ಅರಂಬೂರು: ನರ್ಸರಿಯಿಂದ ಗಿಡಗಳ ಕಳ್ಳತನ

0

ಕದ್ದೊಯ್ಯುತ್ತಿದ್ದ ಓಮ್ನಿ ಸಾರ್ವಜನಿಕರು ಬೆನ್ನಟ್ಟಿದಾಗ ಪಲ್ಟಿ

ಆರೋಪಿಗಳ ವಿರುದ್ಧ ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು

ಸುಳ್ಯದ ಅರಂಬೂರು ಎಸ್ಎಂ ನರ್ಸರಿಯಿಂದ ನಿನ್ನೆ ಮಧ್ಯ ರಾತ್ರಿ ಓಮ್ನಿ ಕಾರಿನಲ್ಲಿ ಗಿಡಗಳನ್ನು ಕಳ್ಳತನ ಮಾಡಿ ಕೊಂಡೊಯ್ಯುತ್ತಿದ್ದ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾದ ಘಟನೆ ವರದಿಯಾಗಿದೆ.

” ಅರಂಬೂರಿನ ನಮ್ಮ ನರ್ಸರಿಯ ಬಳಿ ರಾತ್ರಿ ಸುಮಾರು 12.45 ಕ್ಕೆ ಓಮ್ನಿ ಕಾರಿನಲ್ಲಿ ಗಿಡಗಳನ್ನು ತುಂಬಿಸುತ್ತಿರುವುದು ಈ ರಸ್ತೆಯಲ್ಲಿ ಹೋಗುವ ನಮ್ಮ ಸ್ನೇಹಿತರೊಬ್ಬರು ನೋಡಿದ್ದಾರೆ. ಈ ಸಂದರ್ಭದಲ್ಲಿ ಅವರು ಬೊಬ್ಬೆ ಹಾಕಿ ಕೇಳಿದಾಗ ಕೂಡಲೆ ಕಾರನ್ನು ಚಲಾಯಿಸಿಕೊಂಡು ಸುಳ್ಯದ ಕಡೆ ಹೋಗಿದ್ದಾರೆ. ಈ ಸಂದರ್ಭದಲ್ಲಿ ಅವರನ್ನು ಹಿಂಬಾಲಿಸಿದಾಗ ವಿಷ್ಣು ಸರ್ಕಲ್ ತಿರುವು ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ ಆಗಿ ಬಿದ್ದಿದೆ. ಈ ವೇಳೆ ಕಾರಿನೊಳಗಡೆ ನೋಡಿದಾಗ ಬೆಲೆಬಾಳುವ ಹೂವಿನ ಗಿಡಗಳು ಕಂಡುಬಂದಿದೆ. ಕೂಡಲೆ ಅವರು ನನಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದು ನಾನು ಸ್ಥಳಕ್ಕೆ ತೆರಳಿ ನೋಡಿದಾಗ ಕಾರಿನಲ್ಲಿದ್ದ ಗಿಡಗಳು ನಮ್ಮ ನರ್ಸರಿಯ ಗಿಡಗಳೆಂದು ತಿಳಿದುಬಂದಿದೆ. ಕೂಡಲೇ ನಾನು ಕಾರನ್ನು ಟೋಯಿಂಗ್ ಮೂಲಕ ಸುಳ್ಯ ಪೊಲೀಸ್ ಠಾಣೆಗೆ ಕೊಂಡೊಯ್ದಿದ್ದು, ಬಳಿಕ ನರ್ಸರಿಯತ್ತ ಬರುತ್ತಿದ್ದ ಸಂದರ್ಭ ಕಳ್ಳತನದಲ್ಲಿ ಭಾಗಿಯಾಗಿದ್ದ ಓರ್ವ ವ್ಯಕ್ತಿ ಗಾಂಧಿನಗರಬಳಿ ಕುಂಟುತ್ತಾ ಬರುತ್ತಿದ್ದಿದ್ದನ್ನು ಕಂಡು ವಿಚಾರಿಸಿದಾಗ ನಮ್ಮ ಕಾರನ್ನು ಪೊಲೀಸ್ ಠಾಣೆಗೆ ಕೊಂಡು ಹೋಗಿದ್ದಾರೆ ಎಂದು ಹೇಳಿದ್ದಾರೆ. ಈ ವೇಳೆ ಕಾರಿನಲ್ಲಿ ಇದ್ದ ಓರ್ವ ಈತನೇ ಎಂದು ತಿಳಿದು ಆತನನ್ನು ಸುಳ್ಯ ಠಾಣೆಗೆ ಕರೆದೊಯ್ದು ಪೊಲೀಸರಿಗೆ ಒಪ್ಪಿಸಿರುತ್ತೇನೆ ಎಂದು ಹೇಳಿದ್ದಾರೆ. ಅಲ್ಲದೆ ಕಳೆದ ಕೆಲವು ದಿನಗಳ ಹಿಂದೆ ಇದೇ ರೀತಿಯ ಕಳ್ಳತನ ಪೈಚಾರಿನಲ್ಲಿ ಇರುವ ನಮ್ಮ ಮತ್ತೊಂದು ನರ್ಸರಿಯಲ್ಲಿ ನಡೆದಿರುವುದರಿಂದ ಆ ಘಟನೆಗೂ ಇವರೇ ಕಾರಣ ಎಂದು ನನಗೆ ಬಲವಾದ ಶಂಖೆ ಇದೆ ಎಂದು ತಿಳಿಸುತ್ತಾರೆ.

ಘಟನೆಗೆ ಬಂಧಿಸಿದಂತೆ ನರ್ಸರಿಯ ಮಾಲಕ ಎಸ್ಎಂ ಮಹಮ್ಮದ್ ಸಂಸುದ್ದೀನ್ ಎಂಬುವವರು ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

₹ಪೈಚಾರಿನಲ್ಲಿ ರೋಜ್ ವಿಲ ಮತ್ತು ಅರಂಬೂರಿನಲ್ಲಿ ಎಸ್ಎಂ ನರ್ಸರಿ ಎಂಬ ಎರಡು ನರ್ಸರಿಗಳು ನನ್ನ ಮಾಲಕತ್ವದಲ್ಲಿ ಇದ್ದು ಮಾರ್ಚ್ 26ರಂದು ರಾತ್ರಿ ಪೈಚಾರಿನ ರೋಜ್ ವಿಲ ನರ್ಸರಿಯಿಂದ ಬೆಲೆಬಾಳುವ ಇಂಡೋರ್ ಗಿಡ ಮತ್ತು ಹೂವಿನ ಗಿಡಗಳು ಕಳವಾಗಿದ್ದವು.ಬಳಿಕ ಏಪ್ರಿಲ್ 9 ರಂದು ರಾತ್ರಿ ಕೆ ಎ 19 ಪಿ 14 38 ನಂಬರಿನ ಓಮಿನಿ ಕಾರಿನಲ್ಲಿ ನಮ್ಮ ಅರಂಬೂರು ಎಸ್ ಎಂ ನರ್ಸರಿಯಿಂದ ಇಂಡೋರ್ ಗಿಡಗಳು ಮತ್ತು ಹೂವಿನ ಗಿಡಗಳನ್ನು ಕಳ್ಳತನ ಮಾಡಿ ಕೊಂಡೊಯ್ಯುತ್ತಿದ್ದ ಸಂದರ್ಭ ವಿಷ್ಣು ಸರ್ಕಲ್ ಬಳಿ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ.

ವಿಷಯ ತಿಳಿದ ನಮ್ಮ ಸ್ನೇಹಿತರು ನನಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದು ನಾನು ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಕಾರಿನಲ್ಲಿದ್ದ ಗಿಡಗಳು ನಮ್ಮದೇ ನರ್ಸರಿಯ ಗಿಡಗಳೆಂದು ತಿಳಿದು ಬಂದಿದೆ.
ಒಟ್ಟಿನಲ್ಲಿ ಎರಡು ಕಡೆಗಳಿಂದ ಸುಮಾರು 60 ಸಾವಿರ ರೂಪಾಯಿ ಬೆಲೆಬಾಳುವ ಗಿಡಗಳನ್ನು ಕಳ್ಳತನ ಮಾಡಲಾಗಿದ್ದು,ಈ ಕಳ್ಳತನದಲ್ಲಿ ಕುಕ್ಕುಜಡ್ಕ ನಿವಾಸಿ ಯೋಗೀಶ್ ಮತ್ತು ಅವರ ಇಬ್ಬರು ಸಹಚರರು ಇರುವ ಬಗ್ಗೆ ಅನುಮಾನವಿದೆ. ಆದ್ದರಿಂದ ಈ ಮೂವರನ್ನು ವಿಚಾರಣೆಗೆ ಪಡೆದು ಸೂಕ್ತ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಸುಳ್ಯ ಪೊಲೀಸರು ತನಿಖೆ ಅರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.