ಸಾಮಾಜಿಕ ಜಾಲತಾಣದಲ್ಲಿ ವೈರಲ್ : ಸಂಪಾಜೆ ಗ್ರಾ.ಪಂ. ನ್ನು ಸಂಪರ್ಕಿಸಿದ ಶಾಲಾ ಆಡಳಿತ ಮಂಡಳಿ
ಶಾಲಾ ಪ್ರವಾಸದ ಸಂದರ್ಭದಲ್ಲಿ ಮಕ್ಕಳಿಗೆ ರಸ್ತೆಯ ಬದಿ ಆಹಾರ ನೀಡಿ, ಅದರ ಕಸವನ್ನು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ರಸ್ತೆ ಬದಿ ಎಸೆದು ಹೋದ ಹಾಗೂ ಇದರ ವಿಡೀಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ಆ ಶಾಲೆಯ ಆಡಳಿತ ಮಂಡಳಿಗೆ ತಿಳಿದು ಅವರು ಸಂಪಾಜೆ ಗ್ರಾ.ಪಂ. ನ್ನು ಸಂಪರ್ಕಿಸಿ ಎಸೆದ ಕಸವನ್ನು ಹೆಕ್ಕಿ, ದಂಡ ಪಾವತಿಸುವುದಾಗಿ ಹೇಳಿದ ಘಟನೆ ವರದಿಯಾಗಿದೆ.









ಡಿ.12ರಂದು ಬೆಳಗ್ಗೆ ಬೆಳ್ತಂಗಡಿ ತಾಲೂಕಿನ ಮುಂಡಾಜೆಯ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಸುಳ್ಯ – ಸಂಪಾಜೆ ಮಾರ್ಗವಾಗಿ ಪ್ರವಾಸಕ್ಕೆ ತೆರಳಿದ್ಧು. ಸಂಪಾಜೆಯ ಕಡಪಾಲ ಎಂಬಲ್ಲಿ ಬಸ್ ನಿಂತಿತು. ಅಲ್ಲಿ ಶಾಲಾ ವಿದ್ಯಾರ್ಥಿಗಳು – ಶಿಕ್ಷಕರು ತಿಂಡಿ ತಿಂದಿದ್ದಾರೆ. ಬಳಿಕ ಪ್ಲೇಟ್, ಪ್ಲಾಸ್ಟಿಕ್ ನ್ನು ರಸ್ತೆಯ ಬದಿಗೆ ಹಾಕಿದ್ದಾರೆ. ಇದನ್ನು ನೋಡಿದ ಸ್ಥಳೀಯರಾದ ಯಶೋಧರ ಎಂಬವರು ಅಲ್ಲಿಗೆ ಬಂದು ಇಲ್ಲಿ ಕಸ ಹಾಕುವುದು ಬೇಡ, ತೆಗೆಯಿರಿ ಎಂದು ಅಲ್ಲಿದ್ದ ಶಿಕ್ಷಕರಲ್ಲಿ ಹೇಳಿದಾಗ, ಅವರು ಕಸ ತೆಗೆಯದೇ ಬಸ್ ಏರಿ ಮುಂದಕ್ಕೆ ಹೋದರೆನ್ನಲಾಗಿದೆ. ಯಶೋಧರ ರು ಪ್ರವಾಸದ ಬಸ್ ಹಾಗೂ ಎಸೆದ ಕಸದ ವಿಡೀಯೋ ಮಾಡಿದರು. ವಿಷಯ ತಿಳಿದು ಗ್ರಾ.ಪಂ. ಮಾಜಿ ಅಧ್ಯಕ್ಷ ಜಿ.ಕೆ. ಹಮೀದ್ ಸ್ಥಳಕ್ಕೆ ಬಂದರು. ಬಳಿಕ ಪ್ರವಾಸದ ಬಸ್ ನ ವಿಡೀಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತು. ಜಿ.ಕೆ.ಹಮೀದ್ ರವರು ಶಿಕ್ಷಣ ಸಂಸ್ಥೆಯವರು ರಸ್ತೆ ಬದಿ ಕಸ ಎಸೆದಿರುವುದನ್ನು ಅಧಿಕಾರಿಗಳ ಗಮನಕ್ಕೆ ತಂದರು.
ವಿಡಿಯೋ ವೈರಲ್ ಆಗುತಿದ್ದಂತೆ ಆ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯವರು ಸಂಪಾಜೆ ಗ್ರಾಮ ಪಂಚಾಯತ್ ನವರನ್ನು ಸಂಪರ್ಕಿಸಿ, ನಾವು ಸೋಮವಾರ ಬರುತ್ತೇವೆ. ಆ ಕಸವನ್ನು ತೆಗೆಯುತ್ತೇವೆ ಹಾಗೂ ಪಂಚಾಯತ್ ನೀಡುವ ದಂಡ ಪಾವತಿಸುವುದಾಗಿ ತಿಳಿಸಿದ್ದಾರೆ ಎಂದು ಜಿ.ಕೆ. ಹಮೀದ್ ಸುದ್ದಿಗೆ ತಿಳಿಸಿದ್ದಾರೆ.










