ಸುಳ್ಯದಲ್ಲಿ ದತ್ತ ಮಾಲಾಧಾರಿಗಳ ದತ್ತ ಶೋಭಾಯಾತ್ರೆ, ಹಿಂದೂ ಸಂಘಟನೆಯ 40 ವರ್ಷದ ಹೋರಾಟದ ಫಲ- ದತ್ತ ಪೀಠದಲ್ಲಿ ತ್ರಿಕಾಲ ಪೂಜೆ- ಶರಣ್ ಪಂಪ್ ವೆಲ್

0

ಧರ್ಮದ ಆಚಾರ ಸಂಸ್ಕೃತಿಯ ಉಳಿವಿಗಾಗಿ ಇಂದಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡಬೇಕಾದ ಅವಶ್ಯಕತೆ ಇಂದು ನಮ್ಮ ಮುಂದಿದೆ. ಹಿಂದೂ ಧರ್ಮದ ಮೇಲೆ ಅಪಾಯಕಾರಿ ಷಡ್ಯಂತ್ರಗಳು ದೇಶದಲ್ಲಿ ತಲೆ ಎತ್ತಿರುವುದು ನಮ್ಮೆಲ್ಲರಿಗೆ ತಿಳಿದ ವಿಚಾರ ಇದರ ಬಗ್ಗೆ ಜಾಗೃತರಾಗಬೇಕು.ಧರ್ಮ ಸಂಸ್ಕೃತಿಯ ರಕ್ಷಣೆ ನಮ್ಮ ಹೊಣೆ.ಇತ್ತೀಚೆಗೆ ಭಾರತ ದೇಶದಲ್ಲಿ ಅದ್ಭುತ ಬದಲಾವಣೆ ಕಂಡಿದೆ. ಭಾರತ ಜಗದ್ಗುರು ಆಗುವ ದಿನಗಳು ಸನ್ನಿಹಿತವಾಗುತ್ತಿದೆ ಎಂದು ವಿಶ್ವ ಹಿಂದೂ ಪರಿಷದ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಹೇಳಿದರು.


ವಿಶ್ವ ಹಿಂದೂ ಪರಿಷದ್ ಬಜರಂಗದಳ ಸುಳ್ಯ ಪ್ರಖಂಡದ ವತಿಯಿಂದ ಆಯೋಜಿಸಲ್ಪಟ್ಟ ದತ್ತಮಾಲಾ ಅಭಿಯಾನದ ಅಂಗವಾಗಿ ಸುಳ್ಯದಲ್ಲಿ ನಡೆದ ದತ್ತ ಶೋಭಾಯಾತ್ರೆಯ ಬಳಿಕ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ
ನಡೆದ ಧಾರ್ಮಿಕ ಸಭೆಯಲ್ಲಿ ದಿಕ್ಸೂಚಿ ಭಾಷಣ ಮಾಡಿದರು.


ದತ್ತ ಪೀಠದಲ್ಲಿ ಇದೀಗ ತ್ರಿಕಾಲ ಪೂಜಾ ಕಾರ್ಯಕ್ರಮಗಳು ನಡೆಯುತ್ತಿದೆ. ವ್ಯವಸ್ಥಾಪನಾ ಸಮಿತಿ ರಚನೆಗೊಂಡಿದೆ.ಅರ್ಚಕರನೇಮಕವಾಗಿದೆ. ಇವೆಲ್ಲವೂ 40 ವರ್ಷಗಳ ಹಿಂದೂ ಸಂಘಟನೆಯ ಹೋರಾಟದ ಪ್ರತಿಫಲವಾಗಿದೆ ಎಂದು ಹೇಳಿದರು.


ಯುವ ಉದ್ಯಮಿ ಹೇಮಂತ್ ಕಾಮತ್ ‌ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ವಿಶ್ವ ಹಿಂದೂ ಪರಿಷದ್ ಸುಳ್ಯ ಪ್ರಖಂಡದ ಅಧ್ಯಕ್ಷ ಸೋಮಶೇಖರ ಪೈಕ, ಬಜರಂಗದಳ ತಾಲೂಕು ಸಂಯೋಜಕ ಸಂದೀಪ್ ವಳಲಂಬೆ ವೇದಿಕೆಯಲ್ಲಿ ದ್ದರು. ಬಜರಂಗದಳ ಜಿಲ್ಲಾ ಸಹ ಸಂಯೋಜಕ ಲತೀಶ್ ಗುಂಡ್ಯ ಸ್ವಾಗತಿಸಿದರು. ಬಜರಂಗದಳ ಸಹ ಸಂಯೋಜಕ ನವೀನ್ ಎಲಿಮಲೆ ವಂದಿಸಿದರು. ವಿಖ್ಯಾತ್ ಬಾರ್ಪಣೆ ಮತ್ತು ತೀರ್ಥೇಶ್ ಯಾದವ್ ಕಾರ್ಯಕ್ರಮ ನಿರೂಪಿಸಿದರು.


ದತ್ತ ಮಾಲಾಧಾರಿಗಳ ಶೋಭಾಯಾತ್ರೆಗೆ ಸುಳ್ಯ ರಾಮ ಭಜನಾ ಮಂದಿರದ ಬಳಿ ವಿ.ಹೆಚ್.ಪಿ. ನಿಕಟ ಪೂರ್ವ ಅಧ್ಯಕ್ಷ ಗಣಪತಿ ಭಟ್ ಮಜಿಗುಂಡಿ ತೆಂಗಿನಕಾಯಿ ಒಡೆದು ಚಾಲನೆ ನೀಡಿದರು.ಶೋಭಾಯಾತ್ರೆಯು ಚೆನ್ನಕೇಶವ ದೇವಸ್ಥಾನದ ತನಕ ಮಕ್ಕಳ ಆಕರ್ಷಕ ಕುಣಿತ ಭಜನೆಯೊಂದಿಗೆ ಚೆಂಡೆ ವಾದನದೊಂದಿಗೆ ಭಾರತ ಮಾತೆಯ ಭಾವಚಿತ್ರ ವಿರಿಸಿದ ಅಲಂಕೃತ ವಾಹನದೊಂದಿಗೆ ಸಾಗಿ ಬಂತು. ನೂರಾರು ಮಂದಿ ದತ್ತ ಮಾಲಾಧಾರಿಗಳು ಪಾಲ್ಗೊಂಡಿದ್ದರು.