿನ್ನಲೆ : ಸುಳ್ಯದಲ್ಲಿ ರಸ್ತೆ ತಡೆ ನಡೆಸಿ ಕಾಂಗ್ರೆಸ್ ಪ್ರತಿಭಟನೆ

0

ಬಿಜೆಪಿ ಏಜೆಂಟ್ ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳಲು ಕಾಂಗ್ರೆಸ್ ಆಗ್ರಹ

ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯರ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ಖಂಡಿಸಿರುವ ಸುಳ್ಯ ನಗರ ಕಾಂಗ್ರೆಸ್ ಘಟಕ ಸುಳ್ಯದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿತ್ತಲ್ಲದೆ, ಗೋ ಬ್ಯಾಕ್ ಗವರ್ನರ್ ಆಗ್ರಹ ಮಾಡಿದರು.
ಸಂಜೆ ೭ ಗಂಟೆ ಸುಮಾರಿಗೆ ಸುಳ್ಯ ಖಾಸಗಿ ಬಸ್ ನಿಲ್ದಾಣದ ರಸ್ತೆ ಬದಿಯಲ್ಲಿ ಸೇರಿದ ಕಾಂಗ್ರೆಸ್ ಕಾರ್ಯಕರ್ತರು, ರಾಜ್ಯ ಪಾಲರ ನಡೆಯನ್ನು ಖಂಡಿಸಿ ಧಿಕ್ಕಾರ ಕೂಗಿದರಲ್ಲದೆ, ಗೋ ಬ್ಯಾಕ್ ಗರ್ವನರ್ ಎಂದು ಘೋಷಣೆ ಕೂಗಿದರು.


ಪ್ರತಿಭಟನೆಯಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್. ಗಂಗಾಧರ್‌ರವರು, ರಾಜ್ಯದಲ್ಲಿ ಜನಪರವಾಗಿರುವ ಕಾಂಗ್ರೆಸ್ ಸರಕಾರವನ್ನು ಅಸ್ಥಿರಗೊಳಿಸುವ ನಿಟ್ಟಿನಲ್ಲಿ ಸಿ.ಎಂ. ಸಿದ್ಧರಾಮಯ್ಯರಿಗೆ ನೋಟೀಸ್ ನೀಡುವ ಮೂಲಕ ಕಾನೂನಿಗೆ ಗೌರವ ಇಲ್ಲದಂತೆ ಗವರ್ನರ್ ನಡೆದುಕೊಂಡಿದ್ದಾರೆ. ಇದನ್ನು ಕಾಂಗ್ರೆಸ್ ಖಂಡಿಸುತ್ತದೆ. ಕೆಲವು ತಿಂUಳ ಹಿಂದೆ ಹೆಚ್.ಡಿ.ಕುಮಾರಸ್ವಾಮಿ, ಜೊಲ್ಲೆ, ಜನಾರ್ಧನ ರೆಡ್ಡಿ, ಅದಾನಿಯವರ ವಿರುದ್ಧ ಪ್ರಾಸಿಕ್ಯೂಷನ್ ಅವಕಾಶ ಕೇಳಿದ್ದರೂ ಅವರ್‍ಯಾರಿಗೂ ನೋಟೀಸ್ ನೀಡದೆ, ಈಗ ಸಿದ್ಧರಾಮಯ್ಯರಿಗೆ ಮಾತ್ರ ಅನುಮತಿ ನೀಡಲಾಗಿದೆ. ಬಿಜೆಪಿ ರಾಜ್ಯಪಾಲರನ್ನು ಬಳಸಿ ಕುತಂತ್ರ ಮಾಡಲು ಹೊರಟಿರುವುದನ್ನು ಕಾಂಗ್ರೆಸ್ ಖಂಡಿಸುತ್ತದೆ. ರಾಜ್ಯ ಪಾಲರು ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ತೆರಳಬೇಕು ಎಂದು ಹೇಳಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ. ಶಹೀದ್ ತೆಕ್ಕಿಲ್ ಮಾತನಾಡಿ,ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಜನಪರ ಯೋಜನೆಯನ್ನು ಮಾಡಿದೆ. ಇದನ್ನು ಬಿಜೆಪಿಗರಿಗೆ ಸಹಿಸಲು ಸಾಧ್ಯವಾಗದೇ ಸರಕಾರದ ವಿರುದ್ಧ ಅಪಪ್ರಚಾರ ಮಾಡಿದರು. ಆ ಅಪಪ್ರಚಾರಕ್ಕೆ ಜನರು ಕಿವಿಗೊಡಲಿಲ್ಲ. ಈಗ ರಾಜ್ಯಪಾಲರನ್ನು ಬಳಸಿ ಈ ರೀತಿಯ ಕುತಂತ್ರ ಮಾಡಿದ್ದಾರೆ. ಬಿಜೆಪಿಗರು ಏನೇ ಮಾಡಿದರೂ ಸಿದ್ಧರಾಮಯ್ಯರನ್ನು ಅಲುಗಾಡಿಸಲು ಇವರಿಂದ ಆಗುವುದಿಲ್ಲ” ಎಂದು ಹೇಳಿದರು.
ಕೆಪಿಸಿಸಿ ಮಾಜಿ ಕಾರ್ಯದರ್ಶಿ ಹಾಗೂ ನ.ಪಂ. ಸದಸ್ಯಎಂ.ವೆಂಕಪ್ಪ ಗೌಡರು ಮಾತನಾಡಿ, ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಧೂಳಿಪಟವಾಗಿರುವುದನ್ನು ಬಿಜೆಪಿಗರಿಗೆ ಇನ್ನೂ ಸಹಿಸಲು ಆಗುತ್ತಿಲ್ಲ. ಈಗ ಎದುರಿನಿಂದ ಗುದ್ದಾಡಲು ಸಾಧ್ಯವಾಗದೇ ರಾಜ್ಯಪಾಲರನ್ನು ಬಳಸಿ ಹಿಂಬಾಗಿಲಿನಿಂದ ಕುತಂತ್ರಕ್ಕೆ ಬಿಜೆಪಿ ಇಳಿದಿದೆ. ಬಿಜೆಪಿ ಸರಕಾರದ ಅವಧಿಯಲ್ಲಿ ಅವರ ಮಂತ್ರಿಗಳ ವಿರುದ್ಧ ಲೋಕಾಯುಕ್ತ ಸಂಸ್ಥೆ ಪ್ರಾಷಿಕ್ಯೂಷನ್‌ಗೆ ಅವಕಾಶ ಕೇಳಿದಾಗ, ರಾಜ್ಯಪಾಲರು ಅವಕಾಶ ನೀಡಿಲ್ಲ. ಈಗ ಹಾದಿ ಬೀದಿಯಲ್ಲಿ ಹೋಗುವವರು ಅರ್ಜಿ ಹಾಕಿದ ಕೂಡಲೇ ಅನುಮತಿ ನೀಡುತ್ತಾರೆಂದರೆ ರಾಜ್ಯಪಾಲರು ಬಿಜೆಪಿ ಏಜೆಂಟಲ್ಲದೆ ಮತ್ತೇನು?” ಎಂದು ಅವರು ಪ್ರಶ್ನಿಸಿದರು.
ಬಳಿಕ ರಸ್ತೆಗೆ ಬಂದ ಕಾಂಗ್ರೆಸ್ ಕಾರ್ಯಕರ್ತರು ರಸ್ತೆಯಲ್ಲಿ ಕುಳಿತು ಪ್ರತಿಭಟಿಸಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ. ಮುಸ್ತಫ, ನಗರ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ. ಶಶಿಧರ್, ಇಂಟೆಕ್ ಕಾಂಗ್ರೆಸ್ ಅಧ್ಯಕ್ಷ ಶಾಫಿ ಕುತ್ತಮೊಟ್ಟೆ, ಯೂತ್ ಕಾಂಗ್ರೆಸ್ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ನಗರ ಪಂಚಾಯತ್ ಸದಸ್ಯರಾದ ಶರೀಫ್ ಕಂಠಿ, ಸಿದ್ದೀಕ್ ಕೊಕ್ಕೊ, ರಾಜು ಪಂಡಿತ್, ರಿಯಾಜ್ ಕಟ್ಟೆಕಾರ್, ಪ್ರಮುಖರಾದ ಸತ್ಯಕುಮಾರ್ ಆಡಿಂಜ, ಜಯಪ್ರಕಾಶ್ ನೆಕ್ರಪ್ಪಾಡಿ, ಧರ್ಮಪಾಲ ಕೊಯಿಂಗಾಜೆ, ಶಹೀದ್ ಪಾರೆ, ಭವಾನಿಶಂಕರ ಕಲ್ಮಡ್ಕ, ಚೇತನ್ ಕಜೆಗದ್ದೆ, ಐ.ಕೆ. ಇಕ್ಬಾಲ್ ಎಲಿಮಲೆ, ರಂಜಿತ್ ರೈ ಮೇನಾಲ, ರಾಹುಲ್ ಅಡ್ಪಂಗಾಯ, ನಂದರಾಜ ಸಂಕೇಶ, ರಾಧಾಕೃಷ್ಣ ಪರಿವಾರಕಾನ, ಚಂದ್ರಲಿಂಗಂ ಐವರ್ನಾಡು, ಭೋಜಪ್ಪ ನಾಯ್ಕ, ಜತ್ತಪ್ಪ ರೈ ಸುಳ್ಯ ಮೊದಲಾದವರಿದ್ದರು.