ಸಂಪಾಜೆಯಲ್ಲಿ ಘಮ ಘಮಿಸುತ್ತಿದೆ ಮಲ್ಲಿಗೆ

0

⏭️ ಮಲ್ಲಿಗೆ ಕೃಷಿಯಿಂದ ಖುಷಿ ಪಡೆಯುತ್ತಿರುವ ನಿವೃತ್ತ ಅಂಚೆಪಾಲಕ ಎಸ್.ಪಿ. ಆನಂದ ದಂಪತಿ

⏭️ ಮಲ್ಲಿಗೆ ಗಿಡ ನಾಟಿ, ಮಾರುಕಟ್ಟೆಯ ಬಗ್ಗೆ ಇಲ್ಲಿದೆ ಮಾಹಿತಿ…

✍️ ವಿನಯ್ ಜಾಲ್ಸೂರು

ಮಲ್ಲಿಗೆ ಆಕರ್ಷಕ ಹಾಗೂ ಪ್ರಮುಖವಾದ ವಾಣಿಜ್ಯ ಬೆಳೆಯಾಗಿದ್ದು, ಸಾಮಾನ್ಯವಾಗಿ ಪ್ರತಿಯೊಂದು ಶುಭ ಸಮಾರಂಭಗಳಲ್ಲಿ ಪ್ರಮುಖ ಸ್ಥಾನ ಹೊಂದಿದೆ.

ಸುಗಂಧದ್ರವ್ಯ ತಯಾರಿಕೆಗೆ ಬಳಕೆ ಮಾಡುವ ಪ್ರಧಾನ ಹೂವಿನ ಬೆಳೆಯಾಗಿರುವ ಮಲ್ಲಿಗೆ ಬೆಳೆಯು ಬಹುಮುಖ್ಯ ಹೂವಿನ ಕೃಷಿಯಾಗಿದೆ.

ದಕ್ಷಿಣ ಕನ್ನಡ ಹಾಗೂ ಉಡುಪಿಯ ಕರಾವಳಿ ಭಾಗದ ರೈತರು ಪ್ರಧಾನ ತೋಟಗಾರಿಕಾ ಬೆಳೆಯಾದ ಅಡಿಕೆಗೆ ವಿವಿಧ ರೀತಿಯ ರೋಗಬಾಧೆ ಹಾಗೂ ರಬ್ಬರ್‌ಗೆ ಬೆಲೆಕುಸಿತದಿಂದಾಗಿ ಇಂದಿನ ದಿನಗಳಲ್ಲಿ ವಿವಿಧ ಉಪಕೃಷಿ ಬೆಳೆಯತ್ತ ಆಕರ್ಷಿತರಾಗಿದ್ದು, ಈ ಉಪಕೃಷಿ ಬೆಳೆಯಿಂದ ಉತ್ತಮ ಇಳುವರಿ ಪಡೆಯುತ್ತಿದ್ದಾರೆ.

ಸಂಪಾಜೆ ಗ್ರಾಮದ ಪೆಲ್ತಡ್ಕ ನಿವಾಸಿಯಾಗಿರುವ ನಿವೃತ್ತ ಅಂಚೆಪಾಲಕ ಎಸ್.ಪಿ.ಆನಂದ ಅವರು ತಮ್ಮ ಮನೆಯ ಅಂಗಳ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಸುಮಾರು ಮೂವತ್ತೈದು ಬುಡ ಶಂಕರಪುರ ಮಲ್ಲಿಗೆಯ ಗಿಡ ನೆಟ್ಟು ಬೆಳೆಸಿದ್ದು, ಈ ಮೂಲಕ ಉತ್ತಮ ಇಳುವರಿ ಹಾಗೂ ಆದಾಯ ಗಳಿಸುತ್ತಿದ್ದಾರೆ.

ಎಸ್.ಪಿ.ಆನಂದ ಅವರಿಗೆ ಅವರ ಪತ್ನಿ ಶ್ರೀಮತಿ ಎಸ್.ಪಿ.ಲೀಲಾ ಅವರು ಬೆನ್ನೆಲುಬಾಗಿ ನಿಂತಿದ್ದು, ಮಲ್ಲಿಗೆ ಕೃಷಿಯಲ್ಲಿ ನಿರತರಾಗಿದ್ದಾರೆ.

ಅರಂತೋಡಿನಲ್ಲಿ ಅಂಚೆಪಾಲಕರಾಗಿದ್ದ ಎಸ್.ಪಿ.ಆನಂದ ಅವರು ಕಳೆದ ಎಂಟು ವರ್ಷಗಳ ಹಿಂದೆ ಪುತ್ತೂರು ತಾಲೂಕಿನ ಈಶ್ವರಮಂಗಲದಿಂದ ಮಲ್ಲಿಗೆ ಗಿಡವನ್ನು ತಂದು ನೆಟ್ಟು ಬೆಳೆಸಿದ್ದು, ಕಳೆದ ಏಳು ವರ್ಷಗಳಿಂದ ಉತ್ತಮ ಆದಾಯ ಪಡೆಯುತ್ತಿದ್ದಾರೆ.

ಗಿಡ ನೆಡುವ ವಿಧಾನ: ಮಲ್ಲಿಗೆ ಗಿಡವನ್ನು ಒಂದೂವರೆ ಫೀಟ್‌ನಷ್ಟು ಆಳದಲ್ಲಿ ಗುಂಡಿ ತೆಗೆದು ಸಾವಯುವ ಹಟ್ಟಿ ಗೊಬ್ಬರ ಹಾಕಿ ಎರಡು ವಾರಗಳ ಕಾಲ ಮುಚ್ಚಿ ಇಡಬೇಕು. ಬಳಿಕ ಗಿಡದಿಂದ ಗಿಡಕ್ಕೆ ಹತ್ತು ಫೀಟ್‌ನಷ್ಟು ಅಂತರದಲ್ಲಿ ಗಿಡವನ್ನು ನೆಡಬೇಕು. ಗಿಡವನ್ನು ನೆಟ್ಟ ಬಳಿಕ ಒಂದು ವರ್ಷದವರೆಗೆ ಅದಕ್ಕೆ ಸಾವಯುವ ಹಟ್ಟಿಗೊಬ್ಬರ ಹಾಕಿ ಪೋಷಿಸಬೇಕು. ಒಂದು ವರ್ಷದ ಬಳಿಕ ಗಿಡವು ಹೂ ಬಿಡಲು ಪ್ರಾರಂಭವಾಗುತ್ತದೆ ಎನ್ನುತ್ತಾರೆ ಆನಂದ ಅವರು.


ಸಾಮಾನ್ಯವಾಗಿ ವರ್ಷದಲ್ಲಿ ಸೆಪ್ಟೆಂಬರ್ ಬಳಿಕ ಗಿಡದಲ್ಲಿ ಹೂ ಬಿಡಲು ಪ್ರಾರಂಭವಾಗುತ್ತದೆ. ಬಳಿಕ ಎಪ್ರಿಲ್ – ಮೇ ತಿಂಗಳ ಅಂತ್ಯದವರೆಗೆ ಇಳುವರಿ ಪಡೆಯಬಹುದು. ಜನವರಿ ತಿಂಗಳಲ್ಲಿ ಅತ್ಯಧಿಕ ಇಳುವರಿ ಪಡೆಯಬಹುದು ಎನ್ನುತ್ತಾರೆ ಆನಂದ ಅವರು.

ಉಡುಪಿಯ ಶಂಕರಪುರ ಮಲ್ಲಿಗೆ ಬೆಳೆಯನ್ನು ದಕ್ಷಿಣ ಕನ್ನಡ ಉಡುಪಿ ಸೇರಿದಂತೆ ಕರಾವಳಿ ಭಾಗದ ಕೃಷಿಕರು ಬೆಳೆಯುತ್ತಿದ್ದು, ಜನವರಿಯಿಂದ ಮೇ ತಿಂಗಳ ಅಂತ್ಯದವರೆಗೆ ಈ ಬೆಳೆಗೆ ಸೀಸನ್ ಆಗಿದ್ದು, ತಮ್ಮ ಸುಮಾರು ಮೂವತ್ತೈದು ಬುಡಗಳಿಂದ ಸೀಸನ್ ಸಂದರ್ಭದಲ್ಲಿ ದಿನದಲ್ಲಿ ಹತ್ತು ಅಟ್ಟೆ ಮಲ್ಲಿಗೆಯನ್ನು ಬೆಳೆದಿದ್ದಾರೆ. ಹೀಗೆ ತಾವು ಬೆಳೆದ ಹೂವನ್ನು ಸುಳ್ಯದ ಹೂವಿನ ಮಾರುಕಟ್ಟೆಗೆ ರವಾನೆ ಮಾಡುತ್ತಿದ್ದಾರೆ. ಒಂದು ಅಟ್ಟೆ ಮಲ್ಲಿಗೆ ಕೃಷಿಯಿಂದ ಸುಮಾರು ಒಂದು ಸಾವಿರಕ್ಕೂ ಅಧಿಕ ಆದಾಯ ಗಳಿಸಲು ಸಾಧ್ಯ ಎಂದು ಎಸ್.ಪಿ. ಆನಂದ ಅವರು ಹೇಳುತ್ತಾರೆ.

ಜೂನ್‌ನಿಂದ ಆಗಸ್ಟ್ ತಿಂಗಳು ಮಲ್ಲಿಗೆ ಕೃಷಿ ನಾಟಿಗೆ ಯೋಗ್ಯ ಸಮಯ
ಮಲ್ಲಿಗೆ ಹೂವಿಗೆ ಇಂದಿನ ದಿನಗಳಲ್ಲಿ ಬಾರೀ ಬೇಡಿಕೆ ಇದೆ. ಹೂವಿನಲ್ಲಿ ಮಲ್ಲಿಗೆ ಹೂವು ಅದರಲ್ಲೂ ವಿಶೇಷವಾಗಿ ಕರಾವಳಿ ಪ್ರದೇಶದಲ್ಲಿ ಬೆಳೆಯುವ ಮಲ್ಲಿಗೆಗೆ ಇರುವಷ್ಟು ಬೇಡಿಕೆ ಬೇರೆಡೆಯಲ್ಲಿ ಇಲ್ಲ. ಇದಕ್ಕೆ ವಿಶಾಲವಾದ ಜಾಗ ಬೇಕಾಗಿದ್ದು, ನಾಟಿ ಮಾಡಲು ಮಳೆಗಾಲದ ಪ್ರಾರಂಭ ಯೋಗ್ಯವಾದ ಸಮಯ. ಜೂನ್ ತಿಂಗಳಿನಿಂದ ಆಗಸ್ಟ ತಿಂಗಳವರೆಗೆ ನಾಟಿ ಮಾಡಬಹುದಾಗಿದೆ. ಪೂರ್ಣ ಪ್ರಮಾಣದಲ್ಲಿ ನೀರಿನ ವ್ಯವಸ್ಥೆ ಇದ್ದ ಕಡೆಗಳಲ್ಲಿ ಅಕ್ಟೋಬರ್ ತಿಂಗಳವರೆಗೂ ನಾಟಿ ಮಾಡಬಹುದಾಗಿದೆ.

✍️ ವಿನಯ್ ಜಾಲ್ಸೂರು
( ಸಹಕಾರ : ಕೃಷ್ಣ ಬೆಟ್ಟ)