ಶಾಂತಿನಗರ ಸ.ಉ.ಹಿ.ಪ್ರಾ.ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ರಘುನಾಥ ಶೆಟ್ಟಿ ಯು. ನಿವೃತ್ತಿ

0

ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಶಾಂತಿನಗರದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದ ರಘುನಾಥ ಶೆಟ್ಟಿ ಯು ಜುಲೈ ೩೧ ನಿವೃತ್ತಿ ಹೊಂದಿದರು.

ಶಾಂತಿನಗರ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಗ್ರೇಡ್ ೨ ದೈಹಿಕ ಶಿಕ್ಷಕರಾಗಿದ್ದ ರಘುನಾಥ ಶೆಟ್ಟಿ ಯವರು ಉಬರಡ್ಕಮಿತ್ತೂರು ಗ್ರಾಮದ ಐತ್ತಪ್ಪ ಶೆಟ್ಟಿ ಮತ್ತು ಸೀತಮ್ಮ ದಂಪತಿಗಳ ಪುತ್ರ. ಇವರು ಪ್ರಾಥಮಿಕ ವಿದ್ಯಾಭ್ಯಾಸವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಉಬರಡ್ಕದಲ್ಲಿ ಪೂರೈಸಿ ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಸ.ಪ.ಪೂ.ಕಾಲೇಜು ಸುಳ್ಯದಲ್ಲಿ ಪೂರೈಸಿರುತ್ತಾರೆ.

ಎಳವೆಯಿಂದಲೇ ಕ್ರೀಡಾ ಕ್ಷೇತ್ರದೆಡೆಗೆ ಆಕರ್ಷಿತರಾಗಿ ಶಾಲಾ ದಿನಗಳಲ್ಲಿಯೇ ಕ್ರೀಡಾಪಟುವಾಗಿದ್ದ ಇವರು ಕುಶಾಲನಗರದ ಶ್ರೀ ಸತ್ಯಸಾಯಿ ಕಾಲೇಜು ಆಫ್ ಫಿಸಿಕಲ್ ಎಜ್ಯುಕೇಶನ್ ನಲ್ಲಿ ಸಿ.ಪಿ.ಎಡ್ ತರಬೇತಿಯನ್ನು ಪಡೆದರು. ನಂತರ ೧೯೮೭ರಿಂದ ೧೯೮೮ ರವರೆಗೆ ಸರಕಾರಿ ಹಿ.ಪ್ರಾ.ಕೊಯಿಕುಳಿ ಶಾಲೆಯಲ್ಲಿ ಗೌರವ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ೧೯೮೮ -೧೯೮೯ರಿಂದ ೧೯೯೬ -೧೯೯೭ರವರೆಗೆ ಸರಕಾರಿ ಪ್ರೌಢಶಾಲೆ ದುಗ್ಗಲಡ್ಕ ದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ವೃತ್ತಿ ಪ್ರಾರಂಭಿಸಿ ೧೯೯೭ ಮಾರ್ಚ್ ೨೬ ರಿಂದ ಸರಕಾರಿ ಸೇವೆಗೆ ನಿಯುಕ್ತಿಗೊಂಡು ೧೯೯೭ ರಿಂದ ೧೯೯೮ರವರೆಗೆ ಸ.ಹಿ.ಪ್ರಾ.ಶಾಲೆ ತಾರಾಪತಿ ಕುಂದಾಪುರ ತಾಲೂಕು, ೧೯೯೮ರಿಂದ ೨೦೦೦ದವರೆಗೆ ಸ.ಹಿ.ಪ್ರಾ.ಶಾಲೆ ನೆಟ್ಟಾರು, ೨೦೦೦ದಿಂದ ೨೦೦೨ ರವರೆಗೆ ಸ.ಹಿ.ಪ್ರಾ.ಶಾಲೆ ಉಬರಡ್ಕ ಮಿತ್ತೂರು, ೨೦೦೨ ರಿಂದ ೨೦೨೫ ಜುಲೈ ೩೧ ರವರೆಗೆ ಶಾಂತಿನಗರ ಶಾಲೆಯ ಸೇವೆಯೊಂದಿಗೆ ಸುಮಾರು ೩೫ ವರ್ಷ ದೈ.ಶಿ.ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿರುತ್ತಾರೆ. ತನ್ನ ಸೇವಾ ವಧಿಯಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಕ್ರೀಡೆಗಳ ತರಬೇತಿ ನೀಡಿ ಪರಿಣತಿ ಹೊಂದುವಂತೆ ಮಾಡಿದ ಹೆಗ್ಗಳಿಕೆ ಇವರದ್ದು.ಇವರಿಂದ ತರಬೇತಿ ಹಾಗೂ ಮಾರ್ಗದರ್ಶನ ಪಡೆದ ಹಲವರು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಅಲ್ಲದೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಒಂದು ತಿಂಗಳ ಕಾಲ ಯೋಗ ಮತ್ತು ನೈತಿಕ ಶಿಕ್ಷಣ ತರಬೇತಿಯನ್ನು ಪಡೆದುಕೊಂಡಿರುತ್ತಾರೆ.

ಪ್ರತಿಯೊಂದು ಶಾಲೆಯಲ್ಲಿ ಮಕ್ಕಳಿಗೆ ಯೋಗಾಭ್ಯಾಸವನ್ನು ನಡೆಸಿಕೊಂಡು ಬಂದಿರುತ್ತಾರೆ. ಅಲ್ಲದೇ ೧೯೯೭ರಲ್ಲಿ ಭಾರತ ಸೇವಾದಳ ತರಬೇತಿಯನ್ನು ಪಡೆದು ಶಾಲೆಯಲ್ಲಿ ಮಕ್ಕಳಿಗೆ ಸೇವಾದಳದ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿರುತ್ತಾರೆ. ಇವರಿಗೆ ರೋಟರಿ ಕ್ಲಬ್ ಸುಳ್ಯ ಇವರು ಕೊಡಮಾಡುವ ನ್ಯಾಷನಲ್ ಬಿಲ್ಡರ್ಸ್ ಅವಾರ್ಡ್ ನ್ನು ನೀಡಿ ಗೌರವಿಸಿರುತ್ತಾರೆ. ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಕಾರ್ಯದರ್ಶಿಯಾಗಿ ಹಾಗೂ ಅಧ್ಯಕ್ಷರಾಗಿ ಕರ್ತವ್ಯವನ್ನು ನಿರ್ವಹಿಸಿರುತ್ತಾರೆ. ಇವರ ಪತ್ನಿ ಶ್ರೀಮತಿ ವಸಂತಿ ಎಂ.ಇವರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಜಾಲ್ಸೂರಿನಲ್ಲಿ ಮುಖ್ಯೋಪಾಧ್ಯಾಯರಿಗೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಇವರ ಪುತ್ರ ಅಶಿತ್ ಶೆಟ್ಟಿ ಯು. ಆರ್. ಇವರು ಪುತ್ತೂರಿನಲ್ಲಿ ಸಿವಿಲ್ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.