ಕುಕ್ಕಂದೂರು ಚಿನ್ನಯ ಆಚಾರಿಯವರ ರಬ್ಬರ್ ಗೋಡೌನ್ ಗೆ ನಾಲ್ಕನೇ ಬಾರಿ ನುಗ್ಗಲು ಯತ್ನಿಸಿದ ಕಳ್ಳರು

0

ಎಚ್ಚೆತ್ತ ಮನೆಯವರು – ಈ ಬಾರಿ ಕಳ್ಳತನ ಯತ್ನ ವಿಫಲ, ಬೈಕ್ ಬಿಟ್ಟು ಕಳ್ಳರು ಪರಾರಿ

ಸ್ಪ್ಲೆಂಡರ್ ಬೈಕ್ ನಲ್ಲಿ ಬಂದ ಇಬ್ಬರು ಮಧ್ಯರಾತ್ರಿ ವೇಳೆ ರಬ್ಬರ್ ಶೀಟ್ ಕಳ್ಳತನಕ್ಕೆ ಯತ್ನಿಸಿದ ಹಾಗೂ ಈ ಸಂದರ್ಭದಲ್ಲಿ ಮನೆಯವರು ಎಚ್ಚರಗೊಂಡು ಬಂದುದರಿಂದ ಕಳ್ಳರು ರಬ್ಬರ್ ಕದಿಯಲಾಗದೆ ತಮ್ಮ ಬೈಕನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾದ ಘಟನೆ ಜಾಲ್ಸೂರು ಗ್ರಾಮದ ಕುಕ್ಕಂದೂರಿನಲ್ಲಿ ಫೆ.24ರಂದು ರಾತ್ರಿ ಸಂಭವಿಸಿದೆ.

ಕುಕ್ಕಂದೂರಿನ ಚಿನ್ನಯ್ಯ ಆಚಾರಿ ಅವರ ಮನೆಯ ರಬ್ಬರ್ ಗೋದಾಮಿಗೆ ಈ ಹಿಂದೆ ಮೂರು ಬಾರಿ ಕಳ್ಳರು ನುಗ್ಗಿ ಕಳ್ಳತನ ಮಾಡಿದ್ದರು.
ನಿನ್ನೆ ರಾತ್ರಿ 12 ಗಂಟೆಯ ಬಳಿಕ ಕಳ್ಳರು ನುಗ್ಗಿ ರಬ್ಬರ್ ಶೀಟ್ ಎಳೆಯುತ್ತಿದ್ದ ವೇಳೆ ನಾಯಿಗಳ ಬೊಗಳಾಟದಿಂದಾಗಿ ಮನೆಯವರಿಗೆ ಎಚ್ಚರವಾಯಿತು. ಮನೆಯ ಕೆಲಸಗಾರ ಬಾಬು ಎಂಬವರು ಮುಂದೆ ಹೋಗಿ ಕಳ್ಳತನಕ್ಕೆ ಯತ್ನಿಸುತ್ತಿದ್ದ ಓರ್ವ ವ್ಯಕ್ತಿಯನ್ನು ಹಿಡಿದು ಕೆನ್ನೆಗೆ ಒಂದು ಬಾರಿಸಿದರೆನ್ನಲಾಗಿದೆ. ಆಗ ಕಳ್ಳ ತಿರುಗಿಬಿದ್ದು ಬಾಬುರವರ ಕುತ್ತಿಗೆ ಹಿಡಿದನೆನ್ನಲಾಗಿದೆ. ಆಗ ಬಾಬು ಬೊಬ್ಬೆ ಹೊಡೆದರು. ಆ ವೇಳೆಗೆ ಚಿನ್ನಯ ಆಚಾರಿಯವರು ಕೋವಿ ಹಿಡಿದು ಅಲ್ಲಿಗೆ ತಲುಪಿದರು. ಅಕ್ಕಪಕ್ಕದ ಮನೆಯವರೂ ಎಚ್ಚರಗೊಂಡು ಓಡಿಬರತೊಡಗಿದರು.
ಇದನ್ನು ಕಂಡು ಕಳ್ಳರು ಕತ್ತಲಲ್ಲಿ ಓಡಿ ತಪ್ಪಿಸಿಕೊಂಡರೆನ್ನಲಾಗಿದೆ. ಅವರನ್ನು ಬೆನ್ನಟ್ಟುವ ವೇಳೆ ಚಿನ್ನಯರು ತಮ್ಮ ಕೈಯಲ್ಲಿದ್ದ ಕೋವಿಯಿಂದ ಆಕಾಶದತ್ತ ಗುಂಡು ಹಾರಿಸಿದರೆನ್ನಲಾಗಿದೆ.

ಜನರಿಂದ ತಪ್ಪಿಸಿಕೊಳ್ಳುವ ಧಾವಂತದಲ್ಲಿ ಕಳ್ಳರು ತಾವು ಬಂದಿದ್ದ ಬೈಕನ್ನು ಅಲ್ಲೆ ಬಿಟ್ಟು ಓಡಿದ್ದಾರೆಂದು ತಿಳಿದುಬಂದಿದೆ. ಈ ಬೈಕ್ ರಿಜಿಸ್ಟ್ರೇಶನ್ ಆಗದ ಹೊಸ ಬೈಕ್ ಎನ್ನಲಾಗಿದ್ದು ಕೇವಲ 69 ಕಿ.ಮೀ.ಮಾತ್ರ ಓಡಿದೆಯೆಂದು ಹೇಳಲಾಗಿದೆ.

ಸುಳ್ಯ ಪೋಲೀಸರಿಗೆ ವಿಷಯ ತಿಳಿಸಲಾಗಿದ್ದು ಅವರು ತನಿಖೆ ನಡೆಸುತ್ತಿದ್ದಾರೆ.

ಕಳ್ಳರು ರಾತ್ರಿ ಬೇಳೆ ಬಂದ ಹೊಸ ಕೇವಲ 69 ಕಿ. ಮೀ. ಓಡಿದ ಇನ್ನಷ್ಟೆ ನಂಬರ್ ಪ್ಲೇಟ್ ಆಗಬೇಕಾದ ಸ್ಪ್ಲೆಂಡರ್ ಬೈಕನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದು, ಬೈಕನ್ನು ಸಂಕೋಲೆ ಹಾಕಿ ಮನೆಯಲ್ಲಿ ಇರಿಸಲಾಗಿದೆ. ಸುಳ್ಯ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಚಿನ್ನಯ್ಯ ಆಚಾರಿ ಅವರು ದೂರು ನೀಡಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಬೇಕಷ್ಟೆ ಎಂದು ತಿಳಿದುಬಂದಿದೆ.
ಈ ಹಿಂದೆ ಮೂರು ಬಾರಿ ಕಳ್ಳತನ
ಕಳ್ಳರು ಈ ಹಿಂದೆ ಮೂರು ಬಾರಿ ನಡೆಸಿದ ಕಳ್ಳತನದಲ್ಲಿ ಎಂಟು ಕ್ವಿಂಟಾಲ್ ರಬ್ಬರ್ ಹಾಗೂ ಸುಮಾರು ನಾಲ್ಕು ಸಾವಿರ ಅಡಿಕೆ ನಷ್ಟವಾಗಿರುವುದಾಗಿ ಚಿನ್ನಯ್ಯ ಅವರು ಸುದ್ದಿಗೆ ತಿಳಿಸಿದ್ದಾರೆ.