ಸುದ್ದಿ ವರದಿಯನ್ನು ಆರೋಗ್ಯ ಇಲಾಖಾ ನಿರ್ದೇಶಕರಿಗೆ ಮುಟ್ಟಿಸಿದ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ.ಮುಸ್ತಫ
ತಕ್ಷಣ ಸ್ಪಂದಿಸಿದ ನಿರ್ದೇಶಕರು – ಏಜೆನ್ಸಿಗೆ ಹಣ ಪಾವತಿಗೆ ಕ್ರಮ
ಸುಳ್ಯದ ಸರಕಾರಿ ಆಸ್ಪತ್ರೆಯ ಡಿ ಗ್ರೂಪ್ ನೌಕರರಿಗೆ ಕಳೆದ ಮೂರು ತಿಂಗಳಿನಿಂದ ಸಂಬಳ ದೊರೆಯದ ಕಾರಣ ಅವರು ಜೂ.೭ ನೇ ತಾರೀಕಿನಿಂದ ಕೆಲಸಕ್ಕೆ ಗೈರು ಹಾಜರಾಗಿ ಆಸ್ಪತ್ರೆಯ ಸ್ವಚ್ಛತೆ ಮತ್ತಿತರ ಅವಶ್ಯಕ ಕಾರ್ಯಗಳು ನಡೆಯದೆ ಸಮಸ್ಯೆ ಸೃಷ್ಠಿಯಾಗಿತ್ತು. ಈ ಬಗ್ಗೆ ಇಂದಿನ ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿದೆ. ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ.ಮುಸ್ತಫರವರು ಇಂದು ಮೈಸೂರಿಗೆ ಹೋಗಿ ಆರೋಗ್ಯ ಇಲಾಖೆಯ ಮೈಸೂರು ವಿಭಾಗಿಯ ಸಹನಿರ್ದೇಶಕ ಡಾ.ಪ್ರಸಾದ್ ರನ್ನು ಭೇಟಿಯಾಗಿ
ಸುಳ್ಯ ಸರ್ಕಾರಿ ತಾಲೂಕು ಆಸ್ಪತ್ರೆ ಯಲ್ಲಿ ಕಳೆದ ೩ ತಿಂಗಳುಗಳಿಂದ ವೇತನ ಪಾವತಿಯಾಗದೆ ಕೆಲಸಕ್ಕೆ ಹಾಜರಾಗದೆ ಇರುವ ಹೊರ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರು ಮುಷ್ಕರ ನಡೆಸುತ್ತಿರುವುದರಿಂದ ಆಸ್ಪತ್ರೆ ಗೆ ಬರುವ ರೋಗಿಗಳಿಗೆ ತುಂಬಾ ತೊಂದರೆಯಾಗುತ್ತಿದ್ದು ಕೂಡಲೇ ಸಮಸ್ಯೆಯನ್ನು ಬಗೆಹರಿಸುವಂತೆ ವಿನಂತಿಸಿದರು. ಅವರು ಸುಳ್ಯದಿಂದ ಕೊಂಡೊಯ್ದಿದ್ದ ಸುದ್ದಿ ಬಿಡುಗಡೆ ಪತ್ರಿಕೆಯನ್ನು ಅವರಿಗೆ ನೀಡಿ ಮನವರಿಕೆ ಮಾಡಿದರು. ಸಮಸ್ಯೆಯನ್ನು ಆಲಿಸಿದ ಸಹ ನಿರ್ದೇಶಕರು ಜನವರಿ, ಫೆಬ್ರವರಿ, ಮಾರ್ಚ್ ವರೆಗಿನ ವೇತನವನ್ನು ಏಜನ್ಸಿಗೆ ಪಾವತಿಸುವ ಕಡತ ತರಿಸಿ ಸಹಿ ಹಾಕಿ, ತಕ್ಷಣ ಪಾವತಿಗೆ ಕ್ರಮ ವಹಿಸಲು ಸೂಚಿಸಿದರು.










ಇನ್ನುಳಿದ ತಿಂಗಳ ವೇತನವನ್ನು ನಿಯಮದಂತೆ ಏಜನ್ಸಿಯವರು ಪಾವತಿಸಿ ಬಿಲ್ಲು ಕಳಿಸಿದರೆ ತಕ್ಷಣ ಏಜನ್ಸಿ ಗೆ ಪಾವತಿಸುವುದಾಗಿ ಸಹ ನಿರ್ದೇಶಕರು ತಿಳಿಸಿದರು ಎಂದು ಮುಸ್ತಫ ತಿಳಿಸಿರುತ್ತಾರೆ.
ಇದರಿಂದಾಗಿ ಬಿಲ್ ಸಿದ್ಧಗೊಂಡಿರುವ ಮೂರು ತಿಂಗಳ ವೇತನ ನಾಳೆಯೊಳಗೆ ಏಜೆನ್ಸಿಗೆ ಪಾವತಿಯಾಗಿ ಅವರು ಡಿ ಗ್ರೂಪ್ ನೌಕರರಿಗೆ ನೀಡಿದರೆ ನಾಡದಿನಿಂದಲೇ ಡಿ ಗ್ರೂಪ್ ನೌಕರರು ಕೆಲಸಕ್ಕೆ ಹಾಜರಾಗುವುದು ಖಚಿತವಾಗಿದೆ.








