ಉಳಿದ ಕಾಮಗಾರಿಯ ಎಸ್ಟಿಮೇಟ್ ಶೀಘ್ರದಲ್ಲಿ ರಚಿಸಿ ಕೊಡುವ ಬಗ್ಗೆ ಅಧಿಕಾರಿಗಳಿಗೆ ಸೂಚನೆ
ಸುಳ್ಯ ನಿರ್ಮಾಣ ಹಂತದಲ್ಲಿ ಬಾಕಿಯಾಗಿರುವ ಅಂಬೇಡ್ಕರ್ ಭವನ ಕಟ್ಟಡದ ಸ್ಥಳಕ್ಕೆ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು. ಭಾಗೀರಥಿ ಮುರುಳ್ಯರವರು ಅಕ್ಟೋಬರ್ ೨೭ರಂದು ಭೇಟಿ ನೀಡಿ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ವೀಕ್ಷಣೆ ನಡೆಸಿದರು.
ಈ ಸಂದರ್ಭದಲ್ಲಿ ಶಾಸಕರೊಂದಿಗೆ ಇದ್ದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಇಂಜಿನಿಯರ್ ಹಾಗೂ ಗುತ್ತಿಗೆದಾರರಲ್ಲಿ ಮುಂದಿನ ಕಾಮಗಾರಿಗೆ ಬೇಕಾಗಿರುವ ಎಸ್ಟಿಮೇಟ್ ಕೂಡಲೇ ತಯಾರಿಸಿ ಕೊಡುವ ಕುರಿತು ಸೂಚನೆ ನೀಡಿದರು.















ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಶಾಸಕರು ‘ಸಮಾಜ ಕಲ್ಯಾಣ ಇಲಾಖೆಯ ಸಚಿವರಲ್ಲಿ ಸುಳ್ಯದ ಅಂಬೇಡ್ಕರ್ ಭವನದ ಕಾಮಗಾರಿಯ ಅನುದಾನದ ಕುರಿತು ಮಾತನಾಡಿದ್ದೇನೆ.

ಅದಕ್ಕೆ ಪೂರಕವಾಗಿ ಸಚಿವರು ಸ್ಪಂದನೆ ನೀಡಿದ್ದು ಈಗಾಗಲೇ ಈ ಕಟ್ಟಡ ನಿರ್ಮಾಣಕ್ಕೆ ೫ ಕೋಟಿ ೧೦ ಲಕ್ಷ ರೂಪಾಯಿಯ ಅನುದಾನವನ್ನು ಇಡಲಾಗಿದೆ.
ಅದರಲ್ಲಿ ಎರಡು ಕೋಟಿಯ ಕಾಮಗಾರಿ ಈಗಾಗಲೇ ನಡೆದಿದ್ದು, ಉಳಿದ ೩ ಕೋಟಿ ೧೦ ಲಕ್ಷ ರೂಪಾಯಿಯ ಅನುದಾನ ಶೀಘ್ರದಲ್ಲಿ ಬಿಡುಗಡೆಗೊಳಿಸಿಕೊಡುವ ಬಗ್ಗೆ ಅವರು ಭರವಸೆಯನ್ನು ನೀಡಿದ್ದಾರೆ. ಆದ್ದರಿಂದ ಅದಕ್ಕೆ ಸಂಬಂಧಪಟ್ಟ ಎಸ್ಟಿಮೆಂಟನ್ನು ಅಧಿಕಾರಿಗಳಿಂದ ಅತಿ ಶೀಘ್ರವಾಗಿ ರಚಿಸಿಕೊಡುವ ಬಗ್ಗೆ ಸೂಚನೆಯನ್ನು ನೀಡಿದ್ದು ಮುಂದಿನ ಅಂಬೇಡ್ಕರ್ ಜಯಂತಿಯ ದಿನದಂದು ಈ ಭವನ ಉದ್ಘಾಟನೆಗೊಳ್ಳುವ ವಿಶ್ವಾಸವನ್ನು ನೀಡುತ್ತಿದ್ದೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಮುಖಂಡರುಗಳಾದ ಎಸ್.ಎನ್. ಮನ್ಮಥ, ಶುಭೋದ್ ಶೆಟ್ಟಿ ಮೇನಾಲ, ಚನಿಯ ಕಲ್ತಡ್ಕ, ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಜಿಲ್ಲಾ ಪಂಚಾಯತ್ ಸದಸ್ಯ ನಾರಾಯಣ, ಲೋಕೋಪಯೋಗಿ ಇಲಾಖೆಯ ಎಇಇ ಗೋಪಾಲ ಕೆ., ಎಇ ಪರಮೇಶ್ವರ್, ಜಿಲ್ಲಾ ಪಂಚಾಯತ್ ಇಂಜಿನಿಯರ್ ವಿಭಾಗದ ಎಇಇ ಫಯಾಜ್ ಅಹಮದ್, ಎಇ ಮಣಿಕಂಠನ್, ನಿರ್ಮಿತಿ ಕೇಂದ್ರದ ಇಂಜಿನಿಯರ್ ಹರೀಶ್ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ನಂದಿನಿ ಹಾಗೂ ಸ್ಮಿತಾ ಉಪಸ್ಥಿತರಿದ್ದರು.










