17 ವರ್ಷಗಳ ಹಿಂದೆ ಸುಳ್ಯವನ್ನೇ ಬೆಚ್ಚಿ ಬೀಳಿಸಿದ ಘಟನೆ
17 ವರ್ಷಗಳ ಹಿಂದೆ ಸುಳ್ಯವನ್ನೇ ಬೆಚ್ಚಿ ಬೀಳಿಸಿದ ಐವರ್ನಾಡಿನ ಮೀರಾ ಬಾಲಕೃಷ್ಣ ಕೊಲೆ ಪ್ರಕರಣದ ಆರೋಪಿಗಳನ್ನು ದೋಷಮುಕ್ತಗೊಳಿಸಿ ನ್ಯಾಯಾಲಯ ಆದೇಶ ಮಾಡಿರುವುದಾಗಿ ತಿಳಿದುಬಂದಿದೆ.
ದಿನಾಂಕ 02/03/2008 ರಂದು ಬೆಳಗ್ಗಿನ ಜಾವ ಐವರ್ನಾಡು ಗ್ರಾಮದ ಪಾಲೆಪ್ಪಾಡಿ ಮೀರಾ ಬಾಲಕೃಷ್ಣರನ್ನು ಅಪರಚಿತರು ಮನೆಯ ಒಳಗೆ ಅಕ್ರಮ ಪ್ರವೇಶ ಮಾಡಿ ಮೀರಾ ರವರ ಕೈ ಕಾಲುಗಳನ್ನು ಕಟ್ಟಿ ಹಾಕಿ, ಬಾಯಿಗೆ ಬಟ್ಟೆ ತುರುಕಿ ಕೊಲೆ ಮಾಡಿ ಮನೆಯಲ್ಲಿದ್ದ ಹಣ ಒಡವೆ ದೋಚಲು ಪ್ರಯತ್ನಿಸಿದ್ದು, ಆ ಸಮಯದಲ್ಲಿ ಮನೆ ಕೆಲಸದಾಕೆ ವಿಮಲ ಎಂಬುವರು ಮನೆಯ ಒಳಗಡೆ ಪ್ರವೇಶಿಸಿರುವುದನ್ನು ನೋಡಿ ಆಕೆಯ ಮೇಲೆ ಕೂಡಾ ಹಲ್ಲೆಯನ್ನು ಮಾಡಿ ಆರೋಪಿಗಳು ಪರಾರಿಯಾಗಿದ್ದರು. ಮತ್ತು ಆರೋಪಿಗಳು ವಿಮಲ ರವರಿಗೆ ಹಲ್ಲೆ ಮಾಡಿದ್ದ ಕಾರಣ ಅವರಿಗೂ ಕೂಡಾ ಪ್ರಜ್ಞೆ ಹೋಗಿದ್ದು ಬಳಿಕ ಸೇರಿದ ಜನರು ವಿಮಲರವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಆ ಪ್ರಕಾರ ವಿಮಲರವರು ದೂರು ನೀಡಿದ್ದರು.















ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆ ಬಳಿಕ ಪ್ರಕರಣದಲ್ಲಿ ತನಿಖೆಯ ಪ್ರಗತಿ ಕಾಣದೆ ಇದ್ದುದರಿಂದ ಪ್ರಕರಣವನ್ನು ಸಿ.ಐ.ಡಿ ಕಛೇರಿಯ ಅಂದಿನ ಡಿ. ಎಸ್. ಪಿ ಆದ ಎನ್. ಎಂ. ರಾಮಲಿಂಗಪ್ಪ ಇವರ ನೇತೃತ್ವದಲ್ಲಿ ತನಿಖೆ ನಡೆಸಲು ಸರ್ಕಾರ ಆದೇಶಿಸಿತ್ತು ಅವರ ತನಿಖೆ ಅಧಾರದ ಮೇರೆಗೆ ಒಟ್ಟು 6 ಆರೋಪಿಗಳ ಹೆಸರನ್ನು ಹೆಸರಿಸಿ ಅವರ ಪೈಕಿ ಐದು ಆರೋಪಿಗಳನ್ನು ಪ್ರಕರಣ ನಡೆದ ಸುಮಾರು 4 ವರ್ಷ ಬಳಿಕ ಪತ್ತೆ ಮಾಡಿ ಅವರನ್ನು ದಸ್ತಗಿರಿ ಮಾಡಿ ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ 120 ಬಿ , 448,396 ಮತ್ತು 397 ಐ.ಪಿ.ಸಿ ಯಂತೆ ದೋಷರೋಪಣ ಪಟ್ಟಿಯನ್ನು ಜಿಲ್ಲಾ ನ್ಯಾಯಾಲಯಕ್ಕೆ ಆರೋಪಿಗಳ ವಿರುದ್ಧ ಸಿ.ಐ.ಡಿ ಪೊಲೀಸರಿಂದ ದಾಖಲಿಸಲಾಗಿತ್ತು.
ಈ ಪ್ರಕರಣ ದಲ್ಲಿ ಸುಮಾರು 50 ಸಾಕ್ಷಿಗಳನ್ನು ಹೆಸರಿಸಿ ಅವುಗಳ ಪೈಕಿ 30 ಸಾಕ್ಷಿಗಳನ್ನು ವಿಚಾರಣೆ ನಡೆಸಿದ ದ.ಕ ಜಿಲ್ಲಾ ಮಂಗಳೂರಿನ ಐದನೇ ಹೆಚ್ಚುವರಿ ನ್ಯಾಯಾಲಯ ಪುತ್ತೂರು ಇದರ ನ್ಯಾಯಾಧೀಶೆಯಾದ ಶ್ರೀಮತಿ ಸರಿತಾ ಡಿ. ರವರು ಅಭಿಯೋಜನೆಯು ಮಾಡಲಾದ ಆರೋಪವನ್ನು ಸಾಭಿತುಪಡಿಸುವಲ್ಲಿ ಅಭಿಯೋಜನೆಯು ವಿಫಲಗೊಂಡಿದೆ ಎಂಬ ಕಾರಣವನ್ನು ನೀಡಿ ದಿನಾಂಕ 25/02/2025 ರಂದು ಆರೋಪಿಗಳನ್ನು ದೋಷಮುಕ್ತ ಗೊಳಿಸಿ ತಿರ್ಪೆತ್ತಿರುವುದಾಗಿದೆ.
ಆರೋಪಿಗಳ ಪೈಕಿ 1 ನೇ ಆರೋಪಿ ರೋಷನ್ ತಲೆ ಮರೆಸಿಕೊಂಡಿದ್ದು ಆರೋಪಿ 3. ಶಿವರಾಜ್ 4. ದೇವಿಪ್ರಸಾದ್ 5.ಮಹಾವೀರ ಇವರ ಪರವಾಗಿ ಸುಳ್ಯದ ವಕೀಲರಾದ ಎಂ.ವೆಂಕಪ್ಪ ಗೌಡ, ಚಂಪಾ ವಿ ಗೌಡ, ರಾಜೇಶ್ ಬಿ.ಜಿ , ಶ್ಯಾಮ್ ಪ್ರಸಾದ್ ಎನ್.ಕೆ. ವಾದಿಸಿದ್ದರು.
ಮತ್ತು ಆರೋಪಿ 2.ಸಚಿನ್ ಹಾಗೂ 6.ರವಿಕಿರಣ್ ಪರವಾಗಿ ಪುತ್ತೂರಿನ ವಕೀಲರಾದ ಮಹೇಶ್ ಕಜೆ ಹಾಗೂ ಕುಮಾರಿ ಸೌಮ್ಯ ರವರು ವಾದಿಸಿದ್ದರು.










