ಜಾಲ್ಸೂರು: 35ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

0

 

ವಿಜೃಂಭಣೆಯ ಶೋಭಾಯಾತ್ರೆಯ ಮೂಲಕ ಸಂಪನ್ನ

ಜಾಲ್ಸೂರಿನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ 35ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಜಾಲ್ಸೂರಿನ ಶ್ರೀ ಗುರುರಾಘವೇಂದ್ರ ಸ್ವಾಮಿ ಸಭಾಭವನದಲ್ಲಿ ಆ.31ರಂದು ಜರುಗಿತು.

ಬೆಳಿಗ್ಗೆ ವೇ. ಮೂ.ಪುರೋಹಿತ ನಯನಕೃಷ್ಣ ಭಟ್ ಅವರ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಿತು. ಬಳಿಕ ಧ್ವಜಾರೋಹಣ, ಹನ್ನೆರಡು ತೆಂಗಿನಕಾಯಿ ಗಣಪತಿ ಹವನ, ಗಣೇಶ ವಿಗ್ರಹ ಪ್ರತಿಷ್ಠೆ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು.
ಬಳಿಕ ಕ್ಷೇತ್ರ ಪಾಲಕನಾದ ನಾಗಸಾನಿಧ್ಯದಲ್ಲಿ ನಾಗತಂಬಿಲ ,ಸ್ಥಳೀಯ ಭಜಕವೃಂದದವರಿಂದ ಭಜನಾ ಸಂಕೀರ್ತನೆ ನೆರವೇರಿತು. ಮಧ್ಯಾಹ್ನ ,ಮಹಿಳೆಯರಿಗೆ ಹೂ ಕಟ್ಟುವ ಸ್ಪರ್ಧೆ, ಮತ್ತು ಹಣತೆ ಉರಿಸುವ ಸ್ಪರ್ಧೆ ನಡೆದು ವಿಜೇತರುಗಳಿಗೆ ಬಹುಮಾನ ವಿತರಿಸಲಾಯಿತು.
ಮಧ್ಯಾಹ್ನ 12.30ರಿಂದ ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರುಗಿತು.
ಅಪರಾಹ್ನ ವಿಘ್ನ ನಿವಾರಕನಾದ ಗಣಪತಿಯ ವೈಭವದ ಶೋಭಾಯಾತ್ರೆಯು ಜಾಲ್ಸೂರಿನಿಂದ ಹೊರಟು, ರಾಷ್ಟ್ರೀಯ ಹೆದ್ದಾರಿಯಲ್ಲಿ ಜಾಲ್ಸೂರು – ಅಡ್ಕಾರು – ವಿನೋಬನಗರದವರೆಗೆ ಸಂಚರಿಸಿ, ಕೋನಡ್ಕಪದವು ಮೂಲಕ ಸಾಗಿ ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಬಳಿಯಲ್ಲಿ ಪಯಸ್ವಿನಿ ನದಿಯಲ್ಲಿ ಜಲಸ್ಥಂಭನಗೊಳಿಸಲಾಯಿತು.
ಶೋಭಾಯಾತ್ರೆಗೆ ಸಿಂಗಾರಿಮೇಳ, ಎರಡು ತಂಡಗಳಿಂದ ನಾಸಿಕ್ ಬ್ಯಾಂಡ್, ಗೊಂಬೆ ಕುಣಿತ ಮೆರಗು ನೀಡಿತು. ವಿಶೇಷ ಆಕರ್ಷಣೆಯಾಗಿ ಅಡ್ಕಾರು – ಕೋನಡ್ಕಪದವು ಯುವಕರಿಂದ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಹಾಗೂ ಭಾರತಮಾತೆಯ ಭಾವಚಿತ್ರ ಇರುವ ತೆರೆದ ವಾಹನ ಶೋಭಾಯಾತ್ರೆಯ ಮೆರಗನ್ನು ಹೆಚ್ಚಿಸಿತು.
ಈ ಸಂದರ್ಭದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಜಗದೀಶ್ ಬೇರ್ಪಡ್ಕ ಸೇರಿದಂತೆ ಸಮಿತಿಯ ಪದಾಧಿಕಾರಿಗಳು , ಶ್ರೀ ಗುರುರಾಘವೇಂದ್ರ ಸ್ವಾಮಿ ಭಜನಾ ಮಂದಿರದ ಅಧ್ಯಕ್ಷ ಎಸ್. ಬಾಬು ಪಾಟಾಳಿ ಸೇರಿದಂತೆ ಮಂದಿರದ ಪದಾಧಿಕಾರಿಗಳು, ಮಹಿಳೆಯರು ಸೇರಿದಂತೆ ನೂರಾರು ಮಂದಿ ಯುವಕರು ಭಾಗವಹಿಸಿದ್ದರು.