ಸುಳ್ಯ ಕಾಂಗ್ರೆಸ್ ಅಭ್ಯರ್ಥಿಗಳ ಗೊಂದಲದ ಕುರಿತು ಮಾಜಿ ಸಚಿವ ರಮಾನಾಥ ರೈ ನೇತ್ರತ್ವದಲ್ಲಿ ಕಾರ್ಯಕರ್ತರಿಂದ ಅಭಿಪ್ರಾಯ ಸಂಗ್ರಹ ಸಭೆ

0

ನಂದಕುಮಾರ್ ರವರಿಗೆ ಬಿ ಫಾರಂ ನೀಡುವಂತೆ ಕಾರ್ಯಕರ್ತರಿಂದ ಅಭಿಪ್ರಾಯ

ನಂದಕುಮಾರ್ ಕ್ಯಾರೆಕ್ಟರ್ ಸರಿಯಿಲ್ಲವೆಂದ ಧನಂಜಯ ಅಡ್ಪಂಗಾಯರಿಗೆ ಧಿಕ್ಕಾರ ಕೂಗಿದ ಕಾರ್ಯಕರ್ತರು

ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಜಿ.ಕೃಷ್ಣಪ್ಪರಿಗೆ ಘೋ಼ಷಣೆಯಾಗಿದ್ದರೂ, ಕಾರ್ಯಕರ್ತರ ಅಭ್ಯರ್ಥಿಯಾಗಿ ಎಚ್.ಎಂ.ನಂದಕುಮಾರ್ ಸ್ಪರ್ಧಿಸುವರೆಂಬ ವಿಚಾರದಿಂದ ಉದ್ಭವಿಸಿರುವ ಗೊಂದಲವನ್ನು ನಿವಾರಿಸುವುದಕ್ಕಾಗಿ ಕೆಪಿಸಿಸಿ ಸೂಚನೆ ಮೇರೆಗೆ ಇಂದು ಸಂಜೆ ಸುಳ್ಯಕ್ಕೆ ಬಂದ ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದ ನಿಯೋಗ ಸುಳ್ಯದ ಕಾಂಗ್ರೆಸ್ ಚುನಾವಣಾ ಕಚೇರಿಯಲ್ಲಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ ಮಾಡುವ ಕಾರ್ಯವನ್ನು ಎ.15 ರಂದು ಮಾಡಿದ ಸಂದರ್ಭ ನಾಯಕರೊಬ್ಬರು ನಂದಕುಮಾರ್ ಬಗ್ಗೆ ಆಡಿದ ಮಾತಿನಿಂದ ಕೆರಳಿದ ಕಾರ್ಯಕರ್ತರು ಆ ನಾಯಕರಿಗೆ ಧಿಕ್ಕಾರ ಕೂಗಿದ ಘಟನೆ ವರದಿಯಾಗಿದೆ.

ಇಂದು ಸಂಜೆ ಸುಮಾರು 4 ಗಂಟೆಗೆ ಮಾಜಿ ಸಚಿವ ರಮಾನಾಥ ರೈ ಅವರು ಕಾಂಗ್ರೆಸ್ ಕಚೇರಿಗೆ ಅಭಿಪ್ರಾಯ ಸಂಗ್ರಹಕ್ಕೆ ಬರುವ ವಿಷಯ ತಿಳಿದ ನೂರಾರು ಕಾರ್ಯಕರ್ತರು ಕಚೇರಿಯಲ್ಲಿ ಬಂದು ಕಾದು ಕುಳಿತಿದ್ದರು. ಇವರಲ್ಲಿ ನಂದಕುಮಾರ್ ಅಭಿಮಾನಿಗಳೇ ಹೆಚ್ಚು ಮಂದಿಯಿದ್ದರು.


ಸುಮಾರು 4.30ಕ್ಕೆ ರಮಾನಾಥ ರೈ ಯವರು ಬರುತ್ತಿದ್ದಂತೆ ಕಾರ್ಯಕರ್ತರು ಘೋಷಣೆಯನ್ನು ಕೂಗಿ ಅವರನ್ನು ಸ್ವಾಗತಿಸಿದರು. ಈ ವೇಳೆ ನಂದಕುಮಾರ್ ಅಭಿಮಾನಿ ಬಳಗದ ಕಾರ್ಯಕರ್ತರೋರ್ವರು ನಂದಕುಮಾರ್ ರಿಗೆ ಜೈ ಎಂಬ ಘೋಷಣೆಯನ್ನು ಕೂಗಿದಾಗ ವ್ಯಗ್ರರಾದ ರಮಾನಾಥ ರೈಯವರು ಪಕ್ಷಕ್ಕೆ ಮಾತ್ರ ಜಯಕಾರ ಕೂಗಬೇಕು. ಯಾರ ಪರವಾಗಿಯೂ ಘೋಷಣೆ ಕೂಗಬಾರದು ಎಂದು ಅಬ್ಬರಿಸಿದರು. ಆಗ ಕಾರ್ಯಕರ್ತರು ಗಪ್ ಚಿಪ್.

ಬಳಿಕ ಕಚೇರಿ ಒಳಗೆ ಬಂದು ಸಭೆ ಆರಂಭಿಸಿ ಮಾತನಾಡಿದ ರಮಾನಾಥ ರೈಯವರು ” ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರವರ ಆದೇಶದ ಮೇರೆಗೆ ನಾನು ಈ ಸಭೆಗೆ ಬಂದಿದ್ದು ಕಾರ್ಯಕರ್ತರಿಗೆ ಮುಕ್ತವಾಗಿ ಚರ್ಚೆ ಮಾಡಲು ಅವಕಾಶವನ್ನು ನೀಡಲಾಗುವುದು. ಯಾರು ಕೂಡ ಗೊಂದಲ ಅಥವಾ ಆಕ್ರೋಶವನ್ನು ವ್ಯಕ್ತಪಡಿಸಬಾರದು. ತಾಳ್ಮೆಯಿಂದ ತಮ್ಮ ತಮ್ಮ ಅಭಿಪ್ರಾಯವನ್ನು ಮಂಡಿಸಬೇಕು ” ಎಂದು ಹೇಳಿದರು.
ಆ ವೇಳೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಹಾಗೂ ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿಯವರು ಆಗಮಿಸಿದರು.


ಈ ವೇಳೆ ನಂದಕುಮಾರ್ ಅವರಿಗೆ ಟಿಕೆಟ್ ನೀಡಬೇಕೆನ್ನುವ ಆಗ್ರಹ ಜೋರಾಗಿ ಕೇಳಿ ಬರಲು ಪ್ರಾರಂಭವಾಯಿತು. ಸಭೆಯಲ್ಲಿ ನಂದಕುಮಾರ್ ಮತ್ತು ಅಭಿಮಾನಿಗಳು ಕಿಕ್ಕಿರಿದು ಸೇರಿದ್ದರು. ಆಗ ಕಚೇರಿಯ ಮತ್ತೊಂದು ಕೋಣೆಗೆ ತೆರಳಿದ ನಾಯಕರು, ಕಾರ್ಯಕರ್ತರು ಸ್ವಲ್ಪ ಸ್ವಲ್ಪವಾಗಿ ನಮ್ಮ ಬಳಿಗೆ ಬಂದು ನಿಮ್ಮ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ ಎಂದು ಸಲಹೆ ನೀಡಿದರು. ಬಳಿಕ ಆರಂಭಗೊಂಡ ಮಾತುಕತೆ ಸುದೀರ್ಘ ಎರಡು ಗಂಟೆಗಳ ಕಾಲ ನಡೆಯಿತು. ಈ ಸಂದರ್ಭದಲ್ಲಿ ತಾಲೂಕಿನ ವಿವಿಧ ಭಾಗಗಳಿಂದ ಬಂದಂತಹ ಕಾರ್ಯಕರ್ತರುಗಳು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಸಭೆಯಲ್ಲಿ ಹೆಚ್ಚಾಗಿ ನಂದಕುಮಾರ್ ಅಭಿಮಾನಿ ಬಳಗದವರೇ ಇದ್ದ ಕಾರಣ ನಂದಕುಮಾರ್ ಅವರಿಗೆ ಟಿಕೆಟ್ ನೀಡುವಂತೆ ಅವರ ಅಭಿಮಾನಿಗಳು ಪಟ್ಟು ಹಿಡಿದಿದ್ದು ಈ ವೇಳೆ ನೂಕು ನುಗ್ಗಲು ಕೂಡಾ ನಡೆಯಿತು.


ಸುಮಾರು ೫೦೦ಕ್ಕೂ ಅಧಿಕ ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದು ನಂದಕುಮಾರ್ ಅವರಿಗೆ ಟಿಕೆಟ್ ನೀಡುವಂತೆ ತೀವ್ರ ಒತ್ತಡ ಹೇರಿದರು.


ಈ ವೇಳೆ ಸಭೆಯಲ್ಲಿ ಗದ್ದಲ, ಗೊಂದಲ, ಮಾತಿನ ಚಕಮಕಿ ಕೂಡಾ ನಡೆಯಿತು.
ಆಕ್ರೋಶಿತ ಕಾರ್ಯಕರ್ತರನ್ನು ಖುದ್ದು ನಂದಕುಮಾರ್ ಅವರೇ ಸಮಾಧಾನಪಡಿಸುವ ಪ್ರಯತ್ನ ಮಾಡುತ್ತಿದ್ದರು. ಕೃಷ್ಣಪ್ಪ ಅವರ ಅಭಿಮಾನಿಗಳು ಕೂಡಾ ಸಭೆಯಲ್ಲಿದ್ದರಾದರೂ ಕೃಷ್ಣಪ್ಪ ಅವರು ಮಾತ್ರ ಸಭೆಗೆ ಬಂದಿರಲಿಲ್ಲ.

ಕಾರ್ಯಕರ್ತರ ಅಭಿಪ್ರಾಯವನ್ನು ರಮಾನಾಥ ರೈ ಮತ್ತು ನಿಯೋಗ ಪಡೆಯುವ ಪ್ರಯತ್ನ ಮಾಡಿದರಾದರೂ ನಂದಕುಮಾರ್ ಅವರಿಗೆ ಬಿ.ಫಾರಂ ನೀಡಬೇಕೆನ್ನುವ ಕೂಗು ಸಭೆಯಲ್ಲಿ ಜೋರಾಗಿ ಕೇಳಿ ಬಂತು.

ನಂದಕುಮಾರ್ ಅವರಿಗೆ ಟಿಕೆಟ್ ನೀಡಿದರೆ ಮಾತ್ರ ಇಲ್ಲಿ ಕಾಂಗ್ರೆಸ್ ಗೆಲ್ಲಲು ಸಾಧ್ಯ. ಹಾಗಾಗಿ ಹೈಕಮಾಂಡ್ ತಪ್ಪು ಮಾಡುವುದು ಬೇಡ, ಕೂಡಲೇ ಬಿ.ಫಾರಂ ನಂದಕುಮಾರ್‌ಗೆ ನೀಡಿ, ನಾವು ಗೆಲ್ಲಿಸಿ ತೋರಿಸುತ್ತೇವೆ, ನಂದಕುಮಾರ್ ಅವರನ್ನು ಗೆಲ್ಲಿಸಲು ಬೇಕಾಗಿ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಕೆಲಸ ಮಾಡಲು ಸಿದ್ದಗೊಂಡಿದ್ದಾರೆ ಎಂದು ಸೇರಿದ್ದವರು ಹೇಳಿಕೊಳ್ಳುತ್ತಿದರು.


ಈ ಎಲ್ಲ ಘಟನೆ ಮುಗಿದ ಬಳಿಕ ರಮಾನಾಥ ರೈ ನೇತೃತ್ವದ ತಂಡ, ಪಕ್ಷದ ಮುಖಂಡರನ್ನು ಕರೆಸಿ, ಅವರ ಅಭಿಪ್ರಾಯ ಹೇಳಲು ಅವಕಾಶ ನೀಡಿದರು. ಈ ಸಂದರ್ಭ ಕೆಲವರು ನಂದಕುಮಾರ್ ಪರ, ಕೆಲವರು ಜಿ.ಕೃಷ್ಣಪ್ಪರ ಪರ, ಕೆಲವರು ಪಕ್ಷ ಯಾರನ್ನು ಅಭ್ಯರ್ಥಿಯಾಗಿಸಿದರೂ ದುಡಿಯಲು ಸಿದ್ಧ ಎಂಬುದಾಗಿಯೂ ಅಭಿಪ್ರಾಯ ಹೇಳಿದರೆನ್ನಲಾಗಿದೆ.
ನಂತರ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯರು ಮಾತನಾಡುತ್ತಾ ” ನಂದಕುಮಾರ್ ರ ಕ್ಯಾರೆಕ್ಟರ್ ಸರಿ ಇಲ್ಲ. ಅಂತವರನ್ನು ಹೇಗೆ ಅಭ್ಯರ್ಥಿಯಾಗಿಸ್ತೀರಿ ? ಇಲ್ಲಿ ಕೂಗಾಡುವವರು ಎಲ್ಲರೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲ. ಇವರನ್ನೆಲ್ಲ ದುಡ್ಡು ಕೊಟ್ಟು ತರಿಸಲಾಗಿದೆ. ನೈಜ ಕಾರ್ಯಕರ್ತರು ಇವರಲ್ಲಿ ಯಾರು ಇಲ್ಲ ” ಎಂದು ಹೇಳಿದರು. ಇದನ್ನು ಕೇಳಿ ಆಕ್ರೋಶಗೊಂಡ ಕಾರ್ಯಕರ್ತರು ಧನಂಜಯ ಅಡ್ಪಂಗಾಯರ ವಿರುದ್ಧ ಧಿಕ್ಕಾರ ಕೂಗಲು ಪ್ರಾರಂಭಿಸಿದರು. ಆಗ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿಯವರು, ‘ ಕೆಪಿಸಿಸಿ ಅಧ್ಯಕ್ಷರು ಇಲ್ಲಿನ ಗೊಂದಲ ಸರಿಪಡಿಸಲು ಹೇಳಿದ್ದು ಹೊರತು ಅಭಿಪ್ರಾಯ ಸಂಗ್ರಹಿಸಲು ಹೇಳಿದ್ದಲ್ಲ ‘ ಎಂದು ಹೇಳಿದರೆನ್ನಲಾಗಿದೆ. ಕಾರ್ಯಕರ್ತರು ಧನಂಜಯರು ಮತ್ತು ಭರತರ ಮೇಲೆ ಆಕ್ರೋಶ ವ್ಯಕ್ತಪಡಿಸತೊಡಗಿದರು. ಕೆಲಹೊತ್ತು ನೂಕಾಟ ತಳ್ಳಾಟ ನಡೆಯಿತು. ಈ ಇಬ್ಬರು ನಾಯಕರು ಮತ್ತು ಕಾರ್ಯಕರ್ತರುಗಳಿಗೆ ಪರಸ್ಪರ ವಾಗ್ವಾದ ನಡೆಯಿತು. ಎಂ.ಎಲ್.ಸಿ. ಮಂಜುನಾಥ ಭಂಡಾರಿ, ಹರೀಶ್ ಕುಮಾರ್ ಹಾಗೂ ನಂದಕುಮಾರ್ ರವರು ಕಾರ್ಯಕರ್ತರನ್ನು ಸಮಾಧಾನಗೊಳಿಸಲು ಪ್ರಯತ್ನಿಸಿದರು.

ಬಳಿಕ ರಮಾನಾಥ ರೈಯವರು, ” ಇಲ್ಲಿನ ನೈಜ ಚಿತ್ರಣವನ್ನು ವರದಿ ಮಾಡಲು ನನಗೆ ಹೇಳಿದ್ದಾರೆ. ನಾವು ಕೆ.ಪಿ.ಸಿ.ಸಿ.ಗೆ ವರದಿ ಕಳಿಸುತ್ತೇವೆ. ಮುಂದಿನದು ವರಿಷ್ಟರಿಗೆ ಬಿಟ್ಟದ್ದು ” ಎಂದು ಹೇಳಿ ಸಭೆಯನ್ನು ಮುಗಿಸಿ ಹೊರಟರು.

ಅಲ್ಲಿಂದ ನಾಯಕರುಗಳು ಹೊರಡುವಾಗ ಅವರನ್ನು ಹಿಂಬಾಲಿಸಿದ ಕಾರ್ಯಕರ್ತರುಗಳು ರಸ್ತೆ ವರೆಗೆ ಧನಂಜಯ ಅಡ್ಪಂಗಾಯರಿಗೆ ಧಿಕ್ಕಾರದ ಘೋಷಣೆ ಕೂಗಿದರು. ಹರೀಶ್ ಕುಮಾರ್, ಮಂಜುನಾಥ ಭಂಡಾರಿಯವರ ಜತೆ ಧನಂಜಯ ಅಡ್ಪಂಗಾಯ, ಭರತ್ ಮುಂಡೋಡಿಯವರೂ ನಿರ್ಗಮಿಸಿದರು. ನಂತರ ಬಹಳ ಹೊತ್ತಿನ ವರೆಗೂ ಕಾರ್ಯಕರ್ತರು ಮುಖಂಡರ ಬಗ್ಗೆ ಅಸಮಾಧಾನ ಹೊರಹಾಕುತ್ತಲೇ ಇದ್ದರು.


ಒಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.


ಇಂದಿನ ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ. ಸಿ. ಜಯರಾಮ್, ಪ್ರಧಾನ ಕಾರ್ಯದರ್ಶಿ ಪಿ. ಎಸ್. ಗಂಗಾಧರ್, ಡಾ ರಘು, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಚುನಾವಣಾ ಉಸ್ತುವಾರಿ ಎಂ.ವೆಂಕಪ್ಪ ಗೌಡ, ಮುಖಂಡರುಗಳಾದ ಕೆ ಎಂ ಮುಸ್ತಫ ಜನತಾ, ಎಸ್. ಸಂಶುದ್ದೀನ್ , ಸರಸ್ವತಿ ಕಾಮತ್, ಚಂದ್ರಶೇಖರ್ ಕಾಮತ್, ವಹೀದಾ ಇಸ್ಮಾಯಿಲ್, ಗೀತಾ ಕೋಲ್ಚಾರ್, ಶಾಹುಲ್ ಹಮೀದ್, ಶರೀಫ್ ಕಂಠಿ ಸೇರಿದಂತೆ ಹಲವಾರು ಗಣ್ಯರುಗಳು ಉಪಸ್ಥಿತರಿದ್ದರು.