ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿರವರಿಗೆ ಶೂ ಎಸೆದು ಅಪಮಾನ ಮಾಡಿರುವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ
ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ರವರ ಮೇಲೆ ವಕೀಲರೊಬ್ಬರು ಶೂ ಎಸೆದು ಅಪಮಾನ ಮಾಡಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ರಿ.) ಮೈಸೂರು ವಿಭಾಗೀಯ ಸಮಿತಿ ಹಾಗೂ ಸುಳ್ಯ ತಾಲೂಕು ದಲಿತ ಸಂಘಟನೆಗಳ ವತಿಯಿಂದ ತಾಲೂಕು ಕಚೇರಿ ಮುಂಭಾಗದಲ್ಲಿ ಅ 9ರಂದು ಸಾಂಕೇತಿಕ ಪ್ರತಿಭಟನೆ ನಡೆಯಿತು.
ಬಳಿಕ ಸುಳ್ಯ ತಹಶೀಲ್ದಾರ್ ಮುಖೇನ ಆರೋಪಿ ವಕೀಲರಿಗೆ ಕಠಿಣ ಕ್ರಮಕ್ಕೆ ಆಗ್ರಹಿಸಿ ರಾಷ್ಟ್ರಪತಿ ಹಾಗೂ ರಾಜ್ಯದ ಮುಖ್ಯಮಂತ್ರಿಗೆ ಮನವಿಯನ್ನು ಸಲ್ಲಿಸಲಾಯಿತು.ಆರೋಪಿಗೆ ಕಠಿಣ ಶಿಕ್ಷೆ ಆಗಬೇಕೆಂದು ದಲಿತ ಸಂಘಟನೆಗಳ ಮುಖಂಡರುಗಳು ಪ್ರತಿಭಟನೆ ಮೂಲಕ ಆಗ್ರಹಿಸಿದರು.
ಪ್ರತಿಭಟನೆಯ ನೇತೃತ್ವವನ್ನು ವಹಿಸಿಕೊಂಡಿದ್ದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಬೆಂಗಳೂರು ಇದರ ಮೈಸೂರು ವಿಭಾಗೀಯ ಸಂಚಾಲಕ ಆನಂದ ಬೆಳ್ಳಾರೆ ಯವರು ಮಾತನಾಡಿ ‘ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ರವರು ದೇಶಕ್ಕೆ ಸಂವಿಧಾನದ ಕೊಡುಗೆಯನ್ನು ನೀಡಿದವರು. ಅದಕ್ಕೆ ಅನುಗುಣವಾಗಿ ಮಾನ್ಯ ನ್ಯಾಯಾಲಯಗಳಲ್ಲಿ ನ್ಯಾಯದ ತೀರ್ಪುಗಳು ನಡೆಯುತ್ತಿರುತ್ತದೆ. ಇಂತಹ ಮುಖ್ಯ ಸ್ಥಾನವನ್ನು ವಹಿಸಿ ಕೊಂಡಿರುವಂತಹ ಸುಪ್ರೀಂಕೋರ್ಟಿನ ಓರ್ವ ಮುಖ್ಯ ನ್ಯಾಯಮೂರ್ತಿಗಳಾದ ಬಿ ಆರ್ ಗವಾಹಿ ರವರಿಗೆ ಶೂ ಎಸೆಯೋ ಮೂಲಕ ಅಪಮಾನ ಮಾಡಿದ ಆರ್ ಎಸ್ ಎಸ್ ನ ಮನಸ್ಥಿತಿ ಹೊಂದಿರುವ ವ್ಯಕ್ತಿಯನ್ನು ಕೂಡಲೇ ಬಂಧಿಸಬೇಕು. ಮತ್ತು ಆತನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮಾನ್ಯ ಗವಾಯಿ ರವರು ದಲಿತ ಸಮುದಾಯಕ್ಕೆ ಸೇರಿದ ನ್ಯಾಯಮೂರ್ತಿಯವರಾಗಿದ್ದು ತಮ್ಮ ಅರ್ಹತೆ ಮತ್ತು ಸ್ವ ಸಾಮರ್ಥ್ಯದ ಮೂಲಕ ಉನ್ನತ ಸ್ಥಾನಕ್ಕೆ ಹೇರಿದವರಾಗಿದ್ದಾರೆ. ಇಂದು ಆ ವಕೀಲರು ಮಾಡಿರುವ ಅಪಮಾನ ಕೇವಲ ಅವರಿಗೆ ಮಾತ್ರವಲ್ಲ ಇಡೀ ದೇಶದ ಪ್ರಜೆಗಳಿಗೆ ಆಗಿರುತ್ತದೆ. ಆದ್ದರಿಂದ ಅಂತಹ ಮನಸ್ಥಿತಿಯುಳ್ಳ ವಕೀಲರನ್ನು ಕೂಡಲೇ ಆ ಸ್ಥಾನದಿಂದ ವಜಾ ಗೊಳಿಸಬೇಕು ಮತ್ತು ಅವರಿಗೆ ತಕ್ಕ ಶಿಕ್ಷೆಯನ್ನು ನೀಡಬೇಕೆಂದು ಆಗ್ರಹಿಸಿದರು.















ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದ ಮೊಗೇರ ಸೇವಾ ಸಂಘ ರಾಜ್ಯ ಸಮಿತಿಯ ಅಧ್ಯಕ್ಷರಾದ ನಂದರಾಜ್ ಸಂಕೇಶ್, ಮುಖಂಡ ಮಹೇಶ್ ಬಳ್ಳಾರ್ಕರ್,ಆದಿ ದ್ರಾವಿಡ ಯುವ ವೇದಿಕೆಯ ಜಿಲ್ಲಾಧ್ಯಕ್ಷ ಸುಂದರ ರವರು ಈ ಸಂದರ್ಭದಲ್ಲಿ ಮಾತನಾಡಿ ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆದು ಹಾಕುವ ಮತ್ತು ಪರಸ್ಪರ ದ್ವೇಷ ಮತ್ತು ಅಶಾಂತಿಯನ್ನು ಹುಟ್ಟು ಹಾಕುವ ವಿಕೃತ ಮನಸ್ಸುಗಳು ಇವತ್ತು ದೇಶದಲ್ಲಿ ವಿಜ್ರಂಬಿಸುತ್ತಿದೆ. ಆದ್ದರಿಂದ ನ್ಯಾಯಾಲಯಕ್ಕೆ ಅಪಮಾನ ಮಾಡಿದ ವಕೀಲರನ್ನು ಕೂಡಲೆ ಬಂಧಿಸಬೇಕು ಮತ್ತು ಆತನ ವಿರುದ್ಧ ಕ್ರಮ ಕೈಗೊಳ್ಳಬೇಕು. ಅವರು ಎಸೆದಿರುವ ಅಪಮಾನ ಕೇವಲ ನ್ಯಾಯಮೂರ್ತಿ ಗವಾಯಿ ರವರಿಗೆ ಮಾತ್ರವಲ್ಲ ಅದು ಭಾರತ ದೇಶದ ಪ್ರತಿಯೊಬ್ಬ ಪ್ರಜೆಗೂ ಮಾಡಿರುವ ಅಪಮಾನವಾಗಿದ್ದು ಇದನ್ನು ಯಾವುದೇ ರೀತಿಯಲ್ಲಿ ಕೂಡ ಕ್ಷಮಿಸಲು ಅರ್ಹವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಪ್ರಕರಣಕ್ಕೆ ಕಾರಣವಾದ ವಕೀಲರ ಮೇಲೆ ಧಿಕ್ಕಾರ ಘೋಷಣೆ ಹಾಗೂ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಮೇಲೆ ಜಯಘೋಷಣೆ ಕೂಗಿ ಸಂಘಟನೆಯವರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಮುಖಂಡರುಗಳಾದ ವಿಶ್ವನಾಥ ಅಲೆಕ್ಕಾಡಿ,ನಾರಾಯಣ ಎಸ್,ಕೇಶವ ಬಿ.ಎಸ್, ಸತೀಶ, ಅರಿಯಡ್ಕ,ಅಶ್ವಿನ್,ಸತೀಶ್ ಬಿಳಿಯಾರು,ರಮೇಶ್ ಬೂಡು, ಪ್ರಕಾಶ್ ಪಿ ಎಸ್ ಪಾತೆಟ್ಟಿ, ವಿಜಯ್ ಕುಮಾರ್ ಆಲಟ್ಟಿ, ಸದಾನಂದ ಪಿ, ಆನಂದ ಕೆಂಬಾರೆ, ಕುಮಾರ್ ಬಿ, ಹಾಗೂ ಆನಂದ್ ಎಸ್. ಸತೀಶ್ ಬೂಡುಮಕ್ಕಿ ಇನ್ನಿತರರು ಭಾಗವಹಿಸಿದ್ದರು.
ದಲಿತ ಸಮಿತಿಯ ಮುಖಂಡ ಅಚ್ಚುತಾ ಮಲ್ಕಜೆ ಸ್ವಾಗತಿಸಿ , ಕಾರ್ಯಕ್ರಮ ನಿರೂಪಿಸಿ ವಂದಿಸಿದರು.











