ಸರಕಾರಿ ಬಸ್ ಚಾಲಕನ ಮೇಲೆ ಕೈ ಮಾಡಿದ ಅರೆಕಾಲಿಕ ಅಧಿಕಾರಿ ಮೇಲೆ ಕೇಸು

0

ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲು

ನಿನ್ನೆ ಸವಣೂರು ಬಳಿ ನಡೆದಿದ್ದ ಘಟನೆ

ಹಲ್ಲೆ ಮಾಡಿದ್ದಾರೆ ಎನ್ನಲಾದ ವಿಡಿಯೋ ವೈರಲ್

ಬಸ್ಸನ್ಬು ಸ್ವಲ್ಪ ದೂರಕ್ಕೆ ಕೊಂಡೊಯ್ದು ನಿಲ್ಲಿಸಿದರೆಂಬ ಕಾರಣಕ್ಕಾಗಿ ಕೆ ಎಸ್ ಆರ್ ಟಿ ಸಿ ಬಸ್ ಚಾಲಕನ ಮೇಲೆ ಕೆಎಸ್ಆರ್ ಟಿಸಿ ಯಲ್ಲಿ ಅರೆಕಾಲಿಕ ಅಧಿಕಾರಿ ಯೊಬ್ಬರ ಮೇಲೆ ಬೆಳ್ಳಾರೆ ಪೋಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

ಕುದ್ಮಾರು ಕಡೆಯಿಂದ ಪುತ್ತೂರು ಕಡೆಗೆ ಹೋಗುತ್ತಿದ್ದ ಸರಕಾರಿ ಬಸ್ಸು ಸವಣೂರು ಬಳಿಯ ವಿದ್ಯಾರಶ್ಮಿ ವಿದ್ಯಾಸಂಸ್ಥೆಯ ಬಸ್ ನಿಲ್ದಾಣದ ಬಳಿಗೆ ಬರುವಾಗ ಬಸ್ ನಿಲ್ದಾಣಕ್ಕಿಂತ ಸ್ವಲ್ಪ ಮುಂದಕ್ಕೆ ಹೋಗಿ ಬಸ್ಸನ್ನು ಚಾಲಕ ಭರತ್ ನಿಲ್ಲಿಸಿದರೆನ್ನಲಾಗಿದೆ. ಅಲ್ಲಿಗೆ ಬಂದು ಬಸ್ ಹತ್ತಿದ ಕೆಎಸ್ ಆರ್ ಟಿಸಿ ಅಧಿಕಾರಿ ಎಂದು ಹೇಳಿಕೊಂಡ ವ್ಯಕ್ತಿ ಬಸ್ ನಿಲ್ದಾಣದೆದುರೇ ಬಸ್ ನಿಲ್ಲಿಸದಿದ್ದುದಕ್ಕೆ ಚಾಲಕನನ್ನು ತರಾಟೆಗೆತ್ತಿಕೊಂಡು ಬೈದರೆಂದೂ ಆಗ ಚಾಲಕ ಭರತ್ ಬಸ್ ನಿಲ್ಲಿಸಿ ಕೆಳಗಿಳಿದು ನಿಂತರೆಂದೂ, ಆಗ ಅಧಿಕಾರಿ ಎಂದು ಹೇಳಿಕೊಂಡ ಆ ವ್ಯಕ್ತಿ ಅಲ್ಲಿಗೆ ಬಂದು ಮತ್ತಷ್ಟು ತರಾಟೆಗೆತ್ತಿಕೊಂಡು ಚಾಲಕನ ಕುತ್ತಿಗೆಯ ಬಳಿಗೆ ಗುದ್ದಿದರೆಂದೂ ದೂರಲಾಗಿದೆ. ಆ ಬಳಿಕ ಬಸ್ ನಿರ್ವಾಹಕ ಮತ್ತು ಪ್ರಯಾಣಿಕರು ಮಧ್ಯಪ್ರವೇಶಿಸಿದ ಬಳಿಕ ಪುತ್ತೂರು ವರೆಗೆ ಬಸ್ ಚಲಾಯಿಸಿಕೊಂಡು ಬಂದ ಭರತ್ ಪುತ್ತೂರು ಆಸ್ಪತ್ರೆಗೆ ದಾಖಲಾಗಿ ಅಧಿಕಾರಿ ಎಂದು ಹೇಳಿಕೊಂಡ ನಾರಾಯಣ ಎಂಬವರ ಮೇಲೆ ಪೋಲೀಸ್ ದೂರು ನೀಡಿದರು.
ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಕೇಸನ್ನು ಪೋಲೀಸರು ನಾರಾಯಣರ ಮೇಲೆ ದಾಖಲಿಸಿದ್ದಾರೆ.

ನಾರಾಯಣರು ಚಾಲಕ ಭರತ್ ರೊಂದಿಗೆ ಬಸ್ಸಲ್ಲಿ ನಡೆಸಿದ ಚಕಮಕಿ ಹಾಗೂ ಬಳಿಕ ಆಸ್ಪತ್ರೆಗೆ ಬಂದ ಅಧಿಕಾರಿ ಆಸ್ಪತ್ರೆಯಲ್ಲೂ ಭರತ್ ಜೊತೆ ಮಾತಿನ ಚಕಮಕಿ ನಡೆಸುವ ವಿಡಿಯೋ ಕೂಡ ವೈರಲ್ ಆಗಿದೆ.

ಬಸ್ ಗೆ ಕೈ ಹಿಡಿಯದಿದ್ದರೆ, ಯುನಿಫಾರ್ಮ್ ನಲ್ಲಿಲ್ಲದಿದ್ದರೆ ಹೇಗೆ ನಾನು ಬಸ್ ನಿಲ್ಲಿಸುವುದು ಎಂದು ಭರತ್ ಅಧಿಕಾರಿಗಳನ್ನು ಪ್ರಶ್ನಿಸುತ್ತಿರುವುದು ವೀಡಿಯೋದಲ್ಲಿದೆ.

ಭರತ್ ರವರು ಉಪ್ಪಿನಂಗಡಿ ಕಡೆಯವರಾಗಿದ್ದು, ಗುತ್ತಿಗೆ ಆಧಾರದಲ್ಲಿ ಕೆಲಸಮಯದ ಹಿಂದೆ ಕೆ.ಎಸ್.ಆರ್.ಟಿ.ಸಿ.ಗೆ ಚಾಲಕನಾಗಿ ಸೇರಿದ್ದರು. ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಇವರು ದಾಖಲಾದಾಗ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ಚಾಲಕರು ಆಸ್ಪತ್ರೆ ಬಳಿ ಜಮಾವಣೆಗೊಂಡಿದ್ದರು.