ಅಡಿಕೆ ಗಾರ್ಬೆಲ್ ಗೆ ನುಗ್ಗಿದ ಕಳ್ಳ

0

ರೆಡ್ ಹ್ಯಾಂಡೆಡ್ ಆಗಿ ಹಿಡಿದ ಊರವರು

ಕಳ್ಳತನ ಮಾಡಲೆಂದು ರಾತ್ರಿ ಅಡಿಕೆ ಗಾರ್ಬೆಲ್ ಗೆ ನುಗ್ಗಿದ್ದ ಕಳ್ಳನನ್ನು ಊರವರು ರೆಡ್ ಹ್ಯಾಂಡೆಡ್ ಆಗಿ ಹಿಡಿದು ಪೋಲೀಸರಿಗೊಪ್ಪಿಸಿದ ಘಟನೆ ಅರಂಬೂರಿನಲ್ಲಿ ಕಳೆದ ರಾತ್ರಿ ಸಂಭವಿಸಿದೆ.

ಅರಂಬೂರಿನಲ್ಲಿರುವ ಕರ್ನಾಟಕ ಟ್ರೇಡರ್ಸ್ ಅಡಿಕೆ ಗೋಡೌನ್ ಗೆ ನುಗ್ಗಿ ಕಳ್ಳತನ ನಡೆಸುತ್ತಿದ್ದ ಕಳ್ಳನನ್ನು ಊರವರೇ ಬಂಧಿಸಿ ಪೋಲಿಸರಿಗೆ ಒಪ್ಪಿಸಿದ ಘಟನೆ ಕಳೆದ ರಾತ್ರಿ ಸಂಭವಿಸಿದೆ.

ಅರಂಬೂರು ಕರ್ನಾಟಕ ಟ್ರೇಡರ್ಸ್ ನ ಗೋಡೌನ್ ನಲ್ಲಿ ಕಳೆದ ಕೆಲವು ತಿಂಗಳಿನಿಂದ ಲೆಕ್ಕಾಚಾರ ಮಾಡುವಾಗ ಅಡಿಕೆ ಪ್ರಮಾಣ ಕಡಿಮೆ ಕಂಡುಬರುತ್ತಿತ್ತೆನ್ನಲಾಗಿದೆ.

ನಿನ್ನೆ ರಾತ್ರಿ ಒಂದೂವರೆ ಗಂಟೆ ಸುಮಾರಿಗೆ ಈ ಅಡಿಕೆ ಗೋಡೌನ್ ಗೆ ಕಳ್ಳರು ನುಗ್ಗಿ ಒಳಗಡೆ ಇರುವಾಗ ಸಮೀಪದಲ್ಲಿರುವ ಪ್ರಕಾಶ್ ಶೆಣೈ ಮನೆಯವರಿಗೆ ಶಬ್ದ ಕೇಳಿತೆಂದೂ ಅವರು ಏನಾಗಿರಬಹುದೆಂದು ಗಮನಿಸಿದಾಗ ಒಳಗಿನಿಂದ ಟಾರ್ಚ್ ಲೈಟ್ ನ ಬೆಳಕು ಹಾಯಿಸುತ್ತಿರುವುದು ಕಂಡಿತೆಂದೂ ತಿಳಿದುಬಂದಿದೆ. ಅವರು ಕೂಡಲೇ ಗೋಡೌನ್ ಮಾಲಕ ಲತೀಫ್ ರಿಗೆ ಪೋನ್ ಮಾಡಿ ತಿಳಿಸಿದರು.
ಬಳಿಕ ಮಾಲಕರು ಮತ್ತು ಸ್ಥಳೀಯರು ಸೇರಿ ಗೋಡೌನ್ ಶಟರ್ ಓಪನ್ ಮಾಡಿ ನೋಡುವಾಗ ಒಬ್ಬ ಕಳ್ಳ ಪ್ಲಾಸ್ಟಿಕ್ ಚೀಲದಲ್ಲಿ ಅಡಿಕೆಯನ್ನು ಸಣ್ಣ ಸಣ್ಣ ಕಟ್ಟುಗಳು ಮಾಡಿಟ್ಟು ಶಬ್ದ ಕೇಳಿ ಪರಾರಿಯಾಗಲು ತಯಾರಿ ನಡೆಸುತ್ತಿದ್ದುದು ಕಂಡಿತು. ಕೂಡಲೇ ಅಲ್ಲಿ ಸೇರಿದ ಸಾರ್ವಜನಿಕರು ಹಾಗೂ ಮಾಲಕರು ಕಳ್ಳನನ್ನು ಹಿಡಿದು ಸುಳ್ಯ ಪೋಲಿಸರಿಗೆ ವಿಷಯ ತಿಳಿಸಿದರು. ಕೂಡಲೇ ಸ್ಥಳಕ್ಕೆ ಬಂದ ಪೋಲಿಸರು ಅವನನ್ನು ಬಂಧಿಸಿ ಸುಳ್ಯ ಪೋಲಿಸ್ ಠಾಣೆಗೆ ಕೊಂಡೊಯ್ದರು.

ಅಡಿಕೆ ಸಾಗಿಸಲು ಕಾರು ತಂದಿದ್ದ

ಕಳ್ಳತನ ಮಾಡಿ ಅಡಿಕೆ ತುಂಬಿಸಿ ಕೊಂಡೊಯ್ಯಲು ಕಳ್ಳ ಕಾರು ತಂದಿದ್ದ. ಅದನ್ನು ಆತ ಯಾರಿಗೂ ಸಂಶಯ ಬಾರದ ರೀತಿಯಲ್ಲಿ ಅರಂಬೂರು ಕಾಫಿ ಡೇ ಸಮೀಪವಿರುವ ಹಳೇ ಕಟ್ಟಡದ ಹಿಂಬದಿಯಲ್ಲಿ ನಿಲ್ಲಿಸಿದ್ದ. ಪೊಲೀಸರು ತನಿಖೆ ನಡೆಸುವಾಗ ಕಾರು ತಂದ ವಿಚಾರ ಬೆಳಕಿಗೆ ಬಂದಿತು.