ಕೆಲವು ವರ್ಷಗಳಿಂದ ಅರಮನೆಗಯ ಸೇತುವೆ ನಿರ್ಮಾಣಕ್ಕೆ ಭರವಸೆಯ ಅರಮನೆ ಕಟ್ಟಿದ ಜನಪ್ರತಿನಿಧಿಗಳು!

0

ಅನೇಕ ವರ್ಷಗಳಿಂದ ಅಡಿಕೆ ಮರದ ಸಲಾಕೆಯ ತೂಗುಯ್ಯಲೆಯಲ್ಲಿ ಪ್ರಾಣದ ಹಂಗು ತೊರೆದು ದಾಟುವ ವಿದ್ಯಾರ್ಥಿಗಳು, ಸಾರ್ವಜನಿಕರು

30 ವರ್ಷಗಳಿಂದಲೂ ತಮ್ಮ ಬೇಡಿಕೆ ಈಡೇರದ ಕಾರಣ ಮತದಾನ ಬಹಿಷ್ಕಾರದ ಕಹಳೆ ಮೊಳಗಿಸಿದ ಊರವರು

40ಕ್ಕೂ ಹೆಚ್ಚು ಮನೆಗಳಲ್ಲಿ ಮತದಾನ ಬಹಿಷ್ಕಾರದ ಫಲಕ ಅಳವಡಿಕೆ-ಊರಿನಲ್ಲಿ ಬ್ಯಾನರ್ ಅಳವಡಿಕೆ

ಅರಂತೋಡು ಮತ್ತು ಮರ್ಕಂಜದ ಅರಮನೆಗಯ, ಚೀಮಾಡು, ಪಿಂಡಿಮನೆ, ಮಾಟೆಕಾಯ, ಬಳ್ಳಕ್ಕಾನ, ಕಕ್ಕಾಡು ಪರಿಸರದ ಜನರ ಬೇಡಕೆಯೊಂದು ಕಳೆದ 30 ವರ್ಷಗಳಿಂದ ಈಡೇರದ ಕಾರಣದಿಂದಾಗಿ ಇಲ್ಲಿಯ ನಿವಾಸಿಗಳು ತಮ್ಮ ಮನೆಯ ಮುಂದೆ ಗೋಡೆಗಳಿಗೆ ಮತದಾನ ಬಹಿಷ್ಕಾರದ ಫಲಕ ಅಳವಡಿಸತೊಡಿಗಿದ್ದಾರೆ. ಹಾಗೂ ತಮ್ಮೂರಿನ ಪ್ರಮುಖ‌ ಸ್ಥಳಗಳಲ್ಲಿ ಬ್ಯಾನರ್ ಅಳವಡಿಸಿದ್ದಾರೆ. ಆ ಮೂಲಕ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಗಮನ ಸೆಳೆಯಲು ಮತದಾನ ಬಹಿಷ್ಕಾರದ ಕಹಳೆ ಮೊಳಗಿಸಿದ್ದಾರೆ.

ಅರಮನೆಗಯ, ಚೀಮಾಡು
ಪಿಂಡಿಮನೆ, ಮಾಟೆಕಾಯ, ಬಳ್ಳಕ್ಕಾನ, ಕಕ್ಕಾಡು ಪರಿಸರದವರು ಅರಂತೋಡು ಮತ್ತು ಮರ್ಕಂಜಕ್ಕೆ ಪಡಿತರ, ಶಾಲಾ ಕಾಲೇಜುಗಳಿಗೆ ತೆರಳಲು ಮಿತ್ತಡ್ಕದಿಂದ ಪಿಂಡಿಮನೆಗೆ ಸಂಪರ್ಕ ರಸ್ತೆಯಿದೆ.‌ ಅರಮನೆಗಯ ಎಂಬಲ್ಲಿ ಸುಸಜ್ಜಿತ ಸೇತುವೆ ಇಲ್ಲದ ಕಾರಣ ಮಳೆಗಾಲದಲ್ಲಿ ಈ ರಸ್ತೆ ಸಂಪರ್ಕ ಕಡಿತಗೊಳ್ಳುತ್ತದೆ.

ಮಳೆಗಾಲದಲ್ಲಿ ಈ ರಸ್ತೆಯ ಸಂಪರ್ಕಕ್ಕಾಗಿ ಅರಮನೆಗಯ ಎಂಬಲ್ಲಿ ತಾತ್ಕಾಲಿಕ ವಾಗಿ ರೋಪ್ ಬಳಸಿ, ಅಡಿಕೆ ಮರದ ಸಲಾಕೆ ಹಾಕಿ ಮಾಡಲಾದ ತೂಗು ಸೇತುವೆ ಇದೆ. ಇದನ್ನು ಪ್ರತೀ ವರ್ಷ ಊರವರು ರಿಪೇರಿ ಮಾಡಿದರೂ ಮಳೆಗಾಲದಲ್ಲಿ ಈ ಹೊಳೆಯಲ್ಲಿ ಭಾರೀ ಪ್ರಮಾಣದಲ್ಲಿ ಬರುವ ನೀರಿನ‌ ರಭಸಕ್ಕೆ ಕೊಚ್ಚಿಕೊಂಡು ಬರುವ ಮರದ ದಿಮ್ಮಿಗಳು ಈ ತೂಗು ಸೇತುವೆಗೆ ಬಡಿದು ಹಾನಿಗೊಳಿಸುತ್ತದೆ. ಕೆಲವೊಮ್ಮೆ ಸೇತುವೆ ಮೇಲೆ ನೀರು ಬಂದ‌ ಘಟನೆಗಳು ನಡೆದಿವೆ. ಈ ಸಂದರ್ಭದಲ್ಲಿ ಶಾಲಾ ಮಕ್ಕಳು ಸಾರ್ವಜನಿಕರು ತೂಗು ಸೇತುವೆಯಲ್ಲಿ ದಾಟಲು ಸಾಧ್ಯವಾಗದೇ ಅರಂತೋಡನ್ನು ಸಂಪರ್ಕಿಸಲು ಮಿತ್ತಡ್ಕ ಮರ್ಕಂಜವನ್ನು ಬಳಸಿ ಕಿಲೋ ಮೀಟರ್ಗಟ್ಟಲೆ ಸುತ್ತು ಬಳಸಿ ತೆರಲುವ ಅನಿವಾರ್ಯತೆ ಇವರಿಗೊದಗಿದೆ. ಅಲ್ಲದೇ ಈ ಸೇತುವೆಯಿಂದ ಕೆಲವರು ಹೊಳೆಗೆ ಬಿದ್ದು ಅದೃಷ್ಟವಶಾತ್ ಬದುಕುಳಿದ ಘಟನೆಗಳು ನಡೆದಿವೆ.


ಹೀಗಾಗಿ ಇಲ್ಲಿಯ ನಿವಾಸಿಗಳು ಅರಮನೆಗಯ ಎಂಬಲ್ಲಿ ಸುಸಜ್ಜಿತ ಸೇತುವೆಯೊಂದನ್ನು ನಿರ್ಮಿಸಿಕೊಡಬೇಕೆಂದು ಶಾಸಕರಾದಿಯಾಗಿ ಜನಪ್ರತಿನಿಧಿಗಳಿಗೆ ಅಧಿಕಾರಿಗಳಿಗೆ ಕಳೆದ 30 ವರ್ಷಗಳಿಂದ ಮನವಿಗಳನ್ನು ಸಲ್ಲಿಸುತ್ತಲೇ ಬಂದಿದ್ದಾರೆ.‌ ಆದರೆ ಇಲ್ಲಿಯವರೆಗೆ ಸೇತುವೆ ಮಾತ್ರ ನಿರ್ಮಾಣವಾಗಲೇ ಇಲ್ಲ.‌

ಈ ಊರಿನ ನಿವಾಸಿಗಳು ಸೇತುವೆಯಾಗಲೇಬೇಕೆಂದು ಜನಪ್ರತಿನಿಧಿಗಳ ಬೆನ್ನು ಬಿದ್ದಾಗ ಭರವಸೆಯ ಗಂಟನ್ನೇ ನೀಡಿದ್ದರೆನ್ನಲಾಗಿದೆ. ಸೇತುವೆ ನಿರ್ಮಾಣವಾಗಲು ಜಾಗ ಗುರುತು ಮಾಡಿದ್ದಾರೆ. ವರ್ಷದ ಹಿಂದೆ ಗುದ್ದಲಿಪೂಜೆ ನೆರವೇರಿಸಿರುವುದಾಗಿಯೂ ಸ್ಥಳೀಯರು ಹೇಳುತ್ತಾರೆ. ಆದರೆ ಅದೆಲ್ಲವೂ ಈಗ ಮರೀಚಿಕೆಯಾಗಿದೆ‌.

ಅರಮನೆಗಯದಲ್ಲಿ ಸೇತುವೆ ನಿರ್ಮಾಣದ ಕಾರ್ಯ ನಡೆಯದ ಕಾರಣ ಈ ಭಾಗದ ಸುಮಾರು 40ರಿಂದ 50 ಮನೆಯವರು ತಮ್ಮ ಎಲ್ಲಾ ಮನೆಗಳಲ್ಲಿ ಮತದಾನ ಬಹಿಷ್ಕರಿಸುವ ಫಲಕ ಅಳವಡಿಸಿದ್ದಾರೆ. ತಮ್ಮ ಊರಿನ ಪ್ರಮುಖ ಸ್ಥಳಗಳಲ್ಲಿಯೂ ಬ್ಯಾನರ್ ಅಳವಡಿಸಿದ್ದಾರೆ. ಅಲ್ಲದೇ ಅಂಬೆಡ್ಕರ್ ಹಿತರಕ್ಷಣಾ ಸಮಿತಿಯ ವತಿಯಿಂದ ಸೇತುವೆ ಉದ್ಘಾಟನೆಗೆ ಬರುವ ಜನಪ್ರತಿನಿಧಿಗಳಿಗೆ ಸ್ವಾಗತ ಎಂದು ಲೇವಾಡಿ ಮಾಡುವ ಬ್ಯಾನರ್ ನ್ನು ಅಳವಡಿಸಿದ್ದಾರೆ.

ಬ್ಯಾನರ್ ತೆರವು – ದೈವಗಳಿಗೆ ಮೊರೆ

ಮಿತ್ತಡ್ಕ, ಅರಮನೆಗಯ, ಪಿಂಡಿಮನೆ ಕಡೆಗಳಲ್ಲಿ ಮತದಾನ ಬಹಿಷ್ಕಾರದ ಬ್ಯಾನರ್ ಮತ್ತು ಅಂಬೆಡ್ಕರ್ ಹಿತರಕ್ಷಣಾ ಸಮಿತಿಯ ವತಿಯಿಂದ ಅಳವಡಿಸಿದ ಬ್ಯಾನರ್‌ನ್ನು ಕೆಲವು ಕಡೆ ತೆರವುಗೊಳಿಸಿರುವುದಾಗಿ ತಿಳಿದು ಬಂದಿದೆ. ಹೀಗಾಗಿ ಬ್ಯಾನರ್ ನ್ನು ಅಳವಡಿಸಿದವರು ಕೊರಗಜ್ಜ, ಉಲ್ಲಾಕುಳು ದೈವಗಳ ಮೊರೆ ಹೋಗಿರುವುದಾಗಿಯೂ ತಿಳಿದು ಬಂದಿದೆ.