ರಂಗಮನೆಯಲ್ಲಿ ಗಾನ ನೃತ್ಯ ಅಕಾಡೆಮಿಯ ” ಆರೋಹಣ – 2025 ” ಸಮೂಹ ನೃತ್ಯ

0

ಸುಳ್ಯದ ಹಳೆಗೇಟಿನಲ್ಲಿರುವ ರಂಗಮನೆಯಲ್ಲಿ ಗಾನನೃತ್ಯ ಅಕಾಡೆಮಿ ಸುಳ್ಯ ಶಾಖೆಯ ವತಿಯಿಂದ ‘ಆರೋಹಣ-2025’ ಎಂಬ ಸಮೂಹ ನೃತ್ಯ ಕಾರ್ಯಕ್ರಮವು ಜರುಗಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಸಂಸ್ಥೆಯ ನಿರ್ದೇಶಕಿ ವಿದ್ಯಾಶ್ರೀ ರಾಧಾಕೃಷ್ಣ ಇವರು , ಸುಳ್ಯದಲ್ಲಿ ಪ್ರಾರಂಭಗೊಂಡ ಈ ಸಂಸ್ಥೆಯು 29 ವರ್ಷಗಳನ್ನು ಪೂರೈಸಿ 30ನೇ ವರ್ಷಕ್ಕೆ ಕಾಲಿಡುತ್ತಿದೆ. ಇದು ಬಹಳ ಉತ್ತಮ ಬೆಳವಣಿಗೆ ಹಾಗೂ ಭಾರತೀಯ ಸಾಂಸ್ಕೃತಿಕ ಕಲೆಯಾದ ಭರತನಾಟ್ಯಕ್ಕೆ ಸುಳ್ಯದ ಜನತೆ ನೀಡಿದ ಪ್ರೋತ್ಸಾಹದ ಪರಿಣಾಮ ಎಂದರು.

ಮುಖ್ಯ ಅತಿಥಿಗಳಾಗಿದ್ದ ದೆಹಲಿ-ಕರ್ನಾಟಕ ಸಂಘದ ಮಾಜಿ ಅಧ್ಯಕ್ಷರಾದ
ವಸಂತ ಶೆಟ್ಟಿ ಬೆಳ್ಳಾರೆಯವರು ಮಾತನಾಡಿ, ಸುಳ್ಯದಂತಹ ಗ್ರಾಮೀಣ ಪ್ರದೇಶದ ಪ್ರತಿಭೆಗಳನ್ನು ಬೆಳೆಸುತ್ತಿರುವ ಸಂಸ್ಥೆಗೆ ಶುಭ ಹಾರೈಸಿ, ಗ್ರಾಮೀಣ ಪ್ರದೇಶದ ಈ ವಿದ್ಯಾರ್ಥಿಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳಗಿ ಸುಳ್ಯದ ಕೀರ್ತಿಯನ್ನು ಪಸರಿಸಲಿ ಎಂದು ಹಾರೈಸಿದರು.

ಸುಳ್ಯ ಸಂಸ್ಥೆಯ ವಿದ್ಯಾರ್ಥಿಗಳನ್ನು ಅತ್ಯಂತ ಯಶಸ್ವಿಯಾಗಿ ತರಬೇತುಗೊಳಿಸಿದ ಶಿಕ್ಷಕಿ ವಿದುಷಿ ಮಂಜುಶ್ರೀ ರಾಘವ್ ಇವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಅಲ್ಲದೇ ಸಂಸ್ಥೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ದತ್ತಿ ಪ್ರಶಸ್ತಿ ಹಾಗೂ ಅವರ ಸಾಧನೆಗಳನ್ನು ಗುರುತಿಸಿ ಸನ್ಮಾನಿಸಲಾಯಿತು. ಸುಮಾರು 85ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ತಮ್ಮ ಕಲಾಪ್ರದರ್ಶನವನ್ನು ನೀಡಿದರು.

ಈ ಆರೋಹಣ ಕಾರ್ಯಕ್ರಮವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಯೋಗದೊಂದಿಗೆ ಜರುಗಿತು.

ಕಾರ್ಯಕ್ರಮವನ್ನು ಕುಮಾರಿ ಅನಘಾ ಆರ್.ಯು. ನಿರೂಪಿಸಿದರು. ಸಂಸ್ಥೆಯ ಕಾರ್ಯದರ್ಶಿ ರಾಧಾಕೃಷ್ಣ ಭಟ್ ವಂದಿಸಿದರು.