ಕೆ.ವಿ.ಜಿ ಮೆಡಿಕಲ್ ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮ ಅ. ೨೪ರಂದು ಕೆ.ವಿ.ಜಿ. ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವು ವಿದ್ಯಾರ್ಥಿನಿ ಶಮಾರವರ ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು.
ಇಎನ್‌ಟಿ ವಿಭಾಗ ಮುಖ್ಯಸ್ಥರಾದ ಡಾ. ರವಿಶಂಕರ್ ಎಸ್ ಸ್ವಾಗತಿಸಿದರು. ಮೆಡಿಕಲ್ ಕಾಲೇಜಿನ ಡೀನ್ ಡಾ. ನೀಲಾಂಬಿಕೈ ನಟರಾಜನ್ ಕಾಲೇಜಿನ ೨೦೨೩-೨೪ನೇ ಸಾಲಿನ ವರದಿ ವಾಚಿಸಿದರು. ಬಯೋಕೆಮೆಸ್ಟ್ರಿ ವಿಭಾಗದ ಸಹಪ್ರಾಧ್ಯಾಪಕಿ ಡಾ. ಶ್ರುತಿ ರೈ ಪಿ ಅತಿಥಿಗಳನ್ನು ಪರಿಚಯಿಸಿದರು. ಮುಖ್ಯ ಅತಿಥಿಯಾಗಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಡಾ. ಸಿ. ಓಬುಲ್ ರೆಡ್ಡಿ ಇವರು ಭಾಗವಹಿಸಿ, ವಿದ್ಯಾರ್ಥಿಗಳಿಗೆ ವೈದ್ಯಕೀಯ ಮೌಲ್ಯಗಳ ಬಗ್ಗೆ ತಿಳಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಮ್ಯಾಗಜಿನ್ ಬಿಡುಗಡೆಗೊಳಿಸಲಾಯಿತು.
ಶ್ರೀಮತಿ ಶೋಭಾ ಚಿದಾನಂದ, ಉಪಾಧ್ಯಕ್ಷರು ಎ.ಒ.ಎಲ್.ಇ ಸುಳ್ಯ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಶುಭ ಹಾರೈಸಿದರು. ಪದವಿ ಮತ್ತು ಸ್ನಾತಕೋತ್ತರ ವಿಭಾಗಗಳಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಬಯೋಕೆಮೆಸ್ಟ್ರಿ, ಅನಸ್ತೇಶಿಯಾ ಮತ್ತು ಓಬಿಜಿ ವಿಭಾಗಗಳಿಗೆ ವರ್ಷದ ಅತ್ಯುತ್ತಮ ವಿಭಾಗ ಗಳೆಂದು ಗೌರವಿಸಲಾಯಿತು.
ವೇದಿಕೆಯಲ್ಲಿ ಮೆಡಿಕಲ್ ಸುಪರಿಂಟೆಂಡೆಂಟ್ ಹಾಗೂ ಜನರಲ್ ಮೆಡಿಸಿನ್ ವಿಭಾಗದ ಪ್ರೊಫೆಸರ್ ಡಾ. ಸಿ. ರಾಮಚಂದ್ರ ಭಟ್, ಓಬಿಜಿ ವಿಭಾಗ ಮುಖ್ಯಸ್ಥರು ಹಾಗೂ ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ. ಗೀತ ದೊಪ್ಪ, ಎ.ಒ.ಎಲ್.ಇ ಜೊತೆ ಕಾರ್ಯದರ್ಶಿ ಶ್ರೀ. ಹೇಮನಾಥ ಕುರುಂಜಿ, ಇಎನ್‌ಟಿ ವಿಭಾಗ ಮುಖ್ಯಸ್ಥರು ಹಾಗೂ ವಿದ್ಯಾರ್ಥಿ ಸಂಘದ ಮುಖ್ಯ ಸಲಹೆಗಾರರಾದ ಡಾ. ರವಿಶಂಕರ್ ಎಸ್, ಜನರಲ್ ಸರ್ಜರಿ ವಿಭಾಗದ ಸಹಪ್ರಾಧ್ಯಾಪಕ ಹಾಗೂ ಸಾಂಸ್ಕೃತಿಕ ಸಂಘದ ಸಂಯೋಜಕರಾದ ಡಾ. ರಂಜಿತ್ ಕೆ.ಬಿ, ವಿದ್ಯಾರ್ಥಿ ನಾಯಕ ಅರ್ಜುನ್ ಗಿರೀಶ್ ಮತ್ತು ವಿದ್ಯಾರ್ಥಿ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಡಾ. ರಘುನಾರಾಯಣ ಹಾಗೂ ಹರ್ಷಿಣಿ ಕಾರ್ಯಕ್ರಮ ನಿರೂಪಿಸಿ, ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಚಿರಾಗ್ ಗೌಡ ವೈ.ಎಚ್ ವಂದಿಸಿದರು. ಕೊನೆಯಲ್ಲಿ ಭೋದಕ ವೃಂದ ಹಾಗೂ ವಿದ್ಯಾರ್ಥಿಗಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳು ನಡೆದವು.