ಸ್ಥಳಿಯರಿಂದ ವಿರೋಧ, ಸ್ಥಳ ಬದಲಾಯಿಸಿ ಕಟ್ಟಡ ಕಟ್ಟಲು ನಿರ್ಧಾರ
ನೀರು ಬರುವ ಕಣಿಯಲ್ಲಿ ಕಸ ವಿಂಗಡಣೆಗೆ ಕಟ್ಟಡ ಕಟ್ಟಲು ನಗರ ಪಂಚಾಯತ್ ಮುಂದಾಗಿದ್ದು, ಇದಕ್ಕೆ ಸ್ಥಳಿಯರಿಂದ ವಿರೋಧ ವ್ಯಕ್ತವಾಗಿ, ಸ್ಥಳ ಬದಲಾಯಿಸಿ ಕಟ್ಟಡ ಕಟ್ಟಲು ನಿರ್ಧಾರವಾದ ಘಟನೆ ಇಂದು ಕಲ್ಚರ್ಪೆಯಲ್ಲಿ ನಡೆದಿದೆ.
ಕಲ್ಚರ್ಪೆ ಪರಿಸರದಲ್ಲಿ ಮಳೆಗಾಲದಲ್ಲಿ ಪೂಮಲೆಯಿಂದ ನೀರು ಹರಿದು ಬರುವ ಕಣಿಗೆ ಅಡ್ಡವಾಗಿ ಸುಮಾರು ೪೦ ಲಕ್ಷ ರೂ, ವೆಚ್ಚದಲ್ಲಿ ಕಟ್ಟಡ ನಿರ್ಮಿಸಲು ಪೌಂಡೇಶನ್ಗೆ ಗುಂಡಿ ತೆಗೆಯುವ ಕಾರ್ಯ ಕಳೆದ ಒಂದು ವಾರದಿಂದ ನಡೆಯುತ್ತಿತ್ತು. ಇದನ್ನು ವಿರೋಧಿಸಿ ಕಲ್ಚರ್ಪೆ ಹೋರಾಟ ಸಮಿತಿಯ ಮುಖಂಡರು ಕಟ್ಟಡ ಕಟ್ಟಲು ಬಿಡುವುದಿಲ್ಲವೆಂದು ಪಟ್ಟು ಹಿಡಿದು ಕಾಮಗಾರಿಯನ್ನು ನಿಲ್ಲಿಸುವ ಕಾರ್ಯವನ್ನು ಮಾಡಿದರು.
ಈ ವಿಷಯಕ್ಕೆ ಸಂಬಂಧಿಸಿ ಇಂದು ನಗರ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರು ನಗರ ಪಂಚಾಯತ್ ಮುಖ್ಯಾಧಿಕಾರಿ ಹಾಗೂ ಇಂಜಿನಿಯರ್ ಇವರ ತಂಡ ಕಲ್ಚರ್ಪೆಗೆ ಭೇಟಿ ನೀಡಿ ಹೋರಾಟ ಸಮಿತಿಯ ಮುಖಂಡರೊಂದಿಗೆ ಮಾತುಕತೆ ನಡೆಸಿ ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಕಟ್ಟಡ ನಿರ್ಮಿಸುವಂತೆ ಕೇಳಿಕೊಂಡರು. ಇದಕ್ಕೆ ಒಪ್ಪದ ಸ್ಥಳಿಯ ಹೋರಾಟಗಾರರು ಯಾವುದೇ ಕಾರಣಕ್ಕೂ ಇಲ್ಲಿ ಕಟ್ಟಡವನ್ನು ಕಟ್ಟಲು ಬಿಡುವುದಿಲ್ಲ, ಆ ರೀತಿ ಏನಾದರೂ ಆದರೆ ಮಳೆಗಾಲದಲ್ಲಿ ಬೆಟ್ಟದಿಂದ ಬರುವ ನೀರು ಇಲ್ಲಿ ಮತ್ತೆ ಜಮಾವಣೆಗೊಂಡು ಬೇರೆ ಅನಾಹುತಗಳಿಗೆ ಕಾರಣವಾಗುವ ಸಂಭವವಿದ್ದು, ಈ ಕಾಮಗಾರಿಯನ್ನು ನಿಲ್ಲಿಸುವಂತೆ ಪಟ್ಟು ಹಿಡಿದರು.
ಬಳಿಕ ಅಧಿಕಾರಿಗಳು ಮತ್ತು ಅಲ್ಲಿ ಸೇರಿದ್ದ ಜನಪ್ರತಿನಿಧಿಗಳು ಕಸ ಬರ್ನಿಂಗ್ ಮಾಡುತ್ತಿರುವ ಜಾಗದ ಪಕ್ಕದಲ್ಲಿ ಕಟ್ಟಡವನ್ನು ನಿರ್ಮಿಸುವ ಬಗ್ಗೆ ಚರ್ಚಿಸಿ ಅಲ್ಲೇ ನಿರ್ಮಾಣ ಮಾಡುವ ಕುರಿತು ಸ್ಥಳಿಯರಿಗೆ ಭರವಸೆಯನ್ನು ನೀಡಿದರು. ಆ ಬಳಿಕ ಚರ್ಚೆ ಸುಖಾಂತ್ಯಗೊಂಡಿತು.
ಈ ಸಂದರ್ಭದಲ್ಲಿ ನ.ಪಂ. ಅಧ್ಯಕ್ಷೆ ಶ್ರೀಮತಿ ಶಶಿಕಲಾ ನೀರಬಿದಿರೆ, ಉಪಾಧ್ಯಕ್ಷ ಬುದ್ದ ನಾಯ್ಕ್, ಸ್ಥಾಯಿ ಸಮಿತಿ ಅಧ್ಯಕ್ಷೆ ಕಿಶೋರಿ ಶೇಟ್, ಮುಖ್ಯಾಧಿಕಾರಿ ಸುಧಾಕರ, ಇಂಜಿನಿಯರ್ ಶಿವಕುಮಾರ್, ವಾರ್ಡ್ ಸದಸ್ಯ ಸುದೇಶ್ ಅರಂಬೂರು, ಹೋರಾಟ ಸಮಿತಿಯ ಮುಖ್ಯಸ್ಥರಾದ ಅಶೋಕ್ ಪೀಚೆ, ಅನಿಲ್ ಪರಿವಾರಕಾನ, ಯೂಸುಫ್ ಅಂಜಿಕಾರ್, ತವೀದ್, ವೆಂಕಟೇಶ್ ಕಲ್ಲುಚರ್ಪೆ, ಬಾಲಚಂದ್ರ ಕಲ್ಲುಚರ್ಪೆ, ನವೀನ್ ಕಲ್ಲುಚರ್ಪೆ, ವೆಂಕಟೇಶ್ ಜೆ.ಬಿ., ವಿಶ್ವನಾಥ ಸಿರಿಕುರಲ್, ಮೊಯ್ದೀನ್ ಕಲ್ಲುಚರ್ಪೆ, ಡೀಲಾಕ್ಷಿ ಸಿರಿಕುರಲ್, ಜಲಜಾಕ್ಷಿ ಸಿರಿಕುರಲ್, ರೇಖಾ ಕಲ್ಲುಚರ್ಪೆ, ಸವಿತಾ ಕಲ್ಲುಚರ್ಪೆ, ಮೊದಲಾದವರು ಉಪಸ್ಥಿತರಿದ್ದರು.