*ಸಂಪಾಜೆ ವಲಯ ಕಾಂಗ್ರೆಸ್ ನಿಯೋಗದಿಂದ ಸುಳ್ಯ ತಹಶೀಲ್ದಾರ್ ಭೇಟಿ*

0

*ಸಂಪಾಜೆ‌ ಪಯಸ್ವಿನಿ ನದಿಯ ಹೂಳೆತ್ತುವ ಕುರಿತು ಚರ್ಚೆ

ಕಳೆದ ವರ್ಷ ಪ್ರವಾಹದಿಂದ ಸಂಕಷ್ಟಕ್ಕೀಡಾಗಿದ್ದ ಸಂಪಾಜೆ ಗ್ರಾಮಕ್ಕೆ ಆಗಿನ ಮುಖ್ಯಮಂತ್ರಿಗಳು, ಸಚಿವರುಗಳು, ಜಿಲ್ಲಾಧಿಕಾರಿಗಳು ಆಗಮಿಸಿ ಗ್ರಾಮದ ಹೊಳೆಗಳ ಹೂಳೆತ್ತೆವುದರ ಕುರಿತಾಗಿ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದರು. ಇದೀಗ ಆ ಕಡತವು ಯಾವ ಹಂತದಲ್ಲಿದೆ ಎಂಬುವುದರ ಕುರಿತಾಗಿ ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಸೋಮಶೇಖರ್ ಕೊಯಿಂಗಾಜೆಯವರ ನೇತೃತ್ವದ ನಿಯೋಗವು ಸುಳ್ಯ ತಹಶೀಲ್ದಾರ್ ಜಿ.ಮಂಜುನಾಥ್ ಅವರನ್ನು ಭೇಟಿಯಾಗಿ ಚರ್ಚಿಸಿತು.

ಈಗಾಗಲೇ ಕಡತವು ಜಿಲ್ಲಾಧಿಕಾರಿಗಳ ಹಂತದಲ್ಲಿದ್ದು, ಗಣಿ ಹಾಗೂ ಭೂವಿಜ್ಞಾನ ಇಲಾಖೆಯ ಕೋರಿಕೆಯ ಮೇರೆಗೆ ಸುಳ್ಯ ಭೂಮಾಪಕರು ಹಾಗೂ ಕಂದಾಯ ನಿರೀಕ್ಷಕರು ಸ್ಥಳ ವೀಕ್ಷಣೆಯನ್ನು ನಡೆಸಿ ಕಂದಾಯ ನಕಾಶೆಯನ್ನು ಗಣಿ ಹಾಗೂ ಭೂವಿಜ್ಞಾನ ಇಲಾಖೆಗೆ ನಾವು ಕಳುಹಿಸಿರುತ್ತೇವೆ ಎಂದು ತಹಶೀಲ್ದಾರ್ ಜಿ.ಮಂಜುನಾಥ್ ಅವರು ನಿಯೋಗಕ್ಕೆ ಮಾಹಿತಿಯನ್ನು ನೀಡಿದರು.

ಹೂಳೆತ್ತುವ ಕಡತವು ಜಿಲ್ಲಾಧಿಕಾರಿಗಳ ಹಂತದಲ್ಲಿದ್ದು, ಮುಂದಿನ ದಿನಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇಮಕವಾದ ನಂತರ ಅವರ ಮೂಲಕ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಒತ್ತಡ ಹಾಕುತ್ತೇವೆಂದು ಸೋಮಶೇಖರ್ ಕೊಯಿಂಗಾಜೆಯವರು ಈ ವೇಳೆ ತಿಳಿಸಿದರು.

ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಕುಂಞ ಗೂನಡ್ಕ, ದ.ಕ.ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷರಾದ ಎ.ಕೆ.ಇಬ್ರಾಹಿಂ, ಸಂಪಾಜೆ ವಲಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಟಿ.ಐ.ಲೂಕಾಸ್ ನಿಯೋಗದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here