ಬೆಳ್ಳಾರೆಯ ಶ್ರೀ ಸದಾಶಿವ ಶಿಶು ಮಂದಿರದಲ್ಲಿ ಚಿಣ್ಣರ ಹಬ್ಬ

0

ಮಕ್ಕಳಲ್ಲಿ ಶಿಕ್ಷಣದ ಪಾಠದೊಂದಿಗೆ ಜೀವನ ಪಾಠ ತುಂಬುವ ಕಾರ್ಯ ಆಗಬೇಕಿದೆ : ನಾಯರ್ ಕೆರೆ

ಶ್ರೀ ಸದಾಶಿವ ಶಿಶು ಮಂದಿರ ಬೆಳ್ಳಾರೆ ಇದರ 16ನೇ ವರ್ಷಾಚರಣೆಯ ಅಂಗವಾಗಿ ಚಿಣ್ಣರ ಹಬ್ಬ-2025 ಎ. 23 ರಂದು ಅಜಪಿಲ ಶ್ರೀ ಮಹಾಲಿಂಗೇಶ್ವರ ಸಭಾಭವನದಲ್ಲಿ ನಡೆಯಿತು.

ಶ್ರೀ ಸದಾಶಿವ ಚಾರಿಟೇಬಲ್ ಸೊಸೈಟಿ ಮತ್ತು ಶ್ರೀ ಸದಾಶಿವ ಶಿಶು ಮಂದಿರದ ಅಧ್ಯಕ್ಷ ಸುಬ್ರಹ್ಮಣ್ಯ ಜೋಶಿ ದೀಪ ಪ್ರಜ್ವಲನ ಮಾಡಿದರು. ಸಂಸ್ಥೆಯ ಕಾರ್ಯದರ್ಶಿ ಶ್ರೀರಾಮ ಪಾಟಾಜೆ ಮತ್ತು ಕೋಶಾಧಿಕಾರಿ ರಾಜಾರಾಂ ಕಾವಿನಮೂಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ದೀಪ ಪ್ರಜ್ವಲನೆ ಬಳಿಕ ಸಂಸ್ಥೆಯ ಪುಟಾಣಿಗಳಿಂದ, ಹಿರಿಯ ವಿದ್ಯಾರ್ಥಿಗಳಿಂದ ಹಾಗೂ ಮಾತೃಮಂಡಳಿಯವರಿಂದ
ವಿವಿಧ ಜಾನಪದ, ಶಾಸ್ತ್ರೀಯ ಸಂಗೀತ, ಭರತನಾಟ್ಯ ಕಾರ್ಯಕ್ರಮ ನಡೆಯಿತು. ಪೋಷಕರಾದ ರವಿಶಂಕರ ಕಂಡಿಕಟ್ಟ ಕಾರ್ಯಕ್ರಮ ನಿರೂಪಿಸಿದರು.

ಬಳಿಕ ಶ್ರೀ ಸದಾಶಿವ ಚಾರಿಟೇಬಲ್ ಸೊಸೈಟಿ ಅಧ್ಯಕ್ಷ ಬಿ. ಸುಬ್ರಹ್ಮಣ್ಯ ಜೋಶಿಯವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್ ಕೆರೆ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಬದುಕಿನಲ್ಲಿ ಎಲ್ಲವೂ ಸ್ಪರ್ಧೆಯಾಗಿ ಬದಲಾಗಿದೆ. ಬದುಕು ವಾಸ್ತವವಾದುದು. ವಾಸ್ತವ ಬದುಕಿಗೆ ಪೂರಕವಾಗಿ ಮಕ್ಕಳನ್ನು ಬೆಳೆಸುವ ಹೊಣೆ ಪೋಷಕರದ್ದು. ಶಿಕ್ಷಣದ ಪಾಠದೊಂದಿಗೆ ಜೀವನ ಪಾಠವನ್ನೂ ಮಕ್ಕಳಲ್ಲಿ ತುಂಬುವ ಕಾರ್ಯ ಆಗಬೇಕು ಎಂದರು.

ಬೆಳ್ಳಾರೆ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಆರ್.ಕೆ. ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಕಿಂಡರ್ ಗಾರ್ಡನ್ ಗಳು ಮಕ್ಕಳನ್ನು ಶಾಲೆಗೆ ಹೋಗಲು ತಯಾರು ಮಾಡಿದರೆ, ಇಂಥ ಶಿಶು ಮಂದಿರಗಳು ಮಕ್ಕಳನ್ನು ಬದುಕು ರೂಪಿಸಲು ತಯಾರು ಮಾಡುತ್ತವೆ ಎಂದರು.

ಶ್ರೀ ಸದಾಶಿವ ಚಾರಿಟೇಬಲ್ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಪಿ.ಎಸ್. ಚಿದಾನಂದ ರಾವ್ ಉಪಸ್ಥಿತಿರಿದ್ದು ಮಾತನಾಡಿದರು.

ವೇದಿಕೆಯಲ್ಲಿದ್ದ ಸಂಸ್ಥೆಯ ಮಾತಾಜಿ ತೇಜೇಶ್ವರಿ ಸಂಸ್ಥೆಯ ವರದಿ ವಾಚಿಸಿದರು. ಅವರಿಗೆ ಗುರು ವಂದನೆ ನೀಡಿ ಗೌರವಿಸಲಾಯಿತು. ಸಹಾಯಕಿ ಶ್ರೀಮತಿ ಮೀನಾಕ್ಷಿಯವರಿಗೂ ಗೌರವಾರ್ಪಣೆ ಮಾಡಲಾಯಿತು.

ಸಂಸ್ಥೆಯ ಅಧ್ಯಕ್ಷ ಸುಬ್ರಹ್ಮಣ್ಯ ಜೋಶಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ಪಾಶ್ಚಾತ್ಯ ಸಂಸ್ಕ್ರತಿಯ ಕಡೆಗೆ ಮಾರು ಹೋಗಿ ಜೀವನದಲ್ಲಿ ಕಷ್ಟವನ್ನು ಅನುಭವಿಸುವ ಈ ಕಾಲಘಟ್ಟದಲ್ಲಿ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಸಂಸ್ಕಾರಯುತ ಶಿಕ್ಷಣವನ್ನು ನಮ್ಮ ಶಿಶು ಮಂದಿರದಲ್ಲಿ ನೀಡಲಾಗುತ್ತಿದೆ. ಭವಿಷ್ಯದಲ್ಲಿ ಬೇರೆ ಶಾಲೆಗೆ ಹೋಗುವಾಗ ಇಲ್ಲಿಯ ವಿದ್ಯಾರ್ಥಿಗಳನ್ನು ವಿಶೇಷವಾಗಿ ಗುರುತಿಸುವಂತ ಪ್ರತಿಭಾನ್ವಿತರಾಗಿ ಇಲ್ಲಿಯ ವಿದ್ಯಾರ್ಥಿಗಳು ಬೆಳೆಯುತ್ತಾರೆ ಎಂದರು.

ಸಂಸ್ಥೆಯ ಕಾರ್ಯದರ್ಶಿ ಶ್ರೀರಾಮ ಪಾಟಾಜೆ ವಂದಿಸಿದರು. ಕು. ತನ್ವಿ ಅರ್ನಾಡಿ ಪ್ರಾರ್ಥಿಸಿದರು. ಪ್ರದೀಪ್ ಕುಮಾರ್ ರೈ ಪನ್ನೆ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ನೆನಪಿನ ಕಾಣಿಕೆ ನೀಡಲಾಯಿತು.