ಸಹನಾ ಶಾಮಿಯಾನದ ಬದಲು ಜಿ.ಜಿ.ನಾಯಕ್ ರಿಂದ ಹಾಕಿಸಲು ನಿರ್ಧಾರ
ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ನಾಳೆ ನಡೆಯಲಿರುವ ಕಾರ್ಯಕ್ರಮಕ್ಕಾಗಿ ಶಾಮಿಯಾನ ಹಾಕಲು ಅನ್ಯಮತೀಯರಿಗೆ ಹೇಳಿದ್ದೇಕೆಂದು ಸ್ಥಳೀಯ ಹಿಂದೂ ಯುವಕರು ಆಕ್ಷೇಪಿಸಿದ ಹಿನ್ನೆಲೆಯಲ್ಲಿ ಹಿಂದೂ ವ್ಯಾಪಾರಸ್ಥರಿಂದ ಶಾಮಿಯಾನ ಹಾಕಿಸಲು ದೇವಸ್ಥಾನದ ಆಡಳಿತ ಮಂಡಳಿ ನಿರ್ಧರಿಸಿದ ಹಾಗೂ ಸಹನಾ ಶಾಮಿಯಾನದವರು ತಾವು ಹಾಕಿದ್ದ ಶಾಮಿಯಾನವನ್ನು ಬಿಚ್ಚಿಕೊಂಡು ಹೋದ ಘಟನೆ ವರದಿಯಾಗಿದೆ.
ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ನೂತನ ರಾಜಗೋಪುರದ ಉದ್ಘಾಟನೆ ನಾಳೆ ನಡೆಯಲಿದ್ದು, ಇದಕ್ಕಾಗಿ ದೇವಸ್ಥಾನದ ವಠಾರದಲ್ಲಿ ಶಾಮಿಯಾನ ಹಾಕಲು ಸುಳ್ಯದ ಸಹನಾ ಶಾಮಿಯಾನದವರಿಗೆ ಆರ್ಡರ್ ನೀಡಲಾಗಿತ್ತು. ಅವರು ಇವತ್ತು ಬಂದು ಶಾಮಿಯಾನ ಹಾಕುತ್ತಿದ್ದರೆನ್ನಲಾಗಿದೆ. ಇದನ್ನು ನೋಡಿದ ಸ್ಥಳೀಯ ಹಿಂದೂ ಯುವಕರು ಸೇರಿ ಅನ್ಯಮತೀಯರಿಗೆ ಶಾಮಿಯಾನದ ಆರ್ಡರ್ ನೀಡಿದ್ದೇಕೆಂದು ಆಕ್ಷೇಪ ವ್ಯಕ್ತಪಡಿಸಿದರಲ್ಲದೆ, ದೇವಸ್ಥಾನದ ಆಡಳಿತ ಮಂಡಳಿಯವರನ್ನು ಪ್ರಶ್ನಿಸಿದರೆನ್ನಲಾಗಿದೆ.
ಈ ಕುರಿತು ಆಕ್ಷೇಪಿಸಿದ ಯುವಕರು ಹಾಗೂ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರು ಮತ್ತು ಕೆಲವು ಸದಸ್ಯರಿದ್ದು ಸಮಾಲೋಚನಾ ಸಭೆ ನಡೆಯಿತು. ಹಿಂದೂ ದೇವಾಲಯದ ಕೆಲಸವನ್ನು ಅನ್ಯಮತೀಯರಿಗೆ ನೀಡುವುದಾದರೆ ನಾವು ದೇವಸ್ಥಾನದ ಯಾವ ಕೆಲಸಕ್ಕೂ ಬರುವುದಿಲ್ಲವೆಂದು ಯುವಕರು ಹೇಳಿದ್ದರಿಂದಾಗಿ ಸಹನಾ ಶಾಮಿಯಾನದವರ ಬದಲಿಗೆ ಜಿ.ಜಿ. ನಾಯಕ್ ಅವರಿಂದ ಶಾಮಿಯಾನ ಹಾಕಿಸಲು ನಿರ್ಧರಿಸಲಾಯಿತೆನ್ನಲಾಗಿದೆ.
ಈ ತೀರ್ಮಾನದ ಬಳಿಕ ಸಹನಾ ಶಾಮಿಯಾನದವರು ತಾವು ಹಾಕಿದ್ದ ಶಾಮಿಯಾನವನ್ನು ಬಿಚ್ಚಿಕೊಂಡು ಹೋದರೆಂದು ತಿಳಿದುಬಂದಿದೆ.
ನಾವು ಸ್ವಾತಿ ಸೌಂಡ್ಸ್ ನವರಿಗೆ ಕಾಂಟ್ರಾಕ್ಟ್ ಕೊಟ್ಟಿದ್ದೆವು. ಅವರು ಶಾಮಿಯಾನ ಹಾಕಲು ಸಹನಾದವರಿಗೆ ಸಬ್ ಕಂಟ್ರಾಕ್ಟ್ ನೀಡಿದ್ದಾರೆ. ಎಂದು ಆಡಳಿತ ಮಂಡಳಿಯ ಸದಸ್ಯರೊಬ್ಬರು ತಿಳಿಸಿದ್ದಾರೆಂದು ತಿಳಿದು ಬಂದಿದೆ.
ಘಟನೆಯ ಬಗ್ಗೆ ಅಧ್ಯಕ್ಷ ಜಿತೇಂದ್ರ ನಿಡ್ಯಮಲೆಯವರನ್ನು ವಿಚಾರಿಸಿದಾಗ ” ಅದೆಲ್ಲ ಸರಿಯಾಗಿದೆ ” ಎಂದಷ್ಟೇ ಹೇಳಿದರು.