ವಳಲಂಬೆಯಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ

0

ಧಾರ್ಮಿಕ ಸಭೆ, ವೈಭವದ ಶೋಭಾಯಾತ್ರೆ

ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ ಸೆ.7 ಮತ್ತು ಸೆ‌8 ರಂದು 21 ನೇ ವರ್ಷದ ಶ್ರೀಗಣೇಶೋತ್ಸವ ನಡೆಯಿತು.

ಸೆ.7 ರ ಬೆಳಗ್ಗೆ ಗಣಪತಿ ಪ್ರತಿಷ್ಠೆ ನಡೆಯಿತು.
ಬಳಿಕ ಸಾಮೂಹಿಕ ಗಣಪತಿ ಹವನ, ಅಕ್ಷರಾಭ್ಯಾಸ ಮತ್ತು ಮಕ್ಕಳಿಗೆ ಕಿವಿ ಚುಚ್ಚುವುದು ಕಾರ್ಯಕ್ರಮ ಜರುಗಿತು.

ಅಂದು ಸಾರ್ವಜನಿಕ ಪುರುಷರಿಗೆ, ಮಹಿಳೆಯರಿಗೆ,
ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ, ಅಂಗನವಾಡಿ ಮತ್ತು ಎಲ್. ಕೆ. ಜಿ ಯು. ಕೆ. ಜಿ ಮಕ್ಕಳಿಗೆ, 60 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಹೀಗೆ ವಿವಿಧ ಸ್ಪರ್ಧೆಗಳು ಜರಗಿತು. ಸಂಜೆ
ಶ್ರೀ ಶಂಖಪಾಲ ಭಜನಾ ಸೇವಾ ಸಮಿತಿ ವಳಲಂಬೆ ಹಾಗೂ
ಶ್ರೀ ಕೃಷ್ಣ ಭಜನಾ ಮಂಡಳಿ ಗುತ್ತಿಗಾರು ಇವರಿಂದ
ಭಜನಾ ಕಾರ್ಯಕ್ರಮ ಜರುಗಿತು. ಬಳಿಕ
ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ವಿನೋದಾವಳಿಗಳು ನಡೆಯಿತು.


ರಾತ್ರಿ ಸಭಾ ಕಾರ್ಯಕ್ರಮ,
ಧಾರ್ಮಿಕ ಉಪನ್ಯಾಸ,
“ಸಾಂಸ್ಕೃತಿಕ ನೃತ್ಯ ವೈಭವ ನಡೆಯಿತು. ಸಾರ್ವಜನಿಕರಿಗೆ ನಡೆದ ಮುಕ್ತ ಕಬಡ್ಡಿ ಪಂದ್ಯಾಟದಲ್ಲಿ ಸಪ್ತರ್ಷಿ ಗುತ್ತಿಗಾರು ಬಿ ಪ್ರಥಮ ಸ್ಥಾನ ಹಾಗೂ ಸರ್ಪರ್ಷಿ ಎ ಗುತ್ತಿಗಾರು ದ್ವಿತೀಯ ಸ್ಥಾನ ಪಡೆಯಿತು.

ವೈಭವದ ಶೋಭಾಯಾತ್ರೆ

ಸೆ.8 ರಂದು ಗಣೇಶನ ವೈಭವದ
ಶೋಭಾಯಾತ್ರೆ ಅಪರಾಹ್ನ ನಡೆಯಿತು. ಸಾವಿರದ ಐದು ನೂರಕ್ಕೂ ಅಧಿಕ ಮಂದಿ ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಶೋಬಾಯಾತ್ರೆಯುದ್ದಕ್ಕೂ ಕುಣಿತ ಭಜನೆ,ಟ್ಯಾಬ್ಲೋಗಳು, ನಾಸಿಕ್ ಬ್ಯಾಂಡ್, ಹುಲಿ ವೇಷಗಳಿದ್ದವು. ಗುತ್ತಿಗಾರು ಪೇಟೆಗೆ ತೆರಳಿ ವಾಪಾಸು ಬಂದು ವಳಲಂಬೆ ನದಿಯಲ್ಲಿ ಗಣಪತಿ ದೇವರ ಮೂರ್ತಿಯನ್ನು ಜಲ ಸ್ತಂಭನ ಮಾಡಲಾಯಿತು.

ಹಿಂದೂ ಧರ್ಮದ ರಕ್ಷಣೆಗಾಗಿ ಜಾಗೃತ ಸಮಾಜ ನಿರ್ಮಿಸಬೇಕಿದೆ – ಶಿವಪ್ರಸಾದ್ ಮಲೆಬೆಟ್ಟು

ಬ್ರಿಟಿಷರ ಒಡೆದು ಆಳುವ ನೀತಿಯ ವಿರುದ್ಧ ಹಿಂದೂ ಸಮಾಜ ಸಂಘಟಿತವಾಗಲೂ ಗಣೇಶೋತ್ಸವ ಆಚರಣೆಯನ್ನು ತಿಲಕ್ ರವರು ಆರಂಭಿಸಿದಂತೆ ಇಂದು ನಾವೆಲ್ಲರೂ ಒಗ್ಗಟ್ಟಾಗಿ ಹಿಂದೂ ಧರ್ಮದ ರಕ್ಷಣೆಗಾಗಿ ಜಾಗೃತ ಸಮಾಜ ನಿರ್ಮಿಸಬೇಕಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ವಿಭಾಗದ ಸಾಮರಸ್ಯ ಸಹ ಸಂಯೋಜಕರಾದ ಶಿವಪ್ರಸಾದ್ ಮಲೆಬೆಟ್ಟು ಹೇಳಿದರು.

ಅವರು ವಳಲಂಬೆಯಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು. ಸಮಾಜದಲ್ಲಿ ಮೇಲು ಕೀಳು ಎಂಬ ‌ಭೇಧ ಕಳೆದು ನಾವೆಲ್ಲ ಹಿಂದು ನಾವೆಲ್ಲ ಬಂಧು ಎನ್ನುವ ಭಾವನೆ ಜಾಗೃತವಾಗಬೇಕಾಗಿದೆ. ಬ್ರಿಟಿಷರ ಒಡೆದು ಆಳುವ ನೀತಿಯಿಂದ ಸಮಾಜವನ್ನು ಒಗ್ಗೂಡಿಸುವ ಸಲುವಾಗಿ ಗಣೇಶ ಚತುರ್ಥಿ ಆಚರಣೆ ತಿಲಕರು ಪ್ರಾರಂಭಿಸಿದರು. ಅವರ ದೂರದೃಷ್ಟಿ ಸಾಕಾರವಾಗಬೇಕಾದರೆ ನಾವೆಲ್ಲ ಒಗ್ಗಟ್ಟಾಗಿ ಸಮಾಜವನ್ನು ಒಗ್ಗೂಡಿಸುವ ಜಾಗೃತಿ ಮೂಡಿಸುವ ಕೆಲಸ ಆಗಬೇಕಾಗಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ಪರಿವಾರ ಸಂಘಟನೆಗಳು ಅಹರ್ನಿಶಿ ಕೆಲಸ ಮಾಡುತ್ತಿವೆ.
ಭಾರತೀಯ ಸಂಸ್ಕೃತಿ ಅನೇಕ ದಾಳಿಗಳ ಬಳಿಕವೂ ಜೀವಂತವಾಗಿ ಉಳಿಯಲು ಕಾರಣ ನಮ್ಮ ಧಾರ್ಮಿಕ ತಳಹದಿ. ಆದರೆ ಇಂದು ನಮ್ಮ ಮನೆಗಳಲ್ಲಿ ಸಂಸ್ಕಾರದ ಕೊರತೆಯಾಗುತ್ತಿದೆ ಅದರಿಂದಾಗಿ ಲವ್ ಜಿಹಾದ್, ಮುಖಾಂತರ ಮುಂತಾದ ದಾಳಿಗಳಾಗುತ್ತಿವೆ. ನಮ್ಮ ಹಬ್ಬಗಳ ಆಚರಣೆಯ ಮೌಲ್ಯಗಳ ಬಗ್ಗೆ ನಮ್ಮ ಮಕ್ಕಳಿಗೆ ಶಿಕ್ಷಣ ನೀಡಬೇಕಾಗಿದೆ ಅದಕ್ಕೆ ಈ ಗಣೇಶ ಚತುರ್ಥಿ ಮುನ್ನುಡಿಯಾಗಲಿ ಎಂದರು.

ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಗಣೇಶೋತ್ಸವ ಸಮಿತಿ ಅಧ್ಯಕ್ಷ ಹರೀಶ್ಚಂದ್ರ ಕೇಪಳಕಜೆ ವಹಿಸಿದ್ದರು.
ಸಭೆಯಲ್ಲಿ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಕೆ.ಬೆಳ್ಯಪ್ಪ ಗೌಡ, ಗಣೇಶೋತ್ಸವ ಸಮಿತಿಯ ಸ್ಥಾಪಕಾಧ್ಯಕ್ಷ ವೆಂಕಟ್ ದಂಬೆಕೋಡಿ, ಗಣೇಶೋತ್ಸವ ಸಮಿತಿಯ ಮಾಜಿ ಆಧ್ಯಕ್ಷರಾದ ವೆಂಕಟ್ ವಳಲಂಬೆ, ಗೌರವಾಧ್ಯಕ್ಷ ದುರ್ಗೇಶ್ ಪಾರೆಪ್ಪಾಡಿ, ಪ್ರ.ಕಾರ್ಯದರ್ಶಿ ದಿಗಂತ್ ಕಡ್ತಲ್ ಕಜೆ ಉಪಸ್ಥಿತರಿದ್ದರು.

ದುರ್ಗೆಶ್ ಪಾರೆಪ್ಪಾಡಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಸಚಿನ್ ಮೊಟ್ಟೆಮನೆ ವಂದಿಸಿದರು. ಕಿಶೋರ್ ಕುಮಾರ್ ಪೈಕ ನಿರೂಪಿಸಿದರು.