ಕೊಡಿಯಾಲ ಗ್ರಾಮದ ಕಲ್ಲರ್ಪೆ ಎಂಬಲ್ಲಿ ಅ. 12 ರಂದು ರಾತ್ರಿ ವೃದ್ಧರೊಬ್ಬರು ತನ್ನ ತಮ್ಮನ ಪತ್ನಿ ಮಲಗಿದ್ದಲ್ಲಿಗೆ ಪೆಟ್ರೋಲ್ ಎರಚಿ ಬೆಂಕಿ ಕೊಟ್ಟ ಕಾರಣ ಶೇಕಡಾ 80 ರಷ್ಟು ಬೆಂದು ಹೋಗಿದ್ದ ಜಯಭಾರತಿ ( 56 ) ಎಂಬವರು ಇಂದು ಇದೀಗ ಮಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದುದಾಗಿ ಮಾಹಿತಿ ಬಂದಿದೆ.
ಕಲ್ಲರ್ಪೆಯ ಮನೆಯಲ್ಲಿದ್ದ ಜನಾರ್ದನ ನಾಯಕ್ ರವರು ಒಂದೂವರೆ ವರ್ಷದ ಹಿಂದೆ ನಿಧನರಾಗಿದ್ದರು. ಅವರ ಪತ್ನಿ ಜಯಭಾರತಿ ಮತ್ತು ಪುತ್ರ ಹಾಗೂ ಜನಾರ್ದನ ನಾಯಕ್ ರ ಅಣ್ಣ ಶಂಕರ ನಾಯಕ್ ಮನೆಯಲ್ಲಿರುತ್ತಿದ್ದರು. ಶಂಕರ ನಯಕ್ ರ ಪತ್ನಿ ಬಿಟ್ಟು ಹೋದ ಮೇಲೆ ಮನೆ ಬಿಟ್ಟು ಬೇರೆ ಊರಲ್ಲಿ ಕೆಲಸ ಮಾಡಿಕೊಂಡಿದ್ದ ಶಂಕರ ನಾಯಕ್ ಮೂರ್ನಾಲ್ಕು ವರ್ಷಗಳ ಹಿಂದೆ ಊರಿಗೆ ಹಿಂತಿರುಗಿ ಮನೆಯಲ್ಲಿ ನಿಂತಿದ್ದರು. ಅವರ ದೊಡ್ಡಣ್ಣ ಉಪೇಂದ್ರ ನಾಯಕ್ ರವರು ನಿಧನರಾಗಿದ್ದು ಅವರ ಮಕ್ಕಳು ಬೇರೆಡೆ ಇದ್ದಾರೆ. ಜಯಭಾರತಿಯವರ ಪುತ್ರ ಇತ್ತೀಚೆಗಷ್ಟೇ ವಿದೇಶಕ್ಕೆ ಹೋದುದರಿಂದ ಜಯಭಾರತಿ ಯವರು ಮತ್ತು ಶಂಕರ ನಾಯಕ್ ಮಾತ್ರ ಮನೆಯಲ್ಲಿದ್ದರು. ಪ್ಯಾರಲಿಸೀಸ್ ಅಟ್ಯಾಕ್ ಆಗಿ ಒಂದು ಕೈ ಮತ್ತು ಒಂದು ಕಾಲು ಪೂರ್ಣ ಹಿಡಿತದಲ್ಲಿರದ ಶಂಕರ ನಾಯಕ್ ರಿಗೆ ಹೊತ್ತು ಹೊತ್ತಿಗೆ ಊಟ, ಮದ್ದು ಕೊಡುತ್ತಿದ್ದರೂ, ವೃದ್ಧ ಶಂಕರ ನಾಯಕ್ ಜಯಭಾರತಿಯವರ ಮೇಲೆ ರೇಗಾಡುತ್ತಿದ್ದರಲ್ಲದೆ ಅವರನ್ನು ದ್ವೇಷಿಸುತ್ತಿದ್ದರೆನ್ನಲಾಗಿದೆ. ಅ.12
.ರಂದು ರಾತ್ರಿ ಒಳಗಿನ ಕೋಣೆಯಲ್ಲಿ ಮಲಗಿದ್ದ ಜಯಭಾರತಿಯವರ ಮೇಲೆ ಕಿಟಕಿಯ ಮೂಲಕ ಪೆಟ್ರೋಲ್ ಎರಚಿ ಲೈಟರ್ ಮೂಲಕ ಬೆಂಕಿ ಹಚ್ಚಿದ್ದರು. ತೀವ್ರ ಬೆಂದ ಗಾಯಕ್ಕೊಳಗಾದ ಜಯಭಾರತಿಯವರನ್ನು ಕೂಡಲೆ ಸುಳ್ಯ ಆಸ್ಪತ್ರೆಗೆ ತಂದು ಬಳಿಕ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಇಂದು ಸಂಜೆ ನಿಧನರಾದರೆಂದು ತಿಳಿದುಬಂದಿದೆ.