ಮಡಪ್ಪಾಡಿ-ನಡುಬೆಟ್ಟು ಸಂಪೂರ್ಣ ಹದಗೆಟ್ಟ ರಸ್ತೆ

0

ರಸ್ತೆ ಸಂಪರ್ಕ ಸರಿ ಇಲ್ಲದೆ ಅನಾರೋಗ್ಯ ಬಾಧಿಸಿದ್ದ ವೃದ್ಧರೊಬ್ಬರನ್ನು ಕುರ್ಚಿಯಲ್ಲಿ ಕುಳ್ಳಿರಿಸಿ ಹೊತ್ತುಕೊಂಡು ಹೋದ ಘಟನೆ ಮಡಪ್ಪಾಡಿ ಗ್ರಾಮ ನಡುಬೆಟ್ಟು ಎಂಬಲ್ಲಿ ನಡೆದಿದೆ.

ಮಡಪ್ಪಾಡಿ ಗ್ರಾಮದ ನಡುಬೆಟ್ಟು ಭಾಗದಲ್ಲಿ ಸುಮಾರು ಹದಿನಾಲ್ಕು ಮನೆಗಳಿವೆ. ಆದರೆ ಆ ಭಾಗವನ್ನು ಸಂಪರ್ಕಿಸಲು ಕಚ್ಚಾ ರಸ್ತೆ ಇದ್ದು, ಅದು ಸಂಪೂರ್ಣ ಹದಗೆಟ್ಟಿದೆ. ಪರಿಣಾಮ ವಾಹನ ಸಂಚರಿಸಲು ಅಸಾಧ್ಯವಾಗಿದೆ. ಹೀಗಾಗಿ ವಾಹನದವರು ಬರಲು ಒಪ್ಪದ ಕಾರಣ ಅನಾರೋಗ್ಯ ಬಾಧಿತ ವೃದ್ಧರೊಬ್ಬರನ್ನು ಹೊತ್ತುಕೊಂಡು‌ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ.

ಈಗಿನ ಕಾಲದಲ್ಲಿ ಹೆಚ್ಚಾಗಿ ಎಲ್ಲಾ ಊರುಗಳಿಗೆ ರಸ್ತೆಗಳಿವೆ. ಮೂಲಭೂತ ಸೌಕರ್ಯಗಳಿವೆ. ಆದರೆ ಇಲ್ಲಿನ ಊರಿಗೆ ಹೆಸರಿಗಷ್ಟೇ ಒಂದು ರಸ್ತೆ ಇದೆ. ಈ ರಸ್ತೆಯಲ್ಲಿ ಕಡಿದಾದ ಜಾಗಗಳಲ್ಲಿ ದೊಡ್ಡ ದೊಡ್ಡ ಹೊಂಡ ಗುಂಡಿಗಳಾಗಿರುವ ಕಾರಣ ಬೇಸಿಗೆ ಕಾಲದಲ್ಲಿ ಮಾತ್ರ ಎಕ್ಸ್ಟ್ರಾ ಗೇರ್ ಇರುವ ಜೀಪು ಪಿಕಪ್ ಗಳು ಮಾತ್ರ ಕಷ್ಟದಲ್ಲಿ ಈ ರಸ್ತೆಯಲ್ಲಿ ಸಂಚರಿಸುತ್ತವೆ. ಅದರಲ್ಲೂ ಮಳೆಗಾಲದಲ್ಲಿ ಯಾವ ವಾಹನಗಳು ಕೂಡಾ ಸಂಚರಿದ ಪರಿಸ್ಥಿತಿ ಇದೆ.‌ ಹೀಗಾಗಿ ಎಲ್ಲಾ ರೀತಿಯ ಕೃಷಿ ಉತ್ಪನ್ನ ಮತ್ತು ಮನೆ ಸಾಮಗ್ರಿ ಗಳನ್ನು ಹೊತ್ತುಕೊಂಡು ಒಯ್ಯಬೇಕಾಗಿದೆ. ಇನ್ನು ಇಲ್ಲಿನ ನಿವಾಸಿಗಳ ದ್ವಿಚಕ್ರ ವಾಹನಗಳನ್ನು ಸುಮಾರು 2 ಕಿ.ಮೀ. ದೂರದ ಬೇರೆಯವರ ಮನೆಯ ಪಕ್ಕ ರಸ್ತೆಯಲ್ಲಿ ನಿಲ್ಲಿಸಿ ನಡೆದು ಕೊಂಡು ಹೋಗುವುದೇ ಅವರ ದಿನಚರಿ ಆಗಿದೆ.

ಇನ್ನು ಅಲ್ಲಿ ಯಾರಿಗಾದರೂ ಅಸೌಖ್ಯ ಬಾಧಿಸಿದರೆ ಅಂತಹವರನ್ನು ಹೊತ್ತುಕೊಂಡು ಹೋದ ಹಲವು ಘಟನೆ ಗಳಿವೆ. ಜನಪ್ರತಿನಿಧಿಗಳು ಚುನಾವಣಾ ಸಮಯದಲ್ಲಿ ಭರವಸೆ ನೀಡಿ ಹೋಗುತ್ತಾರೆ. ನಂತರ ಇವರ ಸಮಸ್ಯೆ ಕೇಳುವವರಿಲ್ಲ. ಇದಕ್ಕೆ ಸಂಬಂಧ ಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಇನ್ನಾದರೂ ಸ್ಪಂಧಿಸಿ ಸುಸಜ್ಜಿತ ರಸ್ತೆ ನಿರ್ಮಿಸಿಕೊಡಬೇಕೆಂದು ಈ ಭಾಗದವರ ಬೇಡಿಕೆಯಾಗಿದೆ.