ಸುಳ್ಯ ಠಾಣೆಗೆ ದೂರು, ಪೊಲೀಸರ ಆಗಮನ, ಠಾಣೆಗೆ ಕರೆಸಿ ವಿಚಾರಣೆ
ಉಬರಡ್ಕ ಮಾಣಿಬೆಟ್ಟು ಎಂಬಲ್ಲಿ ರೀಟಾ ಕ್ರಾಸ್ತ ಎಂಬವರ ಮನೆಗೆ ಪ್ರಭಾಕರ್ ನಾಯಕ್ ಎಂಬುವರು ಅಕ್ರಮ ಪ್ರವೇಶ ಮಾಡಿ ಅಲ್ಲಿ ವಾಸ್ತವ್ಯ ಹೂಡಿದ್ದಾರೆ ಎಂದು ಆರೋಪಿಸಿ ವಿಷಯ ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ಅಕ್ಟೋಬರ್ 6 ರಂದು ನಡೆದಿದೆ.















ಮನೆಯ ಒಡತಿ ರೀಟಾ ಕ್ರಾಸ್ತ ಮತ್ತು ಅವರ ಕುಟುಂಬದ ಸದಸ್ಯರು ಈ ಆರೋಪ ವ್ಯಕ್ತಪಡಿಸಿದ್ದು ಆದರೆ ಈ ಬಗ್ಗೆ ಪ್ರಭಾಕರ್ ನಾಯಕ್ ರವರು ಸುದ್ದಿಯೊಂದಿಗೆ ಮಾತನಾಡಿ ನಾನು ಯಾವುದೇ ಅಕ್ರಮ ಪ್ರವೇಶ ಮಾಡಲಿಲ್ಲ. ಮೂರು ವರ್ಷಗಳ ಹಿಂದೆ ನಾನು ಹದಿನೈದು ಲಕ್ಷ ರೂಪಾಯಿ ಕೊಟ್ಟು ಖರೀದಿಸಿರುವ ಮನೆ ಮತ್ತು ಜಾಗವಾಗಿದೆ ಇದು. ಉಳಿದ 25 ಲಕ್ಷ ಅವರಿಗೆ ನೀಡಲು ಬಾಕಿ ಇದೆ. ಆದರೆ ಅವರು ಈಗ ಮನೆಯನ್ನು ಮರಳಿಸಿ ಕೊಡಬೇಕು ಎಂದು ಪಟ್ಟು ಹಿಡಿಯುತ್ತಿದ್ದು ನಾನು ಅವರಿಗೆ ನೀಡಿರುವ ಹದಿನೈದು ಲಕ್ಷ ಹಣವನ್ನು ಮತ್ತು ಈ ವಿಷಯದ ಕುರಿತು ನ್ಯಾಯಾಲಯದಲ್ಲಿ ನಾನು ನ್ಯಾಯಕ್ಕಾಗಿ ಮನವಿಯನ್ನು ಹಾಕಿದ್ದು ಅದರ ಉತ್ತರ ನನಗೆ ಸಿಕ್ಕಿದ ತಕ್ಷಣ ನಾನು ಅವರಿಗೆ ಮನೆಯನ್ನು ಮರಳಿಸುತ್ತೇನೆ ಎಂದು ಹೇಳಿದ್ದಾರೆ.

ಪ್ರಭಾಕರ್ ನಾಯಕ್ ರವರ ಪತ್ನಿ ಹಾಗೂ ಪುತ್ರ ಮನೆಯ ಒಳಗೆ ಇದ್ದು ಮನೆಯ ಒಡತಿ ರೀಟಾ ಕ್ರಾಸ್ ಮನೆಯ ಜಗಲಿಯಲ್ಲಿ ಕುಳಿತು ತಮ್ಮ ಮನೆ ಮರಳಿ ಕೊಡಬೇಕೆಂದು ಆಗ್ರಹಿಸುತ್ತಿದ್ದಾರೆ.

ವಿಷಯ ತಿಳಿದ ಸುಳ್ಯ ಪೊಲೀಸರು ಸ್ಥಳಕ್ಕೆ ಬಂದು ಇತ್ತಂಡದವರನ್ನು ಠಾಣೆಗೆ ಕರೆಸಿ ಅದರ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಈ ವಿಷಯ ನ್ಯಾಯಾಲಯದಲ್ಲಿರುವ ಕಾರಣ ನಾವು ಕೂಡ ಏನು ಮಾಡಲು ಆಗುತ್ತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.










