ಅರೆಭಾಷೆ ಅಕಾಡೆಮಿ ಹೊಸ ಹೊಸ ಸಾಧ್ಯತೆಗಳನ್ನುಅನ್ವೇಷಣೆ ಮಾಡಬೇಕಿದೆ: ಸುಬ್ರಾಯ ಸಂಪಾಜೆ ಅಭಿಮತ
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಗ್ರಾಮ ಗೌಡ ಸಮಿತಿ ಬಂದಡ್ಕ ಇವರ ಸಹಕಾರದಲ್ಲಿ ಬಂದಡ್ಕದ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮಯೂರ ಮಂಟಪ ಸಭಾಭವನದಲ್ಲಿ ನಡೆದ ಅರೆಭಾಷೆ ಗಡಿನಾಡ ಉತ್ಸವ ಅ.೨೭ರಂದು ನಡೆಯಿತು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ ವಹಿಸಿದ್ದರು.
ಉದುಮ ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಎಚ್. ಕುಂಞಂಬು ದೀಪ ಪ್ರಜ್ವಲಿಸಿ ಮಾತನಾಡಿ, ಬಂದಡ್ಕ ಭಾಗದಲ್ಲಿ ಇಂತಹ ಉತ್ಸವ ನಡೆಸುತ್ತಿರುವುದು ಸಂತೋಷ. ಈ ಗಡಿಭಾಗದಲ್ಲಿ ಅರೆಭಾಷೆಯನ್ನು ಮಾತನಾಡುತ್ತಿದ್ದಾರೆ. ಕನ್ನಡದಲ್ಲಿ ಮಾತನಾಡಲು ನಾನು ಕಲಿಯಲಿಲ್ಲ ಎಂಬ ಕೊರಗು ಇದೆ, ತುಳು ಅಕಾಡೆಮಿಯ ರೀತಿಯಲ್ಲಿ ಮಂಜೇಶ್ವರದಲ್ಲಿ ಯಕ್ಷಗಾನ ಅಕಾಡೆಮಿ ಆರಂಭ ಮಾಡಿ ಯಶಸ್ವಿಯಾಗಿzವೆ. ತುಳು, ಅರೆಭಾಷೆ, ಯಕ್ಷಗಾನ, ಬ್ಯಾರಿ ಸೇರಿದಂತೆ ಎಲ್ಲಾ ಅಕಾಡೆಮಿಗಳನ್ನು ಸೇರಿಸಿ ಕಾಸರಗೋಡಿನಲ್ಲಿ ದೊಡ್ಡ ಕಾರ್ಯಕ್ರಮ ಮಾಡೋಣ ಎಂದರು.
ಮಡಿಕೇರಿ ಆಕಾಶವಾಣಿಯ ಹಿರಿಯ ಉದ್ಘೋಷಕ ಸುಬ್ರಾಯ ಸಂಪಾಜೆ ಸಮಾರೋಪ ಮಾತುಗಳನ್ನಾಡಿ, ಹೊಸ ಹೊಸ ಸಾಧ್ಯತೆಗಳನ್ನು ಹಿಂದಿನ ಅರೆಭಾಷೆ ಅಕಾಡೆಮಿಯಿಂದ ಪ್ರಸ್ತುತಪಡಿಸಿದ್ದಾರೆ. ಈಗಿನ ಅಕಾಡೆಮಿ ಅದನ್ನು ಮೀರಿ ಹೊಸ ಹೊಸ ಸಾಧ್ಯತೆಗಳನ್ನು ಅನ್ವೇಷಣೆ ಮಾಡಬೇಕಿದೆ ಎಂದರು. ಗೌಡರ ಯುವ ಸೇವಾ ಸಂಘದ ಸ್ಥಾಪಕಾಧ್ಯಕ್ಷ ನಿತ್ಯಾನಂದ ಮುಂಡೋಡಿ ಸಾಧಕರನ್ನು ಸನ್ಮಾನಿಸಿದರು. ಕರ್ನಾಟಕ ಮೀನುಗಾರಿಕಾ ನಿಗಮದ ಮಾಜಿ ಅಧ್ಯಕ್ಷ ಎ.ವಿ.ತೀರ್ಥರಾಮ ಬಹುಮಾನ ವಿತರಿಸಿದರು.
ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಪೂರ್ವಾಧ್ಯಕ್ಷ ಪಿ.ಸಿ.ಜಯರಾಮ, ಅರಂತೋಡು ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ.ಶಹೀದ್ ಮುಖ್ಯ ಅತಿಥಿಗಳಾಗಿದ್ದರು. ಅಕಾಡೆಮಿಯ ರಿಜಿಸ್ಟರ್ ಚಿನ್ನಸ್ವಾಮಿ, ಅಕಾಡೆಮಿಯ ಸದಸ್ಯರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶಿಕ್ಷಣ, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮುತ್ತಣ್ಣ ಮಾಸ್ತರ್, ಸಹಕಾರ ಸೇವೆಯಲ್ಲಿ ಸಾಧನೆ ಮಾಡಿದ ಮೋನಪ್ಪ ಗೌಡ ಇಳಂದಿಲ, ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಬಾಲಕೃಷ್ಣ ಮಾಸ್ತರ್, ಧಾರ್ಮಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಬೋಜಪ್ಪ ಗೌಡ ಪಾಲಾರ್ ಮೂಲೆ, ಸಮಾಜಸೇವೆಯಲ್ಲಿ ಸೇವೆ ಮಾಡಿದ ಪುರುಷೋತ್ತಮ ಬೊಡ್ಡನಕೊಚ್ಚಿ, ಪ್ರಥಮ ಅರೆಭಾಷೆ ಮಹಿಳಾ ಜನಪ್ರತಿನಿಧಿ ಕುತ್ತಿಕೋಲು ಗ್ರಾಮ ಪಂಚಾಯತ್ ನ ಧರ್ಮಾವತಿ ಪಾಲಾರುಮೂಲೆ, ಧಾರ್ಮಿಕ ಕ್ಷೇತ್ರದಲ್ಲಿ ಸುಂದರ ಗೌಡ, ಕರಕುಶಲ ಮತ್ತು ಕೃಷಿ ಕ್ಷೇತ್ರದಲ್ಲಿ ಶಿವಣ್ಣ ಗೌಡ ಮಾವಾಜಿ, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಯಕ್ಷಿತ್ ಬಾಲೆಂಬಿರವರನ್ನು ಸನ್ಮಾನಿಸಲಾಯಿತು. ಸ.ಉ.ಹಿ.ಪ್ರಾ.ಶಾಲೆ ಕೋಲ್ಚಾರುವಿಗೆ ಅತ್ಯುತ್ತಮ ಗಡಿನಾಡ ಶಾಲೆ ಎಂದು ಗೌರವ ಅರ್ಪಿಸಲಾಯಿತು. ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಗೌರವ ಸದಸ್ಯ
ಚಂದ್ರಶೇಖರ ಪೇರಾಲು ಸ್ವಾಗತಿಸಿದರು. ವೆಂಕಟ್ರಮಣ ಕೊಯಿಂಗಾಜೆ ವಂದಿಸಿದರು. ಉಪನ್ಯಾಸಕಿ ಕುಮಾರಿ ಬೇಬಿ ವಿದ್ಯಾ ಪಿ.ಬಿ. ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಮೊದಲು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಬೇಕಲ್-ಬಂದಡ್ಕ-ಸುಳ್ಯ- ಸುಬ್ರಹ್ಮಣ್ಯ ಮಾರ್ಗದಲ್ಲಿ ಸರಕಾರಿ ಬಸ್ ಆರಂಭಕ್ಕೆ ಪ್ರಯತ್ನ: ಉದುಮ ಶಾಸಕ ಸಿ.ಎಚ್.ಕುಞಂಬು
ಪ್ರವಾಸಿ ತಾಣ ಕಾಸರಗೋಡು ಜಿಲ್ಲೆಯ ಬೇಕಲ ಕೋಟೆ ಮತ್ತು ಪುಣ್ಯ ಕ್ಷೇತ್ರ ಸುಬ್ರಹ್ಮಣ್ಯ ಸಂಪರ್ಕಿಸುವ ನಿಟ್ಟಿನಲ್ಲಿ ಬೇಕಲ, ಬಂದಡ್ಕ, ಸುಳ್ಯ, ಸುಬ್ರಹ್ಮಣ್ಯ ಅಂತಾರಾಜ್ಯ ಮಾರ್ಗದಲ್ಲಿ ಸರಕಾರಿ ಬಸ್ ಸರ್ವೀಸ್ ಆರಂಭಿಸಲು ಎಲ್ಲಾ ಪ್ರಯತ್ನ ನಡೆಸಲಾಗುವುದು ಎಂದು ಉದುಮ ಕ್ಷೇತ್ರದ ಶಾಸಕ ಸಿ.ಎಚ್.ಕುಂಞಂಬು ಅವರು ತಿಳಿಸಿದ್ದಾರೆ.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗು ಬಂದಡ್ಕ ಗೌಡ ಗ್ರಾಮ ಸಮಿತಿಯ ವತಿಯಿಂದ ಬಂದಡ್ಕದಲ್ಲಿ ನಡೆದ ಅರೆಭಾಷೆ ಗಡಿನಾಡ ಉತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ ಅವರು ಈ ವಿಷಯ ತಿಳಿಸಿದರು.
ಅಂತಾರಾಜ್ಯ ಬಸ್ ಸರ್ವೀಸ್ ಆರಂಭಿಸಬೇಕು ಎಂದು ಅರೆಭಾಷೆ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ ಹಾಗೂ ಬಂದಡ್ಕದ ಪ್ರಮುಖರು ಮನವಿ ಸಲ್ಲಿಸಿದರು. ಈ ಮಾರ್ಗದಲ್ಲಿ ಹೊಸ ಬಸ್ ರೂಟ್ ಮಂಜೂರು ಮಾಡಿಸಿ ಕೇರಳದಿಂದ ಹಾಗೂ ಕರ್ನಾಟಕ ಸರಕಾರಿ ಬಸ್ ಸರ್ವೀಸ್ ನಡೆಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುವುದು ಎಂದು ಅವರು ಹೇಳಿದರು.
ಸುಳ್ಯದಿಂದಲೂ ಬಸ್ ಆರಂಭ ಮಾಡುವಂತೆ ಪಿ.ಸಿ ಜಯರಾಮ್, ಟಿ.ಎಂ ಶಹೀದ್ ರವರಿಗೆ ಇದೇ ವೇಳೆಯಲ್ಲಿ ಬಂದಡ್ಕದ ಪ್ರಮುಖರು ಮನವಿ ನೀಡಿದರು.