ರಾತ್ರಿಯೇ ಸ್ಥಳಕ್ಕೆ ಆಗಮಿಸಿದ ಪೋಲೀಸರು- ರಸ್ತೆಯಿಂದ ಮಣ್ಣು ತೆರವು
5 ಮನೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ರಾತ್ರಿ ಮಣ್ಣು ಹಾಕಿ ಮುಚ್ಚಿದ ಮತ್ತು ರಾತ್ರಿಯೇ ಪೋಲೀಸರು ಆಗಮಿಸಿ ಮಣ್ಣು ತೆಗೆಸಿದ ಘಟನೆಯಿಂದು ನೆಲ್ಲೂರು ಕೆಮ್ರಾಜೆಯ ಗುಂಡಿಯಂಗಡಿ ಬಳಿಯಿಂದ ವರದಿಯಾಗಿದೆ.
ಸೋಣಂಗೇರಿ – ಗುತ್ತಿಗಾರು ರಸ್ತೆಯ ಗುಂಡಿಯಂಗಡಿ ಎಂಬಲ್ಲಿಂದ ಕವಲೊಡೆದು ಕುಂಟಿಹಿತ್ಲು, ಪೆಲತ್ತಡ್ಕ ಕಡೆಯ ಉಮೇಶ ಪ್ರಭು, ಪ್ರವೀಣ್ ರಾವ್ ಮತ್ತಿತರ 5 ಮನೆಗಳನ್ನು ಸಂಪರ್ಕಿಸುವ ರಸ್ತೆಯಿದೆ. ಈ ರಸ್ತೆಯನ್ನು ಪದ್ಮನಾಭ ಸುಳ್ಳಿ ಎಂಬವರು ನಿನ್ನೆ ರಾತ್ರಿ ಮಣ್ಣು ಹಾಕಿ ಮುಚ್ಚಿ, ಪರ್ಯಾಯ ರಸ್ತೆಯೊಂದನ್ನು ನಿರ್ಮಿಸಿದರೆನ್ನಲಾಗಿದೆ. ಈ ಬಗ್ಗೆ 5 ಮನೆಗಳಿಗೂ ಮಾಹಿತಿ ನೀಡದೇ ಏಕಾಏಕಾಕಿ ಹಲವಾರು ವರ್ಷಗಳಿಂದ ಇದ್ದ ರಸ್ತೆಯನ್ನು ಮುಚ್ಚಿದ ಬಗ್ಗೆ ಫಲಾನುಭವಿಗಳು ರಾತ್ರಿ ಪೋಲೀಸರಿಗೆ ದೂರು ನೀಡಿದರೆನ್ನಲಾಗಿದೆ.
ರಾತ್ರಿಯೇ ಸ್ಥಳಕ್ಕೆ ಆಗಮಿಸಿದ ಪೋಲೀಸರು ರಸ್ತೆಗೆ ಹಾಕಿದ್ದ ಮಣ್ಣನ್ನು ತೆರವುಗೊಳಿಸಲು ಸೂಚಿಸಿ, ಮಣ್ಣು ತೆರವುಗೊಂಡ ನಂತರ ಪೋಲೀಸರು ತೆರಳಿದರೆಂದು ತಿಳಿದು ಬಂದಿದೆ.