ವಾಹನ ಢಿಕ್ಕಿ ಹೊಡೆದು ರಸ್ತೆ ಬದಿ ಬಿದ್ದಿದ್ದ ಹೋರಿಯನ್ನು ಸ್ಥಳೀಯರು ಹಾಗೂ ಅಡ್ಕಾರಿನ ಟೀಂ ಸ್ಕಂದ ಸದಸ್ಯರು ಸೇರಿ ಆರೈಕೆ ಮಾಡಿದ ಘಟನೆ ಜಾಲ್ಸೂರು ಗ್ರಾಮದ ಅಡ್ಕಾರಿನಿಂದ ವರದಿಯಾಗಿದೆ.
ಸೆ.16ರಂದು ರಾತ್ರಿ ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯ ಅಡ್ಕಾರಿನ ನಡುವಡ್ಕ ಬಳಿ ರಸ್ತೆ ದಾಟುತ್ತಿದ್ದ ಹೋರಿಗೆ ವಾಹನವೊಂದು ಢಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡು, ರಸ್ತೆ ಬದಿ ಬಿದ್ದಿತ್ತೆನ್ನಲಾಗಿದೆ.
ಇದನ್ನು ಗಮನಿಸಿದ ಸ್ಥಳೀಯ ಮನೆಯವರು ಜಾಲ್ಸೂರು ಗ್ರಾಮದ ಪಶುಸಕಿ ರಶ್ಮಿ ಕಾಳಮ್ಮನೆ ಅವರಿಗೆ ವಿಷಯ ತಿಳಿಸಿದ್ದು, ಅವರು ಸುಳ್ಯದ ಪಶುಪಾಲನಾ ಆಸ್ಪತ್ರೆಗೆ ವಿಷಯ ತಿಳಿಸಿದ್ದರು.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ವೈದ್ಯಾಧಿಕಾರಿ ಮತ್ತು ಸಿಬ್ಬಂದಿಗಳು ಸ್ಥಳೀಯರ ಸಹಕಾರದಿಂದ ಹೋರಿಗೆ ಚಿಕಿತ್ಸೆ ನೀಡಿದ್ದರು.
ಆದರೆ ಹೋರಿಗೆ ಯಾರೂ ವಾರೀಸುದಾರರಿಲ್ಲದ ಕಾರಣದಿಂದ ವಿಷಯ ತಿಳಿದ ಅಡ್ಕಾರಿನ ಟೀಮ್ ಸ್ಕಂದ ಸದಸ್ಯರು ಸೇರಿ ಲಾರಿಯ ಮೂಲಕ ಹೋರಿಯನ್ನು ಅಡ್ಕಾರಿನ ಟೀಮ್ ಸ್ಕಂದ ಮೈದಾನಕ್ಕೆ ಕರೆದೊಯ್ದು, ಅಲ್ಲಿ ತಾತ್ಕಾಲಿಕವಾಗಿ ಟರ್ಪಲ್ ಹಾಸಿ ಹೋರಿಗೆ ತಿನ್ನಲು ಹಾಗೂ ಕುಡಿಯಲು ಕೊಟ್ಟು ಆರೈಕೆ ಮಾಡುತ್ತಿದ್ದಾರೆ.
ಸದ್ಯ ಸುಳ್ಯದ ಪಶುಪಾಲನಾ ಆಸ್ಪತ್ರೆಯಿಂದ ವೈದ್ಯರು ಪ್ರತಿ ದಿನ ಆಗಮಿಸಿ ಹೋರಿಗೆ ಚಿಕಿತ್ಸೆ ನೀಡುತ್ತಿರುವುದಾಗಿ ತಿಳಿದುಬಂದಿದೆ.
ಈ ಸಂದರ್ಭದಲ್ಲಿ ಟೀಮ್ ಸ್ಕಂದ ತಂಡದ ಅಧ್ಯಕ್ಷ ತೀಕ್ಷಣ್ ಅಡ್ಕಾರು, ದಿನೇಶ್ ಅಡ್ಕಾರು, ಸತೀಶ್ ಅಡ್ಕಾರು, ತೀರ್ಥೇಶ್ ಅಡ್ಕಾರು, ಸತೀಶ್ ಪೂಜಾರಿ ಅಡ್ಕಾರು, ಉದಯ ಪೂಜಾರಿ ಅಡ್ಕಾರು, ಸ್ಥಳೀಯರಾದ ತಿರುಮಲೇಶ್ವರ ಕುತ್ಯಾಳ, ಗಣೇಶ್ ಕುತ್ಯಾಡಿ ಉಪಸ್ಥಿತರಿದ್ದರು.