ಸುಳ್ಯ ತಾಲೂಕು ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ

0

ತಹಶೀಲ್ದಾರ್ ಹಾಜರಾಗದೇ ಇರುವ ಬಗ್ಗೆ ಸದಸ್ಯರುಗಳಿಂದ ಅಸಮಾಧಾನ

ಬಸ್ ಸಮಸ್ಯೆ ಕುರಿತ ಸಭೆಗೆ ಶಾಸಕರಿಗೆ ಸಮಯವಿಲ್ಲದಿದ್ದರೆ ಗ್ಯಾರಂಟಿ ಅನುಷ್ಠಾನ ಸಮಿತಿ ವತಿಯಿಂದ ಸಭೆ ಕರೆದು ಜನರ ಸಮಸ್ಯೆಗೆ ಸ್ಪಂದಿಸಿ :ಹಮೀದ್ ಕುತ್ತಮೊಟ್ಟೆ

ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಫೆ 25 ರಂದು ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಗ್ರಾಮೀಣ ಭಾಗಕ್ಕೆ ಬಸ್ಸ್ ಕೊರತೆಯ ಬಗ್ಗೆ ಕೆ ಎಸ್ ಆರ್ ಟಿ ಸಿ ಸುಳ್ಯ ಘಟಕ ವತಿಯಿಂದ ವಿಶೇಷ ಸಭೆಯನ್ನು ಕರೆಯದ ಕುರಿತು ಮತ್ತು ಸಭೆಗೆ ತಹಶೀಲ್ದಾರ್ ರವರ ಗೈರು ಕುರಿತು ಗಂಭೀರ ಚರ್ಚೆ ನಡೆದ ಪ್ರಸಂಗ ನಡೆಯಿತು.

ಸುಳ್ಯದ ವಿವಿಧ ಭಾಗದಲ್ಲಿ ಬಸ್ ಸಮಸ್ಯೆಗಳಿದ್ದು ಕಳೆದ ಗ್ಯಾರಂಟಿ ಯೋಜನೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಕೈ ಗೊಂಡ ನಿರ್ಣಯದಂತೆ ಇಂದಿನವರೆಗೂ ಕೆ ಎಸ್ ಆರ್ ಟಿ ಸಿ ವತಿಯಿಂದ ಸಭೆ ಕರೆಯದೇ ಇರುವ ಬಗ್ಗೆ ಸಮಿತಿಯ ಸದಸ್ಯರುಗಳು ಕೇಳಿದಾಗ,ಸುಳ್ಯ ಕೆ ಎಸ್ ಆರ್ ಟಿ ಸಿ ಡಿಪೋ ಮೆನೇಜರ್ ಮಾತನಾಡಿ ಶಾಸಕರು ಸಿಗದ ಮತ್ತು ಅವರಿಗೆ ಸಮಯವಿಲ್ಲದ ಕಾರಣ ಸಭೆ ಮಾಡಲು ಸಾಧ್ಯವಾಗಿಲ್ಲ ಎಂದು ಹೇಳಿದರು.


ಇದಕ್ಕೆ ಉತ್ತರಿಸಿದ ಸಮಿತಿ ಅಧ್ಯಕ್ಷ ಹಮೀದ್ ಕುತ್ತಮೊಟ್ಟೆ ನಮ್ಮ ಶಾಸಕರಿಗೆ ಬರಲು ಸಾಧ್ಯವಾಗುತ್ತಿಲ್ಲ ಎಂದು ನಾವು ಜನರ ಸಮಸ್ಯೆಗೆ ಸ್ಪಂದಿಸಬಾರದು ಎಂದು ಇದೆಯಾ.ಅವರು ಬರಲು ಸಾಧ್ಯವಾಗದೆ ಇದ್ದರೆ ಪರವಾಗಿಲ್ಲ ಅನುಷ್ಠಾನ ಸಮಿತಿ ವತಿಯಿಂದಾದರೂ ಸಭೆ ಕರೆದು ಜನರ ಸಮಸ್ಯೆಗೆ ಸ್ಪಂದಿಸುವ ಕಾರ್ಯ ಮಾಡೋಣ ಎಂದು ಹೇಳಿದರೆ ಸಮಿತಿಯ ಸದಸ್ಯ ಭವಾನಿ ಶಂಕರ್ ಕಲ್ಮಡ್ಕ ಇದೇ ಕಾರಣ ದಿಂದಲೇ ಸುಳ್ಯ ಕಳೆದ 35 ವರ್ಷಗಳಿಂದ ಅಭಿವೃದ್ಧಿ ಆಗದೆ ಇರುವುದಕ್ಕೆ ಕಾರಣ ಎಂದರು.ಅವರಿಗೆ ಅಭಿವೃದ್ಧಿ ಬೇಡವಾಗಿದ್ದರೆ ನಮಗೆ ಅಭಿವೃದ್ಧಿ ಬೇಕು. ಆದ್ದರಿಂದ ಗ್ಯಾರಂಟಿ ಅನುಷ್ಠಾನ ಸಮಿತಿಯಿಂದಾದರು ನಮ್ಮ ಅಧ್ಯಕ್ಷರ ನೇತ್ರತ್ವದಲ್ಲಿ ಸಭೆ ಕರೆದು ಬಸ್ಸಿನ ಕೊರತೆ ಬಗ್ಗೆ ಮಾಹಿತಿ ಸಂಗ್ರಹಣೆ ಮಾಡಿ ಅಧಿಕಾರಿಗಳ ಸಲಹೆ ಸೂಚನೆ ಪಡೆದು ಸರಕಾರದ ಗಮನಕ್ಕೆ ನೀಡೋಣ ಎಂದು ಆಗ್ರಹಿಸಿದರು.

ಸುಳ್ಯದಲ್ಲಿ ಆಧಾರ್ ಕೇಂದ್ರಗಳ ಸಮಸ್ಯೆ ಹಾಗೂ ಜಾತಿ ಆದಾಯ ಸರ್ಟಿಫಿಕೇಟ್ ಬಗ್ಗೆ ಹಲವಾರು ಸಮಸ್ಯೆಗಳಿದ್ದು ಈ ಸಭೆಗೆ ತಾಲೂಕು ಕಚೇರಿಯಿಂದ ತಹಶೀಲ್ದಾರ್ ರವರು ಕಡ್ಡಾಯವಾಗಿ ಇರಬೇಕಾಗಿದ್ದು ಅವರೇ ಬರಲಿಲ್ಲ ಎಂದು ಸಭೆಗೆ ಭಾಗವಹಿಸಿದ್ದ ಸದಸ್ಯರುಗಳು ಬೇಸರ ವ್ಯಕ್ತ ಪಡಿಸಿದ ಘಟನೆಯೂ ನಡೆಯಿತು.

ಈ ಸಂಧರ್ಭ ಸಮಿತಿಯ ಸದಸ್ಯ ಕಾರ್ಯದರ್ಶಿ ಇ ಓ ರಾಜಣ್ಣ ರವರು ದೂರವಾಣಿ ಕರೆ ಮಾಡಿ ಉಪ ತಹಶೀಲ್ದಾರ್ ಮಂಜುನಾಥ್ ರವರನ್ನು ಸಭೆಗೆ ಬರುವಂತೆ ಕೇಳಿ ಕ್ಕೊಂಡಿದ್ದು ಈ ವೇಳೆ ಆ ಸಭೆಗೆ ನಾವು ಬರುವುದು ಕಡ್ಡಾಯವಿಲ್ಲ ಮತ್ತು ನಮ್ಮ ಇಲಾಖೆಯಿಂದ ಸಂಭಂದಪಟ್ಟ ಅಧಿಕಾರಿಗಳು ಹಾಜರಿದ್ದಾರೆ ಎಂದು ಮರು ಉತ್ತರ ಬಂದಿದೆ ಎನ್ನಲಾಗಿದೆ.


ಈ ವೇಳೆ ರಾಜಣ್ಣ ರವರು ಈ ಬಗ್ಗೆ ಡಿ ಸಿ ಯವರಿಗೆ ದೂರು ನೀಡಲಾಗುತ್ತದೆ ಕಾರಣ ಅನುಷ್ಠಾನ ಸಮಿತಿಯಲ್ಲಿ ಯೋಜನೆಗಳಿಗೆ ಸಂಭಂದಿಸಿದಾಗ ಜನರಿಗೆ ದಾಖಲೆ ಪತ್ರಗಳು ಅತೀ ಮುಖ್ಯವಾಗಿದ್ದು ಈ ವಿಷಯಗಳ ಚರ್ಚೆಗಳು ಬಂದಾಗ ಸಂಭಂದಪಟ್ಟ ಅಧಿಕಾರಿಗಳ ಉಪಸ್ಥಿತಿ ಬೇಕಾಗಿರುತ್ತದೆ.ಅವರೇ ಇಲ್ಲದಿದ್ದರೆ ಸಭೆಗೆ ಅರ್ಥ ವೇ ಇಲ್ಲದಂತೆ ಆಗುತ್ತೆ.ಈ ಬಗ್ಗೆ ಮೇಲಾಧಿಕಾರಿಗಳಿಗೆ ದೂರು ನೀಡಲಾಗುವುದು ಎಂದು ಸದಸ್ಯರುಗಳಿಗೆ ಹೇಳಿದ ಘಟನೆಯು ನಡೆಯಿತು.

ಬಳಿಕ ಸಭೆ ಮುಂದು ವರೆದು ಗೃಹಲಕ್ಷ್ಮಿ ಯೋಜನೆಯ ಪ್ರಗತಿ ಪರಿಶೀಲನೆ ಬಗ್ಗೆ ಸಿ ಡಿ ಪಿ ಓ ಮಾತನಾಡಿ ಸುಳ್ಯ ತಾಲೂಕಿನಲ್ಲಿ ಈ ವರೆಗೆ ಒಟ್ಟು 295 ಹೊಸ ಅರ್ಜಿ ಸ್ವೀಕಾರ ವಾಗಿದೆ.

ತಾಲೂಕಿನಲ್ಲಿ ಒಟ್ಟು 29 ಕೊರಗ ಕುಟುಂಬಗಳಿದ್ದು ಅದರಲ್ಲಿ 18 ಕುಟುಂಬಗಳಿಗೆ ಈಗಾಗಲೇ ಗೃಹಲಕ್ಷ್ಮಿ ಸೌಲಭ್ಯವನ್ನು ಒದಗಿಸಲಾಗಿದೆ. ಹೊಸದಾಗಿ ಪಡಿತರ ಚೀಟಿ ಮಾಡಿಸಿಕೊಂಡಿರುವವರ ಪೈಕಿ 7 ಜನ ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದು 3 ಫಲಾನುಭವಿಗಳ ಆಧಾರ್ ತಿದ್ದುಪಡಿ ಬಾಕಿ ಇದ್ದು ಬಾಕಿ ಇದ್ದ ಎರಡು ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದು ಒಂದು ಫಲಾನುಭವಿಯ ಆಧಾರ್ ಕಾರ್ಡಿನಲ್ಲಿ ಫೋನ್ ನಂಬರ್ ಅಪ್ಡೇಟ್ ಮಾಡಿಸದೆ ಇರುವ ಕಾರಣ ಹೊಸ ಆಧಾರ್ ಕಾರ್ಡ್ ಪಡೆಯದಿರುವ ಕಾರಣ ಅರ್ಜಿ ಸಲ್ಲಿಸಲು ಬಾಕಿ ಇರುತ್ತದೆ.

ಮೇಲಾಧಿಕಾರಿಗಳ ಕಚೇರಿಯಿಂದ 46 ಫಲಾನುಭವಿಗಳ ಪಟ್ಟಿಯನ್ನು ನೀಡಿದ್ದು ಸದ್ರಿ ಫಲಾನುಭವಿಗಳ ಎನ್‌ಸಿಪಿ ಫೈಲರ್ ಆಗಿದ್ದು ಹಣ ಬರಲು ಬಾಕಿ ಇರುತ್ತದೆ. ಇದರಲ್ಲಿ 14 ಫಲಾನುಭವಿಗಳ ಖಾತೆ ವಿವರ ಅಳವಡಿಸಿದ್ದು 11 ಫಲಾನುಭವಿಗಳು ಮರಣ ಹೊಂದಿರುತ್ತಾರೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಸದಸ್ಯರಾದ ಲತೀಫ್ ರವರು ಮಾತನಾಡಿ ಕೆಲವು ಫಲಾನುಭವಿಗಳು ದಾಖಲೆ ಪತ್ರ ಗೋಸ್ಕರ ಇಲಾಖೆಯನ್ನು ಸಂಪರ್ಕಿಸುವುದು ಸಹಜವಾಗಿರುತ್ತದೆ ಈ ಸಂದರ್ಭದಲ್ಲಿ ಅಧಿಕಾರಿಗಳು ಅವರಿಗೆ ಸ್ಪಂದನೆ ಕೊಡಬೇಕು ಮತ್ತು ಅವರಲ್ಲಿರುವ ದಾಖಲೆಗಳ ಕೊರತೆಯ ಬಗ್ಗೆ ಪೂರ್ಣವಾದ ವಿವರವನ್ನು ನೀಡಿ ಅವರೊಂದಿಗೆ ಜನಸ್ನೇಹಿ ಅಧಿಕಾರಿಯಾಗಿ ಸಹಕರಿಸಿ ಎಂದು ಮನವಿ ಮಾಡಿದರು.ಕೆಲವು ಸಂದರ್ಭದಲ್ಲಿ ಕಿರಿಯ ಅಧಿಕಾರಿಗಳು ಮಾಡುವ ಸಮಸ್ಯೆಯಿಂದ ಹಿರಿಯ ಅಧಿಕಾರಿಗಳ ಹೆಸರು ಹಾಳಾಗುವ ಪರಿಸ್ಥಿತಿ ಉಂಟಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಿಇಓ ರಾಜಣ್ಣ ರವರು ಮಾತನಾಡಿ ಪ್ರತಿಯೊಂದು ಸಭೆಗೂ ಸಂಬಂಧ ಪಟ್ಟ ಅಧಿಕಾರಿಗಳು ಭಾಗವಹಿಸುವುದು ಕಡ್ಡಾಯವಾಗಿದೆ ಕಾರಣ ಆ ಸಭೆಯಲ್ಲಿ ಅಧಿಕಾರಿಗಳು ಇದ್ದರೆ ಜನರು ಹೇಳುವ ಸಮಸ್ಯೆಗಳನ್ನು ತಿಳಿಯಲು ಆಗುತ್ತದೆ.ಇಲ್ಲದಿದ್ದರೆ ಯಾವ ಯಾವ ಯೋಜನೆ ಯಾವ ಯಾವ ಫಲಾನುಭವಿಗಳಿಗೆ ದೊರಕಲು ಬಾಕಿ ಇರುತ್ತದೆ ಎಂಬುದರ ಮಾಹಿತಿ ತಿಳಿಯಲು ಅಧಿಕಾರಿಗಳಿಗೆ ಕಷ್ಟವಾಗುತ್ತದೆ ಎಂದು ಹೇಳಿದರು. ಅಲ್ಲದೆ ವಿಶೇಷವಾಗಿ ಮನೆಗಳಲ್ಲಿ ವಯೋವೃದ್ಧರಾಗಿ ನಡೆದಾಡಲು ಕಷ್ಟದಲ್ಲಿರುವಂತವರಿಗೆ ಯೋಜನೆಗಳು ತಲುಪು ವಂತಹ ಕಾರ್ಯವನ್ನು ಸಮಿತಿಯ ಸದಸ್ಯರುಗಳುಹಾಗೂ ಅಧಿಕಾರಿಗಳು ಮಾಡಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿ ಸದಸ್ಯ ಅಬ್ಬಾಸ್ ಅಡ್ಕ ಗ್ರಾಮ ಸಭೆಗಳಲ್ಲಿ ಗ್ಯಾರಂಟಿ ಅನುಷ್ಠಾನದ ಸಮಿತಿಯ ಸದಸ್ಯರನ್ನು ಅವ್ಹಾನಿಸುವಂತೆ ಮಾಡಬೇಕೆಂದು ಕೇಳಿ ಕ್ಕೊಂಡರು.

ಅನ್ನ ಭಾಗ್ಯದ ಕುರಿತು ಮಾಹಿತಿ ನೀಡಿದ ಆಹಾರ ಇಲಾಖೆಯ ಅಧಿಕಾರಿ ಸುಳ್ಯ ತಾಲೂಕಿಗೆ ಅನ್ನ ಭಾಗ್ಯ ಯೋಜನೆಯಲ್ಲಿ ಇದುವರೆಗೆ 16 ಕೋಟಿ 59 ಲಕ್ಷದ 85 ಸಾವಿರ ರೂ ಬಂದಿರುತ್ತದೆ ಎಂದು ಆಹಾರ ಇಲಾಖೆಯ ಅಧಿಕಾರಿ ಮಾಹಿತಿ ನೀಡಿದರು.ಅನ್ನ ಭಾಗ್ಯ ಯೋಜನೆ ಬಗ್ಗೆ ಮಾತನಾಡಿದ ಅಧಿಕಾರಿ ಸೆಪ್ಟೆಂಬರ್ 2024ರ ತಿಂಗಳಲ್ಲಿ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಇತರ ಕಾರಣಗಳಿಂದ ಎನ್ ಟಿ ಸಿ ಐ ಮ್ಯಾಪಿಂಗ್ ಆಧಾರ ಸಮಸ್ಯೆ ನಗದು ವರ್ಗಾವಣೆ ಯಾಗದ 81 ಪಡಿತರ ಚೀಟಿದಾರರಿಗೆ ಸಂಬಂಧಿಸಿದ ನ್ಯಾಯಬೆಲೆ ಅಂಗಡಿಗಳ ಮೂಲಕ ಮಾಹಿತಿ ನೀಡಿ ಸರಿಪಡಿಸಲು ಸೂಚಿಸಲಾಗಿದೆ. ಹಾಗೂ ಗ್ರಾಮ ಪಂಚಾಯತ್ವಾರು ನಡೆದ ಗ್ಯಾರಂಟಿ ಅರ್ಜಿಗಳ ವಿಲೇವಾರಿ ಶಿಬಿರದಲ್ಲಿಯೂ ಮಾಹಿತಿ ನೀಡಲಾಗಿರುತ್ತದೆ ಎಂದು ಹೇಳಿದರು. ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆ ತಿದ್ದುಪಡಿ ಇತ್ಯಾದಿಗಳಿಗೆ ಫೆಬ್ರವರಿ 2025ರ ಅಂತ್ಯದವರೆಗೆ ಅವಕಾಶ ಇದ್ದು ಜನವರಿಯಿಂದ ಇವರಿಗೆ ತಾಲೂಕಿನಲ್ಲಿ ಒಟ್ಟು 1520 ಪಡಿತರ ಚೀಟಿ ತಿದ್ದುಪಡಿ ಅರ್ಜಿ ಸ್ವೀಕರಿತವಾಗಿದ್ದು ಎಲ್ಲಾ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿರುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಿಇಓ ರಾಜಣ್ಣ ಮಾತನಾಡಿ ಸುಳ್ಯದ ಪ್ರತಿಯೊಂದು ನ್ಯಾಯಬೆಲೆ ಅಂಗಡಿಯಿಂದ ಜನರು ಪಡೆದಿರುವ ಯೋಜನೆ ಎಷ್ಟು ಹಾಗೂ ಸಿಗದೇ ಇರುವ ಮತ್ತು ಸಮಸ್ಯೆಗಳಾಗಿರುವ ಫಲಾನುಭವಿಗಳ ಲೆಕ್ಕವನ್ನು ನೀಡಿದರೆ ಉತ್ತಮ.ಅದು ಅಧಿಕಾರಿಗಳಿಗೂ ಹಾಗೂ ಅಧ್ಯಕ್ಷರಿಗೂ ಸದಸ್ಯರುಗಳಿಗೂ ಉತ್ತಮವಾಗುತ್ತದೆ ಎಂದು ಹೇಳಿದರು.

ಗೃಹ ಜ್ಯೋತಿ ಯೋಜನೆಯ ಬಗ್ಗೆ ಮಾತನಾಡಿದ ಮೆಸ್ಕಾಂ ಅಧಿಕಾರಿ ಹರೀಶ್ ನಾಯ್ಕ ಅವರು ಸುಳ್ಯ ವಿಭಾಗದಲ್ಲಿ ಸುಮಾರು 38 ಕೋಟಿ ರೂಪಾಯಿಗಳು ಮತ್ತು ಸುಬ್ರಹ್ಮಣ್ಯ ವಲಯದಲ್ಲಿ 7 ಕೋಟಿ ರೂಪಾಯಿಗಳ ಅನುದಾನವನ್ನು ಜನರು ಪಡೆದುಕೊಂಡಿದ್ದಾರೆ ಎಂದು ಹೇಳಿದರು.

ಈ ಮೊದಲು ಸುಳ್ಯದಲ್ಲಿದ್ದ ಉಬರಡ್ಕ ಮತ್ತು ದುಗಲಡ್ಕ ಭಾಗದ ಸೆಕ್ಷನ್ ಗಳನ್ನು ಜಾಲ್ಸೂರು ವ್ಯಾಪ್ತಿಗೆ ಬದಲಾವಣೆ ಮಾಡಿರುವ ಕಾರಣ ಈ ಭಾಗದ ಜನರಿಗೆ ತೊಂದರೆ ಆಗುತ್ತಿದ್ದು ಇದನ್ನು ಸರಿಪಡಿಸುವಂತೆ ಅಧ್ಯಕ್ಷ ಹಮೀದ್ ರವರು ಹೇಳಿದರು. ಇದಕ್ಕೆ ಉತ್ತರಿಸಿದ ಹರೀಶ್ ನಾಯ್ಕ ರವರು ಉಬರಡ್ಕ, ದುಗಲಡ್ಕ, ಅಜ್ಜಾವರ, ಅಮರ ಪಡ್ನೂರು ಭಾಗವನ್ನು ಸಪರೇಟ್ ಹಾಗಿ ಒಂದೇ ಸೆಕ್ಷನ್ ಮಾಡಿ ಕೊಡುವ ಭರವಸೆಯನ್ನು ನೀಡಿದರು.
ಅಲ್ಲದೆ ಕಾವು ಮತ್ತು ಕೌಡಿಚ್ಚಾರು ದ್ವಿಪಥ ಲೈನ್ ಕಾಮಗಾರಿ ನಡೆಯುವ ಕಾರಣ ಮಂಗಳವಾರ ದಂದು ವಿದ್ಯುತ್ ಕಡಿತ ಗೊಳಿಸಲಾಗುತಿದ್ದು, ಇದೀಗ ಆ ಕೆಲಸ ಇಂದಿಗೆ ಪೂರ್ಣ ಗೊಳ್ಳಲಿದ್ದು ಮುಂದಿನ ವಾರದಿಂದ ವಿದ್ಯುತ್ ಕಡಿತ ಉಂಟಾಗದು ಎಂದು ಹೇಳಿದರು.ಸುಳ್ಯ ತಾಲೂಕಿಗೆ ಸಂಬಂಧಿಸಿದ ಒಟ್ಟು 27,936 ವಿದ್ಯುತ್ ಬಳಕೆದಾರರು ಇದ್ದು 26987 ವಿದ್ಯುತ್ ಬಳಕೆದಾರರು ಈಗಾಗಲೇ ಗ್ರಹ ಜ್ಯೋತಿ ಯೋಜನೆಯನ್ನು ಸೌಲಭ್ಯವನ್ನು ಪಡೆಯುತ್ತಿದ್ದು ಬಾಕಿ ಉಳಿದ 949 ವಿದ್ಯುತ್ ಬಳಕೆದಾರರ ಪೈಕಿ 82 ಬಳಕೆದಾರರು 200 ಯೂನಿಟ್ ಗಿಂತ ಹೆಚ್ಚು ಬಳಕೆ ಆಗುತ್ತಿರುವುದರಿಂದ ಗೃಹಜೋತಿ ಯೋಜನೆಯಿಂದ ಅನರ್ಹರಾಗಿರುತ್ತಾರೆ ಎಂದು ಮಾಹಿತಿ ನೀಡಿದರು.
ಯುವನಿಧಿ ಯೋಜನೆ ಬಗ್ಗೆ ಇದಕ್ಕೆ ಸಂಭಂದಪಟ್ಟ ಅಧಿಕಾರಿ ಮಂಜುಷಾ ಪದೇಲಾ ಮಾಹಿತಿ ನೀಡಿ ತಾಲೂಕಿಗೆ ಈ ಯೋಜನೆಯಲ್ಲಿ ಒಟ್ಟು 44.88 ಲಕ್ಷ ರೂ ಬಂದಿದೆ. ಪದವಿ ಕಾಲೇಜು ಗಳಲ್ಲಿ ವಿಶೇಷ ನೊಂದಣಿ ಅಭಿಯಾನವನ್ನು ಆಯೋಜಿಸು ಬಗ್ಗೆ ನೀಡಿದಾಗ ಇ ಓ ರಾಜಣ್ಣ ರವರು ಸಲಹೆ ನೀಡಿ ಸುಳ್ಯ ತಾಲೂಕಿನ 4 ಕಾಲೇಜುಗಳಿಂದ ಡಿಗ್ರಿ ಪೂರೈಸಿ ತೆರಳಿರುವವರ ಬಗ್ಗೆ ಮಾಹಿತಿ ಪಡೆದು ಈ ಯೋಜನೆ ಯಾರಿಗೆಲ್ಲ ತಲುಪಿದೆ ಹಾಗೂ ಇನ್ನೂ ಯಾರಿಗೆಲ್ಲ ತಲುಪಿಲ್ಲಾ ಎಂಬ ಬಗ್ಗೆ ಮಾಹಿತಿ ಸಂಗ್ರಹಣೆ ಮಾಡಿ. ಇದಕ್ಕೆ ಸದಸ್ಯರುಗಳು ಕೂಡ ಕೈ ಜೋಡಿಸಿ ಎಂದು ಹೇಳಿದರು. ಅರ್ಜಿ ರಿಜೆಕ್ಟ್ ಆಗಿರುವವರ ಬಗ್ಗೆ ಮಾಹಿತಿ ಪಡೆದು ಸದಸ್ಯರು ಗಳಿಗೆ ನೀಡಿದರೆ ಉತ್ತಮ ಎಂದು ಅವರು ಸಲಹೆ ನೀಡಿದರು.

ಅಲ್ಲದೆ ಸಭೆಯಲ್ಲಿ ಉಪಸ್ಥಿತರಿದ್ದ ಇತರ ಸದಸ್ಯರುಗಳು ಸಲಹೆ ಸೂಚನೆಗಳನ್ನು ನೀಡಿದರು.

ಇ ಓ ರಾಜಣ್ಣ ಸ್ವಾಗತಿಸಿ ವಂದಿಸಿದರು.