ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಯವರಿಗೆ ಕುಟುಂಬ ಸನ್ಮಾನ

0

ಸುಳ್ಯದ ಹೆಸರನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳಗಿಸಿದ ಸಾಧಕ: ಗಣ್ಯರ ಅಭಿಮತ

ಪದವಿ ಹೋದರೂ ಚಿಂತೆಯಿಲ್ಲ; ಕನ್ನಡದ ಕಾರ್ಯ ಯೋಜನೆಗೆ ಪ್ರಾಮಾಣಿಕೆ ಸೇವೆ : ಬಿಳಿಮಲೆ

ಕರ್ನಾಟಕ ಸರಕಾರ ನನಗೆ ಬಹಳ ದೊಡ್ಡ ಪದವಿ ಮತ್ತು ಜವಾಬ್ದಾರಿ ನೀಡಿದೆ. ಕನ್ನಡದ ಕಾರ್ಯ ಯೋಜನೆಗಳಿಗೆ ಬೇಕಾಗಿ ಪ್ರಾಮಾಣಿಕವಾಗಿ ಮತ್ತು ನಿಷ್ಠುರವಾಗಿ ಕೆಲಸ ಮಾಡುತ್ತೇನೆ. ಪದವಿ ಹೋದರೂ ಚಿಂತೆಯಿಲ್ಲ, ಕನ್ನಡದ ಸಮಸ್ಯೆಗಳನ್ನು ಸರಕಾರಕ್ಕೆ ಮುಟ್ಟಿಸಿ ಪರಿಹಾರದ ಪ್ರಯತ್ನ ಮಾಡಿಯೇ ಮಾಡುತ್ತೇನೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.‌ ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.

ಕಾನಡ್ಕ ಕುಟುಂಬದ ಬಿಳಿಮಲೆ ವಿಭಾಗವು ಡಿ. 8 ರಂದು ಬಿಳಿಮಲೆಯ ವನ ಸ್ಮೃತಿ ಮನೆಯಲ್ಲಿ ಹಮ್ಮಿಕೊಂಡ ಕುಟುಂಬ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಕನ್ನಡ ಭಾಷೆಯ ಅಭಿವೃದ್ಧಿ, ಶಾಲೆಗಳ ಸಬಲೀಕರಣ, ಆಡಳಿತದಲ್ಲಿ ಕನ್ನಡ ಅನುಷ್ಠಾನ ಸೇರಿದಂತೆ ತಮ್ಮ ಮುಂದಿರುವ ಸವಾಲುಗಳು, ಕಾರ್ಯ ಯೋಜನೆಗಳ ಕುರಿತು ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕರ್ನಾಟಕದ ಸೌಹಾರ್ದ ಸಂಸ್ಕೃತಿ ಕುರಿತು ಕಡಿಮೆ ಬೆಲೆಯ ನೂರು ಪುಸ್ತಕಗಳನ್ನು ಪ್ರಕಟಿಸಿ ಶಾಲಾ ಕಾಲೇಜು ಮಕ್ಕಳಿಗೆ ಹಂಚುವ ಯೋಜನೆ ಇದೆ ಎಂದರು.

ಮಂಗಳೂರಿನ ನಿವೃತ್ತ ಪ್ರಾಂಶುಪಾಲ ಕೆ. ಸದಾಶಿವ ಬಿಳಿಮಲೆಯವರನ್ನು ಸನ್ಮಾನಿಸಿದರು. ” ಪುರುಷೋತ್ತಮ ಬಿಳಿಮಲೆಯವರು ಎಷ್ಟೇ ಎತ್ತರಕ್ಕೆ ಹೋದರೂ ಅದೇ ಸರಳತೆ ಮತ್ತು ಬಾಂಧವ್ಯವನ್ನು ಉಳಿಸಿಕೊಂಡು ಮಾದರಿಯಾಗಿದ್ದಾರೆ ಎಂದರು.

ಅಭಿನಂದನಾ ಭಾಷಣಗೈದ ಸುಳ್ಯ ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್ ಕೆರೆಯವರು, ಬದುಕಿನುದ್ದಕ್ಕೂ ಸವಾಲುಗಳನ್ನು ಮೆಟ್ಟಿ ನಿಂತು ಅದನ್ನೇ ಸಾಧನೆಯ ಮೆಟ್ಟಲಾಗಿಸಿ ಬೆಳೆದವರು ಬಿಳಿಮಲೆಯವರು. ಅವರ ವಿದ್ವತ್ತು, ಸಂಶೋಧನಾ ನೆಲೆ, ಕನ್ನಡದ ಕುರಿತಾದ ದೂರದೃಷ್ಟಿ, ಸಂಘಟನಾ ಚತುರತೆ ಮತ್ತು ಈ ನೆಲದ ಸಾಂಸ್ಕೃತಿಕ ಚರಿತ್ರೆಯನ್ನು ಬಗೆದು ಬರೆದ ರೀತಿ ಎಲ್ಲವೂ ಅದ್ಭುತ. ಜನಪದ ಸಾಹಿತ್ಯವನ್ನು ಗಂಭೀರವಾಗಿ ಅಭ್ಯಸಿಸಿರುವ ಬಿಳಿಮಲೆಯವರು ಆ ಮೂಲಕ ಶಿಷ್ಟ ಸಾಹಿತ್ಯದ ಹಲವು ಜನ ವಿರೋಧಿ ನೆಲೆಗಳನ್ನು ಗಂಭೀರವಾಗಿ ಪ್ರಶ್ನಿಸಿದವರು. ಸಂಶೋಧಕರಾಗಿ ಹೊಸ ದಿಕ್ಕು ತೋರಿದವರು ಎಂದರು.

ಪಂಬೆತ್ತಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಾಕೆ ಮಾಧವ ಗೌಡ ಸಭಾಧ್ಯಕ್ಷತೆ ವಹಿಸಿ ಮಾತನಾಡಿ, ಪುರುಷೋತ್ತಮ ಬಿಳಿಮಲೆ ಮತ್ತು ಅವರ ಸಹೋದರರು, ಸಹೋದರಿ ಸಮಾಜದಲ್ಲಿ ಸಾಧನೆ ಮಾಡಿರುವುದರ ಹಿಂದೆ ಶೇಷಪ್ಪ ಗೌಡ, ಗಿರಿಜಾ ದಂಪತಿಯ ಶ್ರಮವಿದೆ. ಅವರ ಆದರ್ಶವನ್ನು ಮಕ್ಕಳೂ ಮೈಗೂಡಿಸಿಕೊಂಡು ಬೆಳೆದಿದ್ದಾರೆ ಎಂದರು.

ಮುಖ್ಯ ಅತಿಥಿಯಾಗಿದ್ದ ಗುತ್ತಿಗಾರು ರಬ್ಬರ್ ಬೆಳೆಗಾರರ ಸೊಸೈಟಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿಯವರು ತಮ್ಮ ಕುಟುಂಬದ ಸದಸ್ಯನೊಬ್ಬ ಸಾಧನೆ ಮಾಡಿದಾಗ ಅವರನ್ನು ಅಭಿನಂದಿಸುವ ಕಾರ್ಯ ಮಾಡಿದ ಕಾನಡ್ಕ ಬಿಳಿಮಲೆ ಕುಟುಂಬದ ನಡೆ ಮಾದರಿಯಾದುದು ಎಂದರು.

ಈಶ್ವರ ಗೌಡ ಬಿಳಿಮಲೆ, ಉಮೇಶ ಗೌಡ ಬಿಳಿಮಲೆ, ಶಿವರಾಮ ಕಾನಡ್ಕ
ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಮಾರಂಭದ ಅತಿಥಿಗಳನ್ನು ಹಾಗೂ ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಶ್ರೀಮತಿ ಸ್ವಾತಿ ಸುಹಾಸ್ ಪ್ರಾರ್ಥಿಸಿದರು. ಪ್ರೊ. ಪದ್ಮನಾಭ ಗೌಡ ಬಿಳಿಮಲೆ ಸ್ವಾಗತಿಸಿ ಪ್ರಸ್ತಾವನೆಗೈದರು. ಶ್ರೀಮತಿ ಗುಲಾಬಿ ಬಿಳಿಮಲೆ ಸನ್ಮಾನ ಪತ್ರ ವಾಚಿಸಿದರು. ತೀರ್ಥಾನಂದ ಕೊಡೆಂಕಿರಿ ನಿರೂಪಿಸಿದರು. ಪರಮೇಶ್ವರ ಗೌಡ ಬಿಳಿಮಲೆ ವಂದಿಸಿದರು.