ಜಾತಿ ಭೇದ, ಧರ್ಮ ಭೇದ ಮರೆತು ಖಂಡಿಸಬೇಕು – ಮೋಹನ್ ದಾಸ್ ಬಲ್ಕಾಡಿ
ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಹತ್ಯಾಕಾಂಡ ಭಾರತೀಯರನ್ನು ತಲೆ ತಗ್ಗಿಸುವಂತೆ ಮಾಡಿದೆ. ಇಂತಹ ಹೀನಾಯ ಕೃತ್ಯವೆಸಗಿದ ದಿಷ್ಟರಿಗೆ ತಕ್ಕ ಶಿಕ್ಷೆಯಾಗಬೇಕು. ನೂರಾರು ವರ್ಷಗಳ ಹಿಂದಿನಿಂದಲೂ ಭಾರತದಲ್ಲಿ ಹಿಂದೂಗಳ ಹತ್ಯಾಕಾಂಡ ಆಗುತ್ತಲೇ ಬಂದಿದೆ. ಅಂದಿನಿಂದ ಆರಂಭವಾದ ಹಿಂದೂಗಳ ಕಣ್ಣೀರು ಇಂದಿಗೂ ನಿಂತಿಲ್ಲ. ಇಂತಹ ದುಶ್ಕೃತ್ಯವನ್ನು ನಾವು ಜಾತಿ ಮತ ಭೇದ ಮರೆತು ಖಂಡಿಸಬೇಕು. ಘಟನೆಯಲ್ಲಿ ಹುತಾತ್ಮರಾದ ಭಾರತೀಯರಿಗಾಗಿ ಕಂಬನಿ ಮಿಡಿಯುವ ಮೂಲಕ ಶ್ರದ್ಧಾಂಜಲಿ ಅರ್ಪಿಸುವ ಎಂದು ಸಾಮಾಜಿಕ ಕಾರ್ಯಕರ್ತ ಮೋಹನ್ ದಾಸ್ ಬಲ್ಕಾಡಿ ಹೇಳಿದರು.
ಅವರು ಏ. 25ರಂದು ಬೆಳ್ಳಾರೆಯಲ್ಲಿ ನಡೆದ ಪಹಲ್ಗಾಮ್ ಹತ್ಯಾಕಾಂಡದ ವಿರುದ್ಧದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಬೆಳ್ಳಾರೆ ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದ ಮುಂಭಾಗದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯನ್ನು ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದ ಮೊಕ್ತೇಸರರಾದ ಲಕ್ಷ್ಮೀನಾರಾಯಣ ಶ್ಯಾನುಭಾಗ್ ಮಣಿಕ್ಕಾರ, ಸುರೇಶ್ ಶೆಣೈ ಬೆಳ್ಳಾರೆ, ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು ಮತ್ತು ಬೆಳ್ಳಾರೆ ಗ್ರಾ.ಪಂ. ಅಧ್ಯಕ್ಷೆ ನಮಿತಾ ಎಲ್. ರೈ ಉದ್ಘಾಟಿಸಿದರು. ಬಳಿಕ ಮೇಲಿನ ಪೇಟೆಯ ಅಚಲಾಪುರ ಕಟ್ಟೆಯ ತನಕ ದೀಪ ಹಿಡಿದು ಮೆರವಣಿಗೆ ನಡೆಯಿತು.









ಪ್ರತಿಭಟನಾ ಸಭೆಯ ವೇದಿಕೆಯಲ್ಲಿ ಯೋಧ ರತ್ನಾಕರ ಬಾಳಿಲ, ನಿವೃತ್ತ ಯೋಧರಾದ ಗಣೇಶ್ ಐವರ್ನಾಡು ಮತ್ತು ಶ್ರೀಧರ ಸಾರಕರೆ ಉಪಸ್ಥಿತರಿದ್ದರು. ಶೈಲೇಶ್ ನೆಟ್ಟಾರು ಕಾರ್ಯಕ್ರಮ ನಿರೂಪಿಸಿದರು.
ಬೆಳ್ಳಾರೆ ಪೇಟೆಯ ಎಲ್ಲಾ ವರ್ತಕರು ತಮ್ಮ ಅಂಗಡಿ ಮುಂಗಟ್ಟು ಮುಚ್ಚಿ ಮೆರವಣಿಗೆಯಲ್ಲಿ ಭಾಗವಹಿಸಿದರೆ, ರಿಕ್ಷಾ ಚಾಲಕರು, ಹಾಗೂ ಸಾರ್ವಜನಿಕರು ಧರ್ಮ ಭೇದವಿಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಪಾಳ್ಗೊಂಡಿದ್ದರು.












