ಕಾಂಕ್ರೀಟ್ ರಸ್ತೆ ಜಗ್ಗಿದೆ – ಗುತ್ತಿಗೆದಾರರು, ಅಧಿಕಾರಿಗಳು ಕೆಲಸ ಮಾಡದಿರುವುದಕ್ಕೆ ಜನರಿಂದ ನಾವು ಮಾತು ಕೇಳಬೇಕಾಗಿದೆ
ಶಾಸಕರ ಎದುರು ರಸ್ತೆ ಸಮಸ್ಯೆ ಹೇಳಿಕೊಂಡ ನ.ಪಂ. ಸದಸ್ಯರು
ಮಳೆಗಾಲ ಮುಗಿಯುವ ತನಕ ಕಾಮಗಾರಿ ನಿಲ್ಲಿಸಿ.ಅಗೆದಿರುವ ರಸ್ತೆ ಸರಿಪಡಿಸಿ : ಶಾಸಕರ ಸೂಚನೆ
ಸುಳ್ಯ ನಗರದ ಕುಡಿಯುವ ನೀರು ಕಾಮಗಾರಿಯಿಂದ ರಸ್ತೆ ಅವ್ಯವಸ್ಥೆಯ ಕುರಿತು ಪಂಚಾಯತ್ ಸದಸ್ಯರು ನ.ಪಂ. ಸಭೆಗೆ ಬಂದಿದ್ದ ಶಾಸಕಿ ಭಾಗೀರಥಿ ಮುರುಳ್ಯ ರವರ ಮುಂದೆ ಸಮಸ್ಯೆ ಹೇಳಿಕೊಂಡ ಘಟನೆ ನಡೆದಿದ್ದು, ಮಳೆಗಾಲ ಮುಗಿಯುವ ತನಕ ಪೈಪ್ ಕಾಮಗಾರಿ ಕೆಲಸ ನಿಲ್ಲಿಸಬೇಕು. ಹಾಗೂ ಅಗೆದ ರಸ್ತೆಯನ್ನು ಸಂಚಾರ ಯೋಗ್ಯವನ್ನಾಗಿಸಬೇಕು ಎಂದು ಶಾಸಕರು ಇಂಜಿನಿಯರ್ ರಿಗೆ ಖಡಕ್ ಸೂಚನೆ ನೀಡಿದ್ದಾರೆ.
ನ.ಪಂ. ಸಾಮಾನ್ಯ ಸಭೆಯು ಅಧ್ಯಕ್ಷೆ ಶಶಿಕಲಾ ನೀರಬಿದಿರೆಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಶಾಸಕರು ಸಭೆಗೆ ಬರುವ ಸಂದರ್ಭ ಅಮೃತ್ 2 ಯೋಜನೆಯ ಕುರಿತು ಸದಸ್ಯರು ಚರ್ಚೆ ನಡೆಸುತಿದ್ದರು. ಶಾಸಕರು ಬಂದು ಕುಳಿತ ಬಳಿಕ ಸದಸ್ಯ ಎಂ. ವೆಂಕಪ್ಪ ಗೌಡರು ಮಾತನಾಡಿ, “ನಗರ ವ್ಯಾಪ್ತಿಯಲ್ಲಿ ಅಮೃತ್ 2 ಯೋಜನೆ ಕಾಮಗಾರಿಯ ಸಂದರ್ಭ ರಸ್ತೆ ಅಗೆದು ಸಂಚಾರ ದುಸ್ತರವನ್ನಾಗಿಸಿದ್ದಾರೆ.

ಅಧಿಕಾರಿಗಳು, ಗುತ್ತಿಗೆದಾರರು ಸರಿಯಾಗಿ ಕೆಲಸ ಮಾಡದೇ ಇರುವುದರಿಂದ ಜನರು ನಮಗೆ ಏನೇನು ಮಾತು ಹೇಳುತ್ತಿದ್ದಾರೆ. ಪಂಚಾಯತ್ ನ ಎಲ್ಲ ಸದಸ್ಯರಿಗೆ 10 ಲಕ್ಷದಂತೆ ಹೋಗಿದೆಯಂತೆ ಎಂಬ ಮಾತೂ ಕೇಳಬೇಕಾಗಿದೆ. ನಮಗೆಬತುಂಬಾ ನೋವಾಗಿದೆ. ಗತಿಗೆಟ್ಟು ಬಂದ ಸದಸ್ಯರು ನಾವಲ್ಲ. ಆ ರೀತಿಯ ಹಣ ಮುಟ್ಟಲು ಎಂದ ಅವರು, ನಾನು ವಿನಯರ ಮೇಲೆ ಆರೋಪ ಮಾಡುವುದಿಲ್ಲ. ಅವರು ಈ ಯೋಜನೆಯಲ್ಲಿ ಮುಂಚೂಣಿಯಲ್ಲಿದ್ದುದರಿಂದ ಅವರು ಈ ಬಗ್ಗೆ ಹೇಳಬೇಕು” ಎಂದು ಹೇಳಿದರಲ್ಲದೆ, “ಗುರುಂಪಿನಲ್ಲಿ ಕಾಂಕ್ರೀಟ್ ರಸ್ತೆ ಜಗ್ಗಿರುವ ಕುರಿತು ಪ್ರಸ್ತಾಪಿಸಿದರು.









ಸದಸ್ಯ ಡೇವಿಡ್ ದೀರಾ ಕ್ರಾಸ್ತ ಮಾತನಾಡಿ, ಇಂಜಿನಿಯರ್ ಗಳು ಈ ಸಭೆಯಲ್ಲಿ ಆಡಿದ ಮಾತಿನಂತೆ ನಡೆದುಕೊಳ್ಳುತ್ತಿಲ್ಲ. ಮಾತನಾಡೋದೇ ಸುಳ್ಳು. ಬೀರಮಂಗಲದಲ್ಲಿ ರಸ್ತೆಯ ಅವ್ಯವಸ್ಥೆ ಹೇಳತೀರದು ಎಂದು ವಾರ್ಡ್ ನಲ್ಲಿರುವ ಸಮಸ್ಯೆ ವಿವರಿಸಿದರು.
ಸದಸ್ಯ ಕೆ.ಎಸ್. ಉಮ್ಮರ್ ರವರು, “ಗುರುಂಪು ರಸ್ತೆ ಪ್ರತಿಭಟನೆಯಾಗಿ ಆಗಿರುವ ರಸ್ತೆ. ಇವತ್ತು ಅದನ್ನು ಕಡಿದು ಹೇಗೆ ಮಾಡಿದ್ದಾರೆ ನೋಡಿದರೆ ಗೊತ್ತಾಗುತ್ತದೆ. ನಮಗೆ ಇವರ ಮೇಲೆ ವಿಶ್ವಾಸವೇ ಹೋಗಿದೆ ಎಂದು ತಮ್ಮ ವಾರ್ಡ್ ನ ಸಮಸ್ಯೆ ಹೇಳಿದರು.
ಸದಸ್ಯೆ ಶಿಲ್ಪಾ ಸುದೇವ್ ಜಯನಗರ ಸ್ಮಶಾನ ಕ್ಕೆ ಹೋಗುವ ರಸ್ತೆ ಅಗೆದು ಆಗುತ್ತಿರುವ ಸಮಸ್ಯೆಯನ್ನು ಪ್ರಸ್ತಾಪಿಸಿ, ನಾನು ಒಂದು ತಿಂಗಳಿನಿಂದ ರಸ್ತೆ ಸರಿ ಪಡಿಸುವಂತೆ ಹೇಳಿದರೂ ಇನ್ನೂ ಸರಿಪಡಿಸಿಲ್ಲ” ಎಂದು ಹೇಳಿದರು.
ಸದಸ್ಯ ಶರೀಫ್ ಕಂಠಿ ನಾವೂರು ಭಾಗದ ರಸ್ತೆಯಲ್ಲಾಗಿರುವ ಸಮಸ್ಯೆಯನ್ನು ಪ್ರಸ್ತಾಪಿಸಿದರು.
ಈ ವೇಳೆ ಮಾತನಾಡಿದ ಶಾಸಕಿ ಭಾಗೀರಥಿ ಮುರುಳ್ಯರು, ಎಲ್ಲ ಸದಸ್ಯರೂ ಒಂದೇ ರೀತಿಯ ಸಮಸ್ಯೆ ಹೇಳುತಿದ್ದೀರಿ. ಗ್ರಾಮೀಣ ಭಾಗದಲ್ಲಿಯೂ ಇದೇ ಸಮಸ್ಯೆ. ಆದ್ದರಿಂದ ಮಳೆಗಾಲ ಮುಗಿಯುವ ತನಕ ಹೊಸ ಪೈಪ್ ಲೈನ್ ಕಾಮಗಾರಿ ನಿಲ್ಲಿಸಿ.ರಸ್ತೆ ಅಗೆದಿರುವುದನ್ನು ಸರಿಪಡಿಸಿ ಯೋಗ್ಯವನ್ನಾಗಿಸಬೇಕು ಎಂದು ಇಂಜಿನಿಯರ್ ರಿಗೆ ಸೂಚನೆ ನೀಡಿದರು.
ಇಂಜಿನಿಯರ್ ಅಜಯ್ ಮಾತನಾಡಿ ಎಲ್ಲಿ ಸಮಸ್ಯೆಗಳಾಗಿದೆಯೋ ಅದನ್ನು ಸರಿಪಡಿಸುತ್ತೇವೆ. ಈಗ ತಾತ್ಕಾಲಿಕ ಕೆಲವು ಕಡೆ ಪ್ಯಾಚ್ ಮಾಡಲಾಗಿದೆ. ಜನರಿಗೆ ಸಮಸ್ಯೆಗಳಾಗದಂತೆ ಕಾರ್ಯನಿರ್ವಹಿಸುತ್ತೇವೆ ಎಂದು ಭರವಸೆ ನೀಡಿದರು. ವೆಂಕಪ್ಪ ಗೌಡರು ಹೇಳಿದಂತೆ ಹಣ ನೀಡಿರುವ ವಿಚಾರ ಸತ್ಯಕ್ಕೆ ದೂರವಾದುದು ಎಂದು ಹೇಳಿದರು.










