ಸಂಘಟನೆ ಹಾಗೂ ಪಕ್ಷಕ್ಕಾಗಿ ಸ್ವ ಹಿತವನ್ನು ಬಿಟ್ಟು ಕೆಲಸ ಮಾಡಿದವರು :ಅಣ್ಣಾ ವಿನಯ ಚಂದ್ರ
ಬೆಳ್ಳಾರೆ ತಡಗಜೆ ಕೇಶವ ಹೆಗ್ಡೆಯವರು ಇತ್ತೀಚೆಗೆ ನಿಧನರಾಗಿದ್ದು ಅವರಿಗೆ ಶ್ರದ್ಧಾಂಜಲಿ ಸಭೆ ಹಾಗೂ ನುಡಿನಮನ ಕಾರ್ಯಕ್ರಮ ಜೂ. 25 ರಂದು ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ಸಭಾಭವನದಲ್ಲಿ ನಡೆಯಿತು.















ಪ್ರಾಸ್ತಾವಿಕವಾಗಿ ಮಾತನಾಡಿದ ಬೆಳ್ಳಾರೆ ಶಕ್ತಿ ಕೇಂದ್ರದ ಪ್ರಮುಖ್ ದಿಲೀಪ್ ಗಟ್ಟಿಗಾರು ಸುಮಾರು 44ವರ್ಷಗಳಿಂದ ಟೈಲರಿಂಗ್ ವೃತ್ತಿಯನ್ನು ಮಾಡುತ್ತಾ ಬರುತ್ತಿದ್ದ ಹೆಗ್ಡೆಯವರು ನೂರಾರು ಜನರಿಗೆ ಟೈಲರಿಂಗ್ ತರಬೇತಿಯನ್ನು ನೀಡಿದ್ದಾರೆ.ಕ್ರೀಡಾ ಪ್ರೇಮಿಯಾಗಿದ್ದ ಇವರಿಗೆ ಕ್ರಿಕೆಟ್ ನೆಚ್ಚಿನ ಆಟ. ಆ ಮೂಲಕ ಯುವಕರನ್ನು ಸೇರಿಸಿ ಕವಿತಾ ಕ್ರಿಕೆಟರ್ಸ್ ಅನ್ನುವ ತಂಡವನ್ನು ಕಟ್ಟಿದ್ದರು. ಸಂಘಟನೆ ಹಾಗೂ ಪಕ್ಷದಲ್ಲಿ ಮುಂದೆ ನಿಂತು ಕೆಲಸ ಮಾಡುತ್ತಿದ್ದವರು ಹೆಗ್ಡೆಯವರು ಎಂದರು. ನುಡಿನಮನ ಸಲ್ಲಿಸಿ ಮಾತನಾಡಿದ ಮಾಜಿ ವಿಧಾನ ಪರಿಷತ್ ಸದಸ್ಯರಾದ ಅಣ್ಣಾ ವಿನಯಚಂದ್ರರು, ಸಂಘದ ಶಾಖೆಯಲ್ಲಿ ನಾವೆಲ್ಲರೂ ಒಟ್ಟು ಸೇರಿ ದೇಶ, ಹಿಂದೂ ಸಮಾಜದ ಬಗ್ಗೆ ಚರ್ಚೆ ನಡೆಸುತ್ತಿದ್ದೆವು. ಟೈಲರ್ ವೃತ್ತಿ ಮಾಡುತ್ತಿದ್ದ ಕೇಶವಣ್ಣ ಸಂಘದ ಗಣ ವೇಷದ ಭಾಗಗಳನ್ನು ನಮಗೆ ಯಾವುದೇ ಫಲಾಪೇಕ್ಷೆ ಇಲ್ಲದೆ ಹೊಲಿದು ಕೊಡುತ್ತಿದ್ದರು. ಜನಸಂಘದ ಕಾಲದಿಂದಲೂ ಪಕ್ಷದ ಜೊತೆಗೆ ಗುರುತಿಸಿಕೊಂಡಿದ್ದರು. ಪಂಚಾತಿಕೆಗಳನ್ನು ಮಾಡುವ ಮೂಲಕ ವ್ಯಾಜ್ಯಗಳನ್ನು ಪರಿಹರಿಸುತ್ತಿದ್ದರು. ಇದರಿಂದ ಪೊಲೀಸರ ಕೆಂಗಣ್ಣಿಗೂ ಗುರಿಯಾಗಿದ್ದರು ಎಂಬುದನ್ನು ಸ್ಮರಿಸಿಕೊಳ್ಳಬಹುದು ಎಂದು ಹೇಳಿ ನುಡಿನಮನ ಸಲ್ಲಿಸಿದರು.ಮೃತರ ಗೌರವಾರ್ಥ ಒಂದು ನಿಮಿಷ ಮೌನ ಪ್ರಾರ್ಥನೆ ಮಾಡಲಾಯಿತು. ನಂತರ ಮೃತರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
ಸಭೆಯಲ್ಲಿ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಚಂದ್ರಶೇಖರ ಪನ್ನೆ, ಪಕ್ಷದ ಪ್ರಮುಖರು, ಕಾರ್ಯಕರ್ತರು, ಕೇಶವ ಹೆಗ್ಡೆಯವರ ಹಿತೈಷಿಗಳು, ಕುಟುಂಬಸ್ಥರು ಉಪಸ್ಥಿತರಿದ್ದರು.










