ಮುಳ್ಯ ಅಟ್ಲೂರು: ವಿಶೇಷ ಚೇತನ ಮಗಳಿಗೆ ಶಾಲಾ ವಾರ್ಷಿಕೋತ್ಸವದಲ್ಲಿ ಪ್ರೋತ್ಸಾಹಿಸಿ ಸಹಕರಿಸಿದ ತಂದೆ

0

ಮಗಳ ಶ್ರೀ ಶಾರದಾದೇವಿ ಅಭಿನಯಕ್ಕೆ ಕೃತಕ ವೀಣೆ ಮತ್ತು ತಾವರೆ ತಯಾರಿಸಿ ಪ್ರಶಂಸೆಗೆ ಪಾತ್ರರಾದ ವಸಂತ ಬಳ್ಳಡ್ಕ

ಮುಳ್ಯ ಅಟ್ಲೂರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ನಾಲ್ಕನೆಯ ತರಗತಿಯ ವಿದ್ಯಾರ್ಥಿನಿ ನಿಶ್ಮಿತಾ ಅಜ್ಜಾವರ, ಹುಟ್ಟಿನಿಂದಲೇ ಎರಡು ಕಾಲುಗಳ ಮತ್ತು ಕೈಗಳ ಸ್ವಾಧೀನವನ್ನು ಕಳೆದುಕೊಂಡವರು.
ಆದರೆ ವಿಶೇಷ ಚೇತನ ಬಹುಮುಖ ಪ್ರತಿಭೆ ಆಗಿರುವ ನಿಶ್ಮಿತಾ ಕಲಿಕೆ, ಚಿತ್ರಕಲೆ,ಸಂಗೀತ ಮುಂತಾದ ಕಲಾ ಕ್ಷೇತ್ರದಲ್ಲಿ ಹಲವಾರು ಸನ್ಮಾನ ಹಾಗೂ ಬಹುಮಾನವನ್ನು ಗಳಿಸಿದ್ದಾರೆ.
ಇವರ ಕಲಿಕೆಗಾಗಿ ಮತ್ತು ಇವರ ಆಸಕ್ತಿಗಾಗಿ ಇವರ ಪೋಷಕರು ಉತ್ತಮ ರೀತಿಯ ಸಹಾಯ ಸಹಕಾರ ಹಾಗೂ ಪ್ರೋತ್ಸಾಹವನ್ನು ನೀಡುತ್ತಾ ಬಂದಿರುತ್ತಾರೆ.
ಇದೀಗ ಶಾಲೆಯಲ್ಲಿ ನಡೆದ ಈ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ನೃತ್ಯದಲ್ಲಿ ಭಾಗವಹಿಸುವ ಅವಕಾಶ ಲಭಿಸಿದೆ.

ಈ ಸಂದರ್ಭ ನಿಶ್ಮಿತಳ ತಂದೆ ವಸಂತ ಬಳ್ಳಡ್ಕ ಮಗಳ ನೃತ್ಯದ ಮೇಲಿನ ಆಸಕ್ತಿಯನ್ನು ಅರಿತು ನೃತ್ಯದಲ್ಲಿ ಭಾಗವಹಿಸಲು ಅದಕ್ಕೆ ಬೇಕಾದ ವೀಣಾ ಮತ್ತು ಪ್ಲಾಸ್ಟಿಕ್ ಚೇರ್ ಗೆ ತಾವರೆಯನ್ನು ಥರ್ಮಕೋಲ್ ಬಳಸಿ ಸುಂದರವಾಗಿ ತಯಾರಿಸಿ ಮಗಳನ್ನು ಶ್ರೀ ಶಾರದೆ ರೂಪದಲ್ಲಿ ಶೃಂಗಾರ ಗೊಳಿಸಿ ಅದರಲ್ಲಿ ಕೂರಿಸಿ ನೃತ್ಯದಲ್ಲಿ ಭಾಗವಹಿಸಲು ಪ್ರೋತ್ಸಾಹ ನೀಡಿದರು.

ಇವರ ಈ ಸುಂದರ ದೃಶ್ಯ ನೋಡುಗರ ಮನ ಸೆಳೆದು ಮಗಳಿಗಾಗಿ ತಂದೆ ಮಾಡಿರುವ ಕಲಾ ಕೃತಿಯ ಬಗ್ಗೆ ಸ್ಥಳೀಯರಿಂದ ಮತ್ತು ಶಿಕ್ಷಕ ರಿಂದ ಪ್ರಶಂಸೆಗಳು ವ್ಯಕ್ತವಾಗಿದೆ.
ವಸಂತ ರವರು ಸುಳ್ಯದಲ್ಲಿ ಆಟೋ ಚಾಲಕರಾಗಿ ದುಡಿಯುತ್ತಿದ್ದು ಅವರ ಪತ್ನಿ ಭಾರತಿ ಗೃಹಿಣಿ.
ವಿಶೇಷವಾಗಿ ನಿಶ್ಮಿತಾಳ ಪ್ರತಿಭೆಯನ್ನು ಗುರುತಿಸಿ ಶಾಲೆಯ ಎಲ್ಲಾ ಶಿಕ್ಷಕ ವೃಂದದವರು ಸ್ಥಳೀಯರು ಪ್ರೋತ್ಸಾಹ ನೀಡಿ ಸಹಕರಿಸುತ್ತಾರೆ.