ಪೆರುವಾಜೆ ಶಾಲೆಯಲ್ಲಿ ವಿದ್ಯಾರ್ಥಿಗಳ ಕಲಿಕಾ ಹಬ್ಬ –

0

ಹೂವಿನ ಅಲಂಕಾರ ,ಮನಸೆಳೆಯುವ ಪ್ರವೇಶ ದ್ವಾರ

ಪೆರುವಾಜೆ ಸ.ಹಿ.ಪ್ರಾ.ಶಾಲೆಯಲ್ಲಿ ಕಲಿಕಾ ಹಬ್ಬವನ್ನು ಫೆ.25 ರಂದು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಬೆಳ್ಳಾರೆ ಕ್ಲಸ್ಟರ್ ನ ಸುಮಾರು 12 ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಹೂಗಳ ಅಲಂಕಾರ , ಮನ ಸೆಳೆಯುವ ಪ್ರವೇಶ ದ್ವಾರ ಎಲ್ಲರ ಮನ ಸೆಳೆದವು . ವಿದ್ಯಾರ್ಥಿಗಳೇ ರಚಿಸಿದ ಕ್ರಾಫ್ಟ್ ಗಳು ಶಾಲೆಯನ್ನು ಸಂದರವಾಗಿ ಸಿಂಗರಿಸಿದ್ದವು. ಅತಿಥೇಯ ಶಾಲೆಯ ವಿದ್ಯಾರ್ಥಿಗಳು ಬ್ಯಾಜ್ ಧರಿಸಿ ಸ್ವಯಂಸೇವಕರಾಗಿ ಎಲ್ಲರನ್ನೂ ಮಗುಳ್ನಗೆಯಿಂದ ಸ್ವಾಗತಿಸುತ್ತಿದ್ದರು. ಪೂರ್ವಾಹ್ನ ಉಪಹಾರ ವ್ಯವಸ್ಥೆಯನ್ನು ಮಾಡಲಾಗಿತ್ತು ಬಳಿಕ ಕಾರ್ಯಕ್ರಮ ಆರಂಭವಾಯಿತು .

ಅತಿಥೇಯ ಶಾಲೆಯ ಎಸ್‌.ಡಿ.ಎಂ.ಸಿ ಅಧ್ಯಕ್ಷರಾದ ವಿಜಯ ಆಚಾರ್ಯರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಿಕ್ಷಣ ಸಂಯೋಜಕರಾದ ಶ್ರೀಮತಿ ಸಂದ್ಯಾ ಕುಮಾರಿ ಹಾಗೂ ಪ್ರಾಥಮಿಕ‌ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಯಾಗಳಾದ ಮಾಯಿಲಪ್ಪರವರು ಕಲಿಕಾ ಹಬ್ಬದ ಫಲಕವನ್ನು ಅನಾವರಣಗೊಳಿಸಿ ಕಲಿಕಾ ಹಬ್ಬಕ್ಕೆ ಚಾಲನೆ ನೀಡಿದರು . ಪೆರುವಾಜೆ ಪಂಚಾಯತ್ ನ ವಾರ್ಡ್ ಸದಸ್ಯರಾದ ಪದ್ಮನಾಭ ಶೆಟ್ಟಿಯವರು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ಶ್ರೀಮತಿ ಸವಿತಾ, ಬೆಳ್ಳಾರೆ ಕ್ಲಸ್ಟರ್ ನ ಸಮೂಹ ಸಂಪನ್ಮೂಲ ವ್ಯಕ್ತಿಯಾದ ಶ್ರೀಮತಿ ಅನುರಾಧ, ಮುಖ್ಯ ಶಿಕ್ಷಕಿಯಾದ ಶ್ರೀಮತಿ ಶ್ರುತಿ , ಶಿಕ್ಷಕ ವೃಂದ , ವಿದ್ಯಾರ್ಥಿಗಳು ಪೋಷಕರು ಎಸ್‌ಡಿಎಂಸಿ ಸದಸ್ಯರು ಉಪಸ್ಥಿತರಿದ್ದರು.


ಉದ್ಘಾಟನಾ ಕಾರ್ಯಕ್ರಮದ ನಂತರ ಏಳು ಕಾರ್ನರ್ ಗಳಲ್ಲಿ ಕಲಿಕಾ ಹಬ್ಬದ ವಿವಿಧ ಸ್ಪರ್ಧೆಗಳಾದ ಗಟ್ಟಿ ಓದು, ಕಥೆ ಹೇಳುವುದು ,ರಸಪ್ರಶ್ನೆ ,ಅಂದದ ಕೈ ಬರಹ , ಮಮೊರಿ ಪರೀಕ್ಷೆ , ಸಂತೋಷದಾಯಕ ಗಣಿತ, ಕಥೆ ಕಟ್ಟುವುದು, ಮುಂತಾದ ಏಳು ಸ್ಪರ್ಧೆ ಗಳನ್ನು ನಡೆಸಲಾಯಿತು. ವಿದ್ಯಾರ್ಥಿಗಳು ಬಹಳ ಆಸಕ್ತಿಯಿಂದ ಭಾಗವಹಿಸಿದ್ದರು ಮಧ್ಯಾಹ್ನದ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಕೆಲವು ಆಟಗಳನ್ನು ಆಡಿಸಿ ಬಹುಮಾನ ವಿತರಿಸಲಾಯಿತು. ಪೋಷಕ ಬರಹಗಾರರ ಪುಸ್ತಕಗಳನ್ನು ಪ್ರದರ್ಶಿಸಲಾಯಿತು. ಕಲಿಕೋಪಕರಣಗಳ ಪ್ರದರ್ಶನ ಮಾಡಲಾಯಿತು . ಅದ್ಭುತವಾಗಿ ಹಾಗೂ ಅಚ್ಚುಕಟ್ಟಾಗಿ ನಡೆಸಿದ ಈ ಕಲಿಕಾ ಹಬ್ಬ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು. ಸಂಜೆ ಸಮಾರೋಪ ಕಾರ್ಯಕ್ರಮ ನಡೆಸಿ ಬಹುಮಾನ ವಿತರಿಸಲಾಯಿತು.