














ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ ಬೆಂಗಳೂರು, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಹಾಗೂ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಇಲಾಖೆ ಕಡಬ ತಾಲೂಕು, ಗ್ರಾ.ಪಂ. ಎಡಮಂಗಲ ಹಾಗೂ ಸ್ನೇಹ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಎಡಮಂಗಲ ಇವರ ಜಂಟಿ ಆಶ್ರಯದಲ್ಲಿ ತ್ಯಾಜ್ಯ ನಿರ್ವಹಣೆ, ಮಳೆನೀರು ಇಂಗಿಸುವಿಕೆ ಹಾಗೂ ಸೌರಶಕ್ತಿ ಯೋಜನೆಗಳ ಬಗ್ಗೆ ಕಾರ್ಯಗಾರ ಎಡಮಂಗಲ ಪಂಚಾಯತ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.
ಎಡಮಂಗಲ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಘು ಕಾರ್ಯಕ್ರಮ ಉದ್ಘಾಟಿಸಿ, ಪರಿಸರ ಉಳಿಸುವ ನಿಟ್ಟಿನಲ್ಲಿ ಮಾಹಿತಿ ನೀಡುವ ಭಾರತೀಯ ವಿಕಾಸ ಟ್ರಸ್ಟ್ ಹಾಗೂ ಮಹಾತ್ಮ ಗಾಂಧಿ ಇಂಧನ ಹಾಗೂ ಅಭಿವೃದ್ಧಿ ಸಂಸ್ಥೆ ಇವರುಗಳ ಉದ್ದೇಶಗಳ ಬಗ್ಗೆ ಮೆಚ್ಚುಗೆ ವಿವರಿಸುತ್ತಾ, ಸದಸ್ಯರು ಇಲ್ಲಿ ಪಡೆಯುವ ಮಾಹಿತಿ ಪ್ರತಿ ಮನೆಯಲ್ಲಿ ಗ್ರಾಮದಲ್ಲಿ ಅಳವಡಿಸಿಕೊಳ್ಳಬೇಕು. ನಮ್ಮ ಗ್ರಾಮ ಮಾದರಿ ಗ್ರಾಮ ಆಗಲು ಬೇಕಾದ ಎಲ್ಲಾ ಮಾಹಿತಿ ಪಡೆದು ಅದರ ಅಳವಡಿಕೆ ಬಗ್ಗೆ ಕಾರ್ಯಪ್ರವೃತ್ತರಾಗಬೇಕು ಎಂದರು. ಭಾರತೀಯ ವಿಕಾಸ ಟ್ರಸ್ಟ್ ಇದರ ಕಾರ್ಯಕ್ರಮ ವ್ಯವಸ್ಥಾಪಕರಾದ ಜೀವನ್ ಕೊಲ್ಯ ಮಾತಾಡುತ್ತಾ ಗ್ರಾಮೀಣ ಪ್ರದೇಶದಲ್ಲಿ ತ್ಯಾಜ್ಯ ನಿರ್ವಹಣೆ ಹಾಗೂ ಸೌರಶಕ್ತಿ ಬಳಕೆ ಬಗ್ಗೆ ತಿಳಿದು ನಮ್ಮ ಮಕ್ಕಳಿಗೆ ತಿಳಿಸಬೇಕು. ನಾವು ಪಡೆದ ಮಾಹಿತಿಯನ್ನು ನಮ್ಮ ಮನೆಯಲ್ಲಿ ಮೊದಲು ಅಳವಡಿಸಿ ಗ್ರಾಮದ ಜನತೆ ಅಳವಡಿಸಲು ಪ್ರಯತ್ನಪಟ್ಟರೆ ನಮ್ಮ ಗ್ರಾಮ ಸ್ವಚ್ಛ ಗ್ರಾಮ ಆಗಬಹುದು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ರವೀನಾ ಬಂಗೇರ ಸೌರಶಕ್ತಿ ಹಾಗೂ ಜೀವನ್ ಕೊಲ್ಯ ಮಳೆಕೊಯ್ಲು ಬಗ್ಗೆ ಹಾಗೂ ಗೌತಮ್ ತ್ಯಾಜ್ಯ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು. ಎನ್.ಆರ್.ಎಲ್.ಎಂ. ಕಡಬ ತಾಲೂಕಿನ ತಾಲೂಕು ಕಾರ್ಯಕ್ರಮ ವಲಯ ಮೇಲ್ವಿಚಾರಕರಾದ ನಳಿನಾಕ್ಷಿ, ಒಕ್ಕೂಟದ ಅಧ್ಯಕ್ಷರಾದ ವಿಜಯ ರಾಮಣ್ಣ ಗೌಡ, ಮಾಜಿ ತಾ.ಪಂ. ಸದಸ್ಯೆ ಶ್ರೀಮತಿ ಶುಭದಾ ಎಸ್. ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕವಿತಾ ಸ್ವಾಗತಿಸಿ, ಜಯಶ್ರೀ ವಂದಿಸಿದರು. ವನಿತಾ ಪುಳಿಕುಕ್ಕು ಕಾರ್ಯಕ್ರಮ ನಿರೂಪಿಸಿದರು.







