ಮನುಷ್ಯ ಮುಟ್ಟಿದರೆ ಮರಿಯನ್ನು ಆನೆ ಸ್ವೀಕರಿಸುವುದಿಲ್ಲವೇ?

0


ನಿನ್ನೆ ಅಜ್ಜಾವರ ಗ್ರಾಮದ ತುದಿಯಡ್ಕದಲ್ಲಿ ಆಕಸ್ಮತ್ ಕೆರೆಗೆ ಬಿದ್ದಿದ್ದ ಆನೆಗಳ ಹಿಂಡಿನಲ್ಲಿದ್ದ ಪುಟ್ಟ ಮರಿಯಾನೆ ಕೆರೆಯಿಂದ ಮೇಲೆ ಬಂದಿದ್ದರೂ ತನ್ನ ಹಿಂಡು ಸೇರಲು ಸಾಧ್ಯವಾಗಿಲ್ಲ.


ಎರಡು ದೊಡ್ಡ ಆನೆಗಳು ಮತ್ತು ಎರಡು ಮರಿ ಆನೆಗಳು ಆಕಸ್ಮತ್ತಾಗಿ ಕೆರೆಗೆ ಬಿದ್ದಿದ್ದವು.ದರಲ್ಲಿ ಮೂರು ಆನೆಗಳು ಕಷ್ಟ ಪಟ್ಟು ಕೆರೆಯಿಂದ ಮೇಲೆ ಬಂದಿದ್ದರೆ, ಸುಮಾರು ಮೂರು ತಿಂಗಳ ಒಂದು ಮರಿಯಾನೆ ಮೇಲೆ ಬರಲಾಗದೆ ಸುಸ್ತಾಗಿ ಕುಸಿದು ಬೀಳುತ್ತಿತ್ತು. ಈ ಮರಿಯನ್ನು ಅರಣ್ಯ ಇಲಾಖೆಯವರು ಮತ್ತು ಸ್ಥಳೀಯರು ಕೆರೆಗಿಳಿದು ಮೇಲಕ್ಕೆ ದೂಡಿ ಹತ್ತಿಸಿದ್ದರು. ಆದರೆ ಆ ಮರಿ ಗುಂಪಿನೊಟ್ಟಿಗೆ ಸೇರಿಕೊಳ್ಳದೆ ದೂರವೇ ಉಳಿದಿದೆ. ಈ ಮರಿಯನ್ನು ಮನುಷ್ಯರು ಮುಟ್ಟಿ ಮೇಲಕ್ಕೆ ಹತ್ತಿಸಿದ್ದರಿಂದ ಆನೆಗಳು ಅದನ್ನು ಸ್ವೀಕರಿಸುತ್ತಿಲ್ಲ ಎಂದು ಪ್ರಚಾರವಾಗಿದೆ. ಮನುಷ್ಯರು ಮುಟ್ಟಿದರೆ ಅಂತಹ ಮರಿಗಳನ್ನು ಆನೆಗಳು ಸ್ವೀಕರಿಸುವುದಿಲ್ಲವೇ? ಹಾಗಿದ್ದರೆ ಆನೆಗಳನ್ನು ಮನುಷ್ಯರು ಸಾಕಿ ಸಲಹುತ್ತಿರುವುದಾದರೂ ಹೇಗೆ ? ಎಂಬ ಪ್ರಶ್ನೆಗಳು ಉದ್ಭವಗೊಂಡಿದ್ದು, ಈ ಬಗ್ಗೆ ಸುಳ್ಯ ವಲಯಾರಣ್ಯಾಧಿಕಾರಿ ಮಂಜುನಾಥ್ ಅವರನ್ನು ಸಂಪರ್ಕಿಸಿ ವಿಚಾರಿಸಿದಾಗ ಅಂತಹ ವಿಚಾರಗಳು ಇಲ್ಲ ಎಂದವರು ಹೇಳಿದರು.


“ಮರಿ ಆನೆ ದೊಡ್ಡ ಆನೆಗಳ ಹಿಂಡಿನಿಂದ ಸುಮಾರು 2೦೦ ಮೀಟರ್ ದೂರದಲ್ಲೇ ಇದೆ. ಒಮ್ಮೆ ನಾವು ಅದನ್ನು ಆನೆ ಹಿಂಡಿನ ಬಳಿಗೆ ಕರೆದೊಯ್ದು ಬಿಟ್ಟು ಬಂದೆವು. ಆದರೆ ಅದು ಮರಳಿ ಬಂದಿದೆ. ಈ ಬಗ್ಗೆ ನಾವು ಮೈಸೂರಿನ ನಾಗರಹೊಳೆ ಅಭಯಾರಣ್ಯದ ಆನೆ ತಜ್ಞರಾದ ಡಾ. ಮುಜೀಬ್‌ರನ್ನು ಸಂಪರ್ಕಿಸಿ ವಿಚಾರಿಸಿದಾಗ, ಆನೆಗಳಲ್ಲಿ ಆ ರೀತಿಯ ಗುಣಧರ್ಮ ಇಲ್ಲ. ಆದರೆ ಕೆಲವು ಆನೆಗಳು ಒಂದೇ ದಿನದಲ್ಲಿ ಮರಿಯೊಂದಿಗಿನ ಅಟ್ಯಾಚ್‌ಮೆಂಟ್ ಕಳೆದುಕೊಳ್ಳಬಹುದು ಅಥವಾ ತಾಯಿ ಆನೆಯ ಕೆಚ್ಚಲಿನಲ್ಲಿ ಏನಾದರೂ ನೋವಿದ್ದರೆ ಅದು ಮರಿಯನ್ನು ದೂರವಿಡಬಹುದು ಎಂದು ತಿಳಿಸಿದ್ದಾರೆ.

ನಾವು ನೋಡಿದ ಪ್ರಕಾರ ಆನೆಯ ಕೆಚ್ಚಲಿನಲ್ಲಿ ಯಾವುದೇ ಗಾಯಗಳು ಕಂಡುಬಂದಿಲ್ಲ. ಆದರೂ ಮರಿ ಯಾಕೆ ಗುಂಪು ಸೇರುತ್ತಿಲ್ಲ ಎಂದು ಗೊತ್ತಾಗುತ್ತಿಲ್ಲ. ಗುಂಪಿಗೆ ಸೇರಿಸಲು ಪ್ರಯತ್ನ ನಡೆಸುತ್ತಿರುವಂತೆ ಡಾ. ಮುಜೀಬ್ ಅವರು ನಮಗೆ ಸಲಹೆ ನೀಡಿದ್ದಾರೆ. ಅದರಂತೆ ಕಾಡಿನ ಅಂಚಿನಲ್ಲಿ ಗುಂಪಿನಿಂದ ಬೇರೆಯಾಗಿ ಇರುವ ಮರಿಯನ್ನು ಗುಂಪಿಗೆ ಸೇರಿಸಲು ಪ್ರಯತ್ನ ನಡೆಸುತ್ತಿದ್ದೇವೆ. ಈಗ ಆನೆಯ ಹಿಂಡು ಬೆಳ್ಳಪ್ಪಾರೆ ಬಳಿ ಇದೆ.

ಅವು ಮತ್ತೆ ತುದಿಯಡ್ಕ ಕಡೆಗೆ ನೀರು ಕುಡಿಯಲು ಬರುವ ನಿರೀಕ್ಷೆ ಇದ್ದು, ಆ ಸಂದರ್ಭದಲ್ಲಿ ಮತ್ತೆ ಗುಂಪಿನತ್ತ ಮರಿಯನ್ನು ಕರೆದೊಯ್ಯುತ್ತೇವೆ.ಅದುವರೆಗೆ ನಮ್ಮ ಇಬ್ಬರು ಸಿಬ್ಬಂದಿ ಆನೆ ಮರಿಗೆ ಕಾವಲಾಗಿ ನಿಂತಿರುತ್ತಾರೆ. ಮರಿ ಗುಂಪಿಗೆ ಸೇರಿಸಲು ಸಾಧ್ಯವೇ ಆಗದಿದ್ದರೆ ಅದನ್ನು ಆನೆ ಶಿಬಿರಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಸಾಕುವ ನಿರ್ಧಾರ ಕೈಗೊಂಡಿದ್ದೇವೆ ಎಂದು ರೇಂಜರ್ ಮಂಜುನಾಥ್ ಸುದ್ದಿಗೆ ತಿಳಿಸಿದರು.