ರಾಜ್ಯ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳ ತಾಲೂಕು ಮಟ್ಟದ ಸಭೆ ಮತ್ತು ಪ್ರಗತಿ ವರದಿ ಮಂಡನೆ

0

ಕರ್ನಾಟಕ ಸರಕಾರದ ಗ್ಯಾರಂಟಿ ಅನುಷ್ಠಾನ ಸಮಿತಿಯ ಸುಳ್ಯ ತಾಲೂಕು ಮಟ್ಟದ ಪ್ರಥಮ ಸಭೆ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ತಾಲೂಕು ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ ಯವರ ಅಧ್ಯಕ್ಷತೆಯಲ್ಲಿ ಆ.28ರಂದು ನಡೆಯಿತು.

ಗ್ಯಾರಂಟಿ ಅನುಷ್ಟಾನ ಸಮಿತಿಯ ಜಿಲ್ಲಾ ಅಧ್ಯಕ್ಷ ಭರತ್ ಮುಂಡೋಡಿ,ಜಿಲ್ಲಾ ಉಪಾಧ್ಯಕ್ಷ ಜಾಕಿಂ ಡಿಸೋಜ, ಜಿಲ್ಲಾ ಸಮಿತಿ ಸದಸ್ಯ ರಂಜಿತ್ ರೈ ಮೇನಾಲ, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸಮಿತಿಯ ಸದಸ್ಯ ಕಾರ್ಯದರ್ಶಿ ರಾಜಣ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಭೆಯ ಆರಂಭದಲ್ಲಿ ಮಾತನಾಡಿದ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ರವರ ಮಹತ್ಕಾಂಕ್ಷಿ ಯೋಜನೆಯಾಗಿದೆ ಈ ಪಂಚ ಗ್ಯಾರೆಂಟಿ ಯೋಜನೆ. ಆದ್ದರಿಂದ ಬಡವರಿಗಾಗಿ ಮಾಡಿರುವ ಈ ಯೋಜನೆ ಅರ್ಹರಾಗಿರುವ ಯಾರೂ ಕೂಡ ಗ್ಯಾರಂಟಿ ಯೋಜನೆಯ ಸೌಲಭ್ಯ ಸಿಗದೆ ವಂಚಿತರಾಗಬಾರದು.


ಕೆಲವು ಫಲಾನುಭವಿಗಳಿಗೆ ಯೋಜನೆ ಸಿಗದೆ ಸಮಸ್ಯೆ ಆಗಿದೆ. ಅದನ್ನು ಯಾವ ರೀತಿಯಲ್ಲಿ ಸರಿ ಪಡಿಸಬಹುದು ಮತ್ತು ಅವರಿಗೆ ಸಿಗದೇ ಇರಲು ಕಾರಣಗಳು ಏನು ಎಂಬ ಬಗ್ಗೆ ಅವರಿಗೆ ಮಾಹಿತಿ ನೀಡುವ ಕೆಲಸ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಮಿತಿಯ ಸದಸ್ಯರುಗಳಾದ ನಮ್ಮಿಂದ ಹಾಗಬೇಕಾಗಿದೆ.


ಇದುವರೆಗೆ ಕೇವಲ ಅಧಿಕಾರಿಗಳು ಮಾತ್ರ ಈ ಯೋಜನೆಯನ್ನು ಜನತೆಗೆ ತಲುಪಿಸುವಲ್ಲಿ ಬಹಳ ಶ್ರಮಪಟ್ಟು ಅವರ ಕೆಲಸವನ್ನು ಶೇಕಡಾ 93 ರಷ್ಟು ಮಾಡಿದ್ದಾರೆ.ಇದೀಗ ಅದಕ್ಕಾಗಿಯೇ ಸರಕಾರ ಸಮಿತಿ ರಚನೆ ಮಾಡಿದ್ದು ಮುಂದೆ ನಾವು ಸದಸ್ಯರುಗಳು ಹಾಗೂ ಅಧಿಕಾರಿಗಳು ಸೇರಿ ಯೋಜನೆ ಸಿಗದೇ ಇರುವ ಪಲಾನುಭವಿಗಳಿಗೆ ಸಿಗುವಂತೆ ಪ್ರಾಮಾಣಿಕ ಪ್ರಯತ್ನ ಮಾಡುವ ಎಂದರು.

ಸಭೆಯಲ್ಲಿ ಪಂಚ ಗ್ಯಾರಂಟಿಗಳಾದ ಗೃಹಲಕ್ಷ್ಮಿ,ಅನ್ನ ಭಾಗ್ಯ,ಗೃಹ ಜ್ಯೋತಿ, ಶಕ್ತಿ,ಯುವನಿಧಿ ಯೋಜನೆಗಳಿಗೆ ಸಂಭಂದಪಟ್ಟ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ, ಮೆಸ್ಕಾಂ ಇಲಾಖೆ, ಕೆ ಎಸ್ ಆರ್ ಟಿ ಸಿ ಸುಳ್ಯ ಘಟಕ, ಕೌಶಲ್ಯಾಭಿವೃಧಿ, ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆಯ ಅಧಿಕಾರಿಗಳು ಭಾಗವಹಿಸಿ ತಾಲೂಕು ಮಟ್ಟದ ಯೋಜನೆಯ ಪ್ರಗತಿ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಅಧಿಕಾರಿಗಳು ಹಾಗೂ ಸಮಿತಿಯ ಸದಸ್ಯರುಗಳು ಮಾತನಾಡಿ ಕೆಲವರಿಗೆ ಯೋಜನೆ ಸಿಗದೇ ಇರಲು ರೇಷನ್ ಕಾರ್ಡ್ ಅಪ್‌ಡೇಟ್ ಆಗದ ಕಾರಣ ಕೆಲವು ಕಡೆ ಸಮಸ್ಯೆ ಆಗಿದ್ದು ಹಳೆಯ ಕಾರ್ಡ್ ಅಪ್‌ಡೇಷನ್‌ ಆಗದೆ ಇರುವುದು, ಪಡಿತರ ತಿದ್ದುಪಡಿ ಬಾಕಿ ಆಗಿರುವುದು ಈ ಎಲ್ಲಾ ಸಮಸ್ಯೆಯಿಂದ ಎಂದು ತಿಳಿಸಿದರು.

ಇದಕ್ಕೆ ಉತ್ತರಿಸಿದ ತಾ. ಪಂ ಸಿ ಇ ಓ ರಾಜಣ್ಣ ಕೆಲವೊಂದು ತಾಂತ್ರಿಕ ಸಮಸ್ಯೆಯಿಂದ ಅವಕಾಶ ವಂಚಿತರಾಗಿರುವುದು ಕಂಡು ಬಂದಿದೆ. ಅಂತಹಾ ತಾಂತ್ರಿಕ ಸಮಸ್ಯೆ ಬಗ್ಗೆ ಗ್ರಾಮವಾರು ಪಟ್ಟಿ ಕೊಡಿ.ಏನೇನು ತಾಂತ್ರಿಕ ಸಮಸ್ಯೆ ಯಾರಿಗೆಲ್ಲಾ ಆಗಿದೆ ಎಂದು ವಿವರವಾದ ಪಟ್ಟಿ ಮಾಡಿ, ಮತ್ತು ತಮ್ಮ ತಮ್ಮ ಗ್ರಾಮಗಳ ಅಂಗನವಾಡಿ ಕೇಂದ್ರ, ವಾರ್ಡ್ ಸದಸ್ಯರುಗಳ, ಮಹಿಳಾ ಸಂಘಗಳ ಸಹಕಾರ ಪಡೆದು ಯೋಜನೆ ಸಿಗದೇ ಇರುವ ಮನೆಗಳ ಮತ್ತು ಪಲಾನುಭವಿಗಳ ಬಗ್ಗೆ ಮಾಹಿತಿ ಸಂಗ್ರಹಣೆ ಮಾಡಿ ನಮಗೆ ಕೊಡಿ. ಅದನ್ನು ತಾಲೂಕು ಸಮಿತಿ ಅಧ್ಯಕ್ಷರ ಜೊತೆ ಚರ್ಚಿಸಿ ಮೇಲಿನ ಅಧಿಕಾರಿಗಳ ಗಮನಕ್ಕೆ ನೀಡಿ ಪರಿಹರಿಸಲು ನಾವೆಲ್ಲರೂ ಕೂಡಿ ಕೆಲಸ ಮಾಡೋಣ ಎಂದು ಅವರು ಸಲಹೆ ನೀಡಿದರು.

ರೇಷನ್ ಕಾರ್ಡ್ ತಿದ್ದುಪಡಿ ಆಗಲು ಹಲವು ಕಾರ್ಡ್ ಬಾಕಿ ಇರುವ ಕಾರಣ ಹಲವು ಫಲಾನುಭವಿಗಳಿಗೆ ಸೌಲಭ್ಯ ಸಿಗ್ತಾ ಇಲ್ಲಾ ಎಂದು ಸದಸ್ಯರು ಸಭೆಯ ಗಮನಕ್ಕೆ ತಂದರು ರೇಷನ್ ಕಾರ್ಡ್ ತಿದ್ದುಪಡಿ ಶೀಘ್ರ ಮಾಡಲು ಸರಕಾರದ ಗಮನಕ್ಕೆ ತರಲಾಗುವುದು ಎಂದು ಭರತ್ ಮುಂಡೋಡಿ ಹೇಳಿದರು.

ಯೋಜನೆಯ ಕುರಿತು ಎಲ್ಲಾ ಮಾಹಿತಿಗಳನ್ನು ಜನರಿಗೆ ತಲುಪಿಸುವ ಕೆಲಸ ಸದಸ್ಯರು ಪರಿಣಾಮಕಾರಿಯಾಗಿ ಮಾಡಬೇಕು. ಮಾಹಿತಿ ಕೊರತೆಯಿಂದ ಹಿಂದೆ ಬಿದ್ದಿರುವ ಜನರಿಗೆ ಮಾಹಿತಿ ನೀಡಿ ಅಗತ್ಯ ನೆರವು ಒದಗಿಸಬೇಕು ಎಂದು ಅವರು ಸದಸ್ಯರಿಗೆ ಸೂಚಿಸಿದರು.

ಈ ವೇಳೆ ಸುಳ್ಯ ಆಹಾರ ಇಲಾಖೆ ಅಧಿಕಾರಿ ಮಾಹಿತಿ ನೀಡಿ ‘ಕೆಲವರ ಬಿಪಿಎಲ್‌ ಕಾರ್ಡ್‌ದಾರರನ್ನು ಆದಾಯ ತೆರಿಗೆ ಪಾವತಿದಾರರು ಎಂದು ದಾಖಲಾಗಿರುವ ಕಾರಣ ಸಮಸ್ಯೆ ಉಂಟಾಗಿದೆ. ಇದರಿಂದ ಫಲಾನುಭವಿಗಳು ಅವಕಾಶ ವಂಚಿತರಾಗಿದ್ದಾರೆ. ಒಂದು ಸಾವಿರ ರೂ ದಂಡ ಕಟ್ಟಿ ಪಾನ್ -ಆಧಾರ್ ಲಿಂಕ್ ಮಾಡಿದವರದ್ದು ಈ ರೀತಿ ಬಂದಿದೆ ಎಂದು ಹೇಳಿದರು.

ಇದಕ್ಕೆ ಉತ್ತರಿಸಿದ ಜಿಲ್ಲಾ ಸಮಿತಿ ಅಧ್ಯಕ್ಷರು ಈ ಕುರಿತು ವಿವರ ಕೊಡಿ ಸರಕಾರದ ಗಮನಕ್ಕೆ ತಂದು ಈ ತಾಂತ್ರಿಕ ಸಮಸ್ಯೆ ಪರಿಹರಿಸುವ ಪ್ರಯತ್ನ ನಡೆಸಲಾಗುವುದು ಎಂದು ಹೇಳಿದರು. ಫಲಾನುಭವಿಗಳು ಯಾವ ಕಾರಣಕ್ಕೆ ಯೋಜನೆಗಳಿಂದ ವಂಚಿತರಾಗಿದ್ದಾರೆ ಎಂಬುದರ ಕುರಿತು ಮಾಹಿತಿ ಫಲಾನುಭವಿಗಳಿಗೆ ನೀಡಬೇಕು ಎಂದು ಅವರು ಹೇಳಿದರು.

ಯುವನಿಧಿ ಯೋಜನೆಯ ಬಗ್ಗೆ ಸಂಬಂಧಪಟ್ಟ ಅಧಿಕಾರಿ ಮಾಹಿತಿ ನೀಡಿ ಸುಳ್ಯ ತಾಲೂಕಿನಲ್ಲಿ ಒಟ್ಟು 278 ಅರ್ಜಿಗಳು ಬಂದಿದ್ದು ಅದರಲ್ಲಿ 225ಫಲಾನುಭವಿಗಳು ಪ್ರಯೋಜನ ಪಡೆದು ಕೊಳ್ಳುತ್ತಿದ್ದಾರೆ ಎಂದರು. ದಾಖಲಾತಿಗೆ ಬಾಕಿ ಇರುವ ಮತ್ತು ವೆರಿಫಿಕೇಷನ್‌ಗೆ ಬಾಕಿ ಇರುವ ಬಗ್ಗೆ ಪಟ್ಟಿ ನೀಡಬೇಕು ಎಂದು ಅವರು ಹೇಳಿದರು.

ಈ ವೇಳೆ ಸಿ ಈ ಓ ರಾಜಣ್ಣ ಯುವ ನಿಧಿ ದಾಖಲಾತಿಯ ಪ್ರಗತಿ ತೃಪ್ತಿದಾಯಕವಾಗಿಲ್ಲ.ಸುಳ್ಯ ತಾಲೂಕಿನಲ್ಲಿ ಎಷ್ಟೋ ಮಂದಿ ಪದವೀಧರರು ಕೆಲಸವಿಲ್ಲದೆ ತಮ್ಮ ತಮ್ಮ ಕೃಷಿ ತೋಟದಲ್ಲಿ ದುಡಿಯುತ್ತಿದ್ದು ಅವರನ್ನು ರೈತರ ಪಟ್ಟಿಗೆ ಸೇರಿಸುವುದು ಸರಿಯಲ್ಲ. ಸರಕಾರದ ಯುವನಿಧಿ ಯೋಜನೆ ಅವರಿಗೆ ಸಿಗುವಂತೆ ನಾವು ಮಾಡ ಬೇಕು ಎಂದರು. ದಾಖಲಾತಿ ಮತ್ತು ವೆರಿಫಿಕೇಶನ್ ಮಾಡಬೇಕು. ವೆರಿಫಿಕೇಷನ್ ಮಾಡಲು ಮಂಗಳೂರು ಹೋಗಲು ಕಷ್ಟ ಆದ್ದರಿಂದ ಪಟ್ಟಿ ಪಲಾನುಭವಿಗಳ ಪಟ್ಟಿ ತಯಾರು ಮಾಡಿ ಸಂಭಂದಪಟ್ಟ ಹಿರಿಯ ಅಧಿಕಾರಿಗಳನ್ನು ಸುಳ್ಯಕ್ಕೆ ಕರೆ ತರುವ ವ್ಯವಸ್ಥೆ ನಾವು ಮಾಡುತ್ತೇವೆ ಎಂದು ಜಿಲ್ಲಾ ಅಧ್ಯಕ್ಷ ಭರತ್ ಮುಂಡೋಡಿ ಹೇಳಿದರು.

ತಾಲೂಕು ಅಧ್ಯಕ್ಷ ಶಾಹುಲ್‌ ಹಮೀದ್ ಮಾತನಾಡಿ ತಾಲೂಕು ಅನುಷ್ಠಾನ ಸಮಿತಿ ಮುಂದಿನ ದಿನಗಳಲ್ಲಿ ಉತ್ತಮ ಕೆಲಸ ಮಾಡಬೇಕು. ಯುವನಿಧಿ ಯೋಜನೆ ಹೊರತು ಪಡಿಸಿ ಬಾಕಿ ಎಲ್ಲಾ ಯೋಜನೆಗಳು ಜನರಿಗೆ ಬಹುತೇಕ ತಲುಪಿದೆ ಎಂದರು.

ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣ ಸ್ವಾಗತಿಸಿ, ವಂದಿಸಿದರು.

ಸಭೆಯಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಸುಳ್ಯ ತಾಲೂಕು ಸಮಿತಿ ಸದಸ್ಯರುಗಳಾದ ರವಿ ಗುಂಡಡ್ಕ, ಭವಾನಿ ಶಂಕರ್ ಕಲ್ಮಡ್ಕ, ವಿಜೇಶ್ ಹಿರಿಯಡ್ಕ, ಕಾಂತಿ ಬಿ ಎಸ್, ಭವಾನಿ ಬೊಮ್ಮೆಟ್ಟಿ,ಸೋಮಶೇಖರ್ ಕೇವಳ, ರಾಜು ನೆಲ್ಲಿಕುಮೇರಿ, ಅಬ್ಬಾಸ್ ಅಡ್ಕ, ಈಶ್ವರ ಅಳ್ವ, ಮಣಿಕಂಠ, ಶೇಕರ ಮಣಿಯಾಣಿ, ಶಿಲ್ಪಾ ಇಬ್ರಾಹಿಂ, ಧನುಷ್ ಕುಕ್ಕೇಟಿ, ಹಾಗೂ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ ಸಿ ಜಯರಾಮ್, ಕಾರ್ಯದರ್ಶಿ ಪಿ ಎಸ್ ಗಂಗಾಧರ್, ಇಂಟೆಕ್ ಅಧ್ಯಕ್ಷ ಶಾಫಿ ಕುತ್ತಮಟ್ಟೆ, ನ. ಪಂ ಸದಸ್ಯರುಗಳಾದ ಧೀರ ಕ್ರಾಸ್ತ, ಶರೀಫ್ ಕಂಠಿ, ರಾಜು ಪಂಡಿತ್,ಹಾಗೂ ಮುಖಂಡರುಗಳಾದ ತೀರ್ಥರಾಮ ಜಾಲ್ಸೂರು ಇನ್ನಿತರರು ಉಪಸ್ಥಿತರಿದ್ದರು.