ಅಮರಮುಡ್ನೂರು ಗ್ರಾಮ ಸಭೆ

0

ಗ್ರಾಮದ ರಸ್ತೆ ಮತ್ತು ಕುಡಿಯುವ ನೀರಿನ ಸಮರ್ಪಕ ನಿರ್ವಹಣೆ ಕುರಿತು ಸುದೀರ್ಘ ಚರ್ಚೆ

ಅಮರಮುಡ್ನೂರು ಗ್ರಾಮ ಪಂಚಾಯತ್ ಇದರ 2024-25 ನೇ ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆಯು ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಜಾನಕಿ ಕಂದಡ್ಕ ರವರ ಅಧ್ಯಕ್ಷತೆಯಲ್ಲಿ ಎ.23 ರಂದು ಪಂಚಾಯತ್ ಸಭಾಭವನದಲ್ಲಿ ನಡೆಯಿತು.

ನಾಡಗೀತೆಯೊಂದಿಗೆ ಸಭೆಯುಆರಂಭಗೊಂಡಿತು. ಸಿಬ್ಬಂದಿ ಸುಕುಮಾರಿ ಯವರು ವರದಿ ವಾಚಿಸಿದರು.
ಗತ ಸಭೆಯ ವರದಿಯ ಬಗ್ಗೆ ವರದಿ ಮಂಡಿಸುವಂತೆ ರಾಧಾಕೃಷ್ಣ ಬೊಳ್ಳೂರು ಹೇಳಿದರು.


ಕಳೆದ ಗ್ರಾಮ ಸಭೆಯ ನಿರ್ಣಯವನ್ನು ಏನು ಮಾಡಿದ್ದೀರಿ ?ಗ್ರಾಮದ ರಸ್ತೆಗಳ ಮತ್ತು ಕುಡಿಯುವ ನೀರಿನ ವ್ಯವಸ್ಥೆ ನಿರ್ವಹಣೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಈ ಎರಡು ವಿಷಯದ ಕುರಿತು ಸದಸ್ಯರು ಯಾಕೆ ಮುತುವರ್ಜಿ ವಹಿಸಿಲ್ಲ. ಕ್ರಿಯಾಯೋಜನೆಯಲ್ಲಿ ರಸ್ತೆ ದುರಸ್ತಿಗೆ ಯಾಕೆ ಅನುದಾನ ಇಟ್ಟಿಲ್ಲ. ಅನುಷ್ಠಾನ ಮಾಡುವುದಿಲ್ಲ ಯಾಕೆ ? ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಲು ಪಂಚಾಯತ್ ನಿಂದ ಸಾಧ್ಯವಾಗುವುದಿಲ್ಲ ಎಂದು ಗ್ರಾಮಸಭೆಯಲ್ಲಿ ನಿರ್ಣಯ ಮಾಡಿ ಎಂದು ಒತ್ತಾಯಿಸಿದರು.
ಇದಕ್ಕೆ ಉತ್ತರಿಸಿದ ಪಿ.ಡಿ.ಒ ದಯಾನಂದ ಪತ್ತುಕುಂಜ ರವರು ಪಂಚಾಯತ್ 15 ನೇ ಹಣಕಾಸು ಯೋಜನೆಯಡಿಯಲ್ಲಿ ಶಾಶ್ವತ ಕಾಮಗಾರಿಗೆ ಅವಕಾಶವಿದ್ದು ರಸ್ತೆ ದುರಸ್ತಿಗೆ ಅವಕಾಶ ಇರುವುದಿಲ್ಲ. ಪ್ರಸ್ತುತ ಕುಡಿಯುವ ನೀರಿನ ನಿರ್ವಹಣೆ ಸರಿಯಾಗಿ ನಿರ್ವಹಿಸಲಾಗುತ್ತಿದೆ. ಸ್ವಂತ ನಿಧಿಯಲ್ಲಿ ಅನುದಾನವಿರುವುದಿಲ್ಲ. ಈ ವರ್ಷ ಇಬ್ಬರು ಸಿಬ್ಬಂದಿಗಳು ನಿವೃತ್ತಿ ಹೊಂದುವವರಿದ್ದು ಸ್ವಂತ ನಿಧಿಯಿಂದ ಗೌರವ ಧನ ನೀಡಬೇಕಾಗಿರುವುದರಿಂದ ಪ್ರಸ್ತುತ ವರ್ಷದಲ್ಲಿ ಅನುದಾನ ನೀಡಲಾಗುವುದಿಲ್ಲ ಎಂದು ಹೇಳಿದರು.


ಈ ಬಗ್ಗೆ ಸುತ್ತೋಲೆಯನ್ನು ಸಭೆಗೆ ಓದಿ ತಿಳಿಸುವಂತೆ ರಾಧಾಕೃಷ್ಣ ಬೊಳ್ಳೂರು ರವರು ಒತ್ತಾಯಿಸಿದರು.
ಪಿ.ಡಿ.ಒ ರವರು ಸರಕಾರದ ಸುತ್ತೋಲೆಯನ್ನು ಓದಿ ವಿವರ ನೀಡಿದರು.
ರಸ್ತೆ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ನೊಡೆಲ್ ಅಧಿಕಾರಿ ಯವರು ಬಹಳ ಆರೋಗ್ಯಕರ ಚರ್ಚೆ ರಸ್ತೆ ಮತ್ತು ಕುಡಿಯುವ ನೀರಿನ ಬಗ್ಗೆ ಸುದೀರ್ಘ ಚರ್ಚೆ ನೀವೊಬ್ಬರೆ ಮಾತನಾಡಿದ್ದೀರಿ.
ಗ್ರಾಮ ಸಭೆಯನ್ನು ಮುಂದುವರಿಸಿಕೊಂಡು ಉಳಿದ ಗ್ರಾಮಸ್ಥರಿಗೆ ಮಾತನಾಡಲು ಅವಕಾಶ ಕಲ್ಪಿಸುವಂತೆ ಸೂಚಿಸಿದರು.


ಇಂಜಿನಿಯರ್ ಮಣಿಕಂಠ ರವರು ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯ ಕುರಿತು ಮಾಹಿತಿ ನೀಡಲು ಮುಂದಾದ ಸಂದರ್ಭದಲ್ಲಿ ಆಕ್ಷೇಪಿಸಿದ ಬೊಳ್ಳೂರು ರವರು ನಮ್ಮ ಗ್ರಾಮದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ತಕ್ಕ ಮಟ್ಟಿಗೆ ಸರಿಯಾಗಿತ್ತು ನಿಮ್ಮ ಯೋಜನೆಯಿಂದ ಎಲ್ಲವನ್ನೂ ನಾಶ ಪಡಿಸುತ್ತಿದ್ದೀರಿ. ಯೋಜನೆಯ ಟೆಂಡರ್ ನಾರ್ಮ್ಸ್ ಏನಿದೆ..? ಯಾವುದನ್ನು ತಿಳಿಸದೆ ಏಕಾಏಕಿಯಾಗಿ ಗುತ್ತಿಗೆದಾರರು ಬಂದು ರಸ್ತೆ ಅಗೆದು ಇದ್ದ ಒಳ್ಳೆಯ ರಸ್ತೆಯನ್ನು ಹಾಳು ಮಾಡಿದ್ದೀರಿ. ಇದರಿಂದ ಜನ ರೋಸಿ ಹೋಗಿದ್ದಾರೆ. ರಸ್ತೆಯನ್ನು ಅಗೆದು ಕೆಲಸ ಮಾಡಲು ಅನುಮತಿ ಕೊಟ್ಟವರು ಯಾರು ? ಜೆಸಿಬಿ ಬಳಸಿ ರಸ್ತೆಯನ್ನು ತುಂಡರಿಸಿಕೊಂಡು ಸಾರ್ವಜನಿಕರಿಗೆ ತೊಂದರೆ ಮಾಡಿರುವುದಲ್ಲದೆ ಸಮರ್ಪಕವಾಗಿ ಅದನ್ನು ಮತ್ತೆ ಹಿಂದಿನಂತೆ ಮುಚ್ಚಿ ಹೋಗುವುದಿಲ್ಲ. ಈ ಬಗ್ಗೆ ಗ್ರಾಮದ ಪಂಚಾಯತ್ ಗಮನಕ್ಕೆ ತಂದು ಗ್ರಾಮಸ್ಥರಿಗೆ ಸರಿಯಾದ ಮಾಹಿತಿ ನೀಡಿ ಮಾತುಕತೆ ಮಾಡುವ ಮೂಲಕ ವಿಶ್ವಾಸಕ್ಕೆ ತೆಗೆದುಕೊಂಡು ಕಾಮಗಾರಿ ಮುಂದುವರಿಸಬೇಕು. ಮನೆಗಳಿಗೆ ಹೋಗುವ ಸಂಪರ್ಕದ ರಸ್ತೆಯನ್ನು ಅಗೆದು ಹಾಕಿರುತ್ತೀರಿ. ಅನುಮತಿ ಇಲ್ಲದೆ ಈ ರೀತಿಯಾಗಿ ರಸ್ತೆ ತುಂಡರಿಸಿ ಸಾರ್ವಜನಿಕರಿಗೆ ತೊಂದರೆ ನೀಡಿರುವುದರ ವಿರುದ್ಧವಾಗಿ ಪಂಚಾಯತ್ ಗ್ರಾಮ ಸಭೆಯಲ್ಲಿ ನಿರ್ಣಯ ಮಾಡಿ ಕೋರ್ಟಿಗೆ ಹೋಗಲು ಸಿದ್ದರಿದ್ದೇವೆ ಎಂದು ಆರೋಪಿಸಿದರು.


ಇದಕ್ಕೆ ಪೂರಕವಾಗಿ ಮಾತನಾಡಿದ ಅಶೋಕ್ ಚೂಂತಾರು ಕಾಮಗಾರಿ ಕೆಲಸ ಮಾಡುವಾಗ ಶೇಣಿಯಲ್ಲಿ ಕಳೆದ ವರ್ಷ ಅಳವಡಿಸಿದ ಪಂಚಾಯತ್ ನ ಹೊಸ ಪೈಪು ಲೈನ್ ಸಂಪರ್ಕವನ್ನು ಕಡಿತಗೊಳಿಸಿ ಕೆಲವು ಮನೆಗಳಿಗೆ ನೀರಿನ ವ್ಯವಸ್ಥೆಗೆ ಸಮಸ್ಯೆಯಾಗಿದೆ. ಗುತ್ತಿಗೆದಾರರು ಜವಬ್ದಾರಿ ವಹಿಸಿಕೊಂಡು ಕೆಲಸ ನಿರ್ವಹಿಸಬೇಕು.ಪಂಚಾಯತ್ ಪೈಪು ಲೈನ್ ಮತ್ತೆ ಹಿಂದಿನ ಹಾಗೆ ಅಳವಡಿಸಿಕೊಡುವಂತೆ ಒತ್ತಾಯಿಸಿದರು.

ವಿವಿಧ ಇಲಾಖೆಯ ಅಧಿಕಾರಿಗಳು ಯೋಜನೆಗಳ ಮಾಹಿತಿ ನೀಡಿದರು.
ವೇದಿಕೆಯಲ್ಲಿ ನೊಡೆಲ್ ಅಧಿಕಾರಿ ಯುವಜನ ಕ್ರೀಡಾ ಇಲಾಖೆಯ ಅಧಿಕಾರಿ ದೇವರಾಜ್ ಮುತ್ಲಾಜೆ, ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಭುವನೇಶ್ವರಿ ಪದವು, ಸದಸ್ಯಾರಾದ ಶ್ರೀಮತಿ ಪದ್ಮಪ್ರಿಯಾ ಮೇಲ್ತೋಟ, ಕೃಷ್ಣ ಪ್ರಸಾದ್ ಮಾಡಬಾಕಿಲು, ದಿವಾಕರ ಬಿ, ಶ್ರೀಮತಿ ದಿವ್ಯಾ ಎಂ,ವೆಂಕಟ್ರಮಣ ಇಟ್ಟಿಗುಂಡಿ,
ಶ್ರೀಮತಿ ಶಶಿಕಲಾ ಕೇನಡ್ಕ,ಡಿ.ಜಯಪ್ರಕಾಶ್ ದೊಡ್ಡಿಹಿತ್ಲು,ಹೂವಪ್ಪ ಗೌಡ ಅರ್ನೋಜಿ, ಅಶೋಕ್ ಚೂಂತಾರು, ಶ್ರೀಮತಿ ತೇಜಾವತಿ ಎಂ, ಜನಾರ್ದನ ಪಿ, ರಾಧಾಕೃಷ್ಣ ಕೆ,
ಶ್ರೀಮತಿ ಸೀತಾ ಹೆಚ್,
ಶ್ರೀಮತಿ ಮೀನಾಕ್ಷಿ ಉಪಸ್ಥಿತರಿದ್ದರು.
ಪಿ.ಡಿ.ಒ ದಯಾನಂದ ಪತ್ತುಕುಂಜ ಸ್ವಾಗತಿಸಿದರು.
ಪಂಚಾಯತ್ ಸಿಬ್ಬಂದಿ ವರ್ಗದವರು ಸಹಕರಿಸಿದರು.