ಯೋಗದೊಂದಿಗೆ ಆಂತರಿಕ ಶಾಂತಿ

0

ಇಂದು ವಿಶ್ವ ಯೋಗ ದಿನ

ಯೋಗ ದಿನ ನಮ್ಮ ಹೆಮ್ಮೆ. ಯಾಕೆಂದರೆ ಜಗತ್ತಿಗೆ ಯೋಗವನ್ನು ಪರಿಚಯಿಸಿಕೊಟ್ಟ ದೇಶ ನಮ್ಮ ಭಾರತ. 6000 ವರ್ಷಗಳ ಇತಿಹಾಸವುಳ್ಳ ಯೋಗ ಮೇಲ್ನೋಟಕ್ಕೆ ತಿರುಗುವ, ಬಾಗುವ, ಚಾಚುವ ಮತ್ತು ಉಸಿರಾಟದ ವ್ಯಾಯಾಮವೆಂದು ಅನಿಸಿದರೂ ಅದೊಂದು ಜ್ಞಾನ ಭಂಡಾರ. ವ್ಯಕ್ತಿಯ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ಹೊರಹೊಮ್ಮಿಸುವ ಒಂದು ವಿಜ್ಞಾನ. ಯೋಗವನ್ನು ನಾವು ಬೇರೆ ಬೇರೆ ರೀತಿಯಲ್ಲಿ ಅರ್ಥೈಸಿಕೊಳ್ಳಬಹುದು. ಒಂದರಲ್ಲಿ ಇನ್ನೊಂದು ಲೀನವಾಗುವುದು, ಆತ್ಮವನ್ನು ಪರಮಾತ್ಮನಲ್ಲಿ ಒಂದಾಗಿಸುವ ಆಧ್ಯಾತ್ಮಿಕ ಅಭಿಲಾಷೆ, ಮಾನಸಿಕ ಏಕಾಗ್ರತೆಯನ್ನು ಹೊಂದಲು ಸಹಾಯಕವಾಗುವ

ವೈಜ್ಞಾನಿಕ ಕಲೆ ಎಂದೆಲ್ಲಾ ಅರ್ಥೈಸಿಕೊಳ್ಳಬಹುದು. ಸಾಮಾನ್ಯವಾಗಿ ಯೋಗ ಎಂಬ ಶಬ್ದವನ್ನು ಆಧ್ಯಾತ್ಮಿಕ ಸಂಯಮ ಎಂಬ ಅರ್ಥದಲ್ಲಿ ಬಳಸಲಾಗುತ್ತದೆ. ಯೋಗ ನಮ್ಮ ಜೀವನ ಶೈಲಿಯ ಪ್ರಮುಖ ಭಾಗ. ಭಾರತೀಯ ಸಂಸ್ಕೃತಿಯ ಒಂದು ಅವಿಭಾಜ್ಯ ಅಂಗ.

ಯೋಗ ದಿನದ ಇತಿಹಾಸ

ಭಾರತದ ಪ್ರಧಾನಿ ನರೇಂದ್ರ ಮೋದಿಯವರು 2014, ಸೆಪ್ಟೆಂಬರ್ 27ರಂದು ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ ಯೋಗದ ಪ್ರಯೋಜನಗಳನ್ನು ವೀಕ್ಷಿಸಿ ಅದೇ ಸಭೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನದ ಕಲ್ಪನೆಯನ್ನು ಪ್ರಸ್ತಾಪಿಸಿದರು. 2014ರ ಡಿಸೆಂಬರ್ 11ರಂದು ಕರಡು ನಿರ್ಣಯವನ್ನು ಪರಿಚಯಿಸಿದರು. ವಿಶ್ವಸಂಸ್ಥೆಯ 193 ರಾಷ್ಟ್ರಗಳ ಪೈಕಿ 177 ಸದಸ್ಯ ರಾಷ್ಟ್ರಗಳು ಮತ್ತು ಅನೇಕ ಜಾಗತಿಕ ನಾಯಕರು ಇದಕ್ಕೆ ಬೆಂಬಲವನ್ನು ನೀಡಿ ಕರಡು ಅಂಗೀಕಾರವಾಯಿತು.

ಚೊಚ್ಚಲ ಯೋಗ ದಿನಾಚರಣೆ
2015 ರಲ್ಲಿ ಮೊದಲ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು. ಜೂನ್ 21, 2015ರಂದು ಆಯುಷ್ ಸಚಿವಾಲಯದ ನೇತೃತ್ವದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ದೆಹಲಿಯ ರಾಜ್ ಪಥ್ ನಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ ಹಾಗೂ 84 ರಾಷ್ಟ್ರಗಳ ಗಣ್ಮರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ 21 ಆಸನಗಳನ್ನು ಅಭ್ಯಸಿಸಿ ಯೋಗದ ಮಹತ್ವವನ್ನು ಜಗತ್ತಿಗೆ ಸಾರಿದರು.

ಪ್ರಥಮ ಯೋಗ ದಿನದ ದಾಖಲೆ

2015 ಜೂನ್ 21ರಂದು ಪ್ರಪ್ರಥಮ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ದೆಹಲಿಯ ರಾಜ್ ಪಥ್ ನಲ್ಲಿ ನಡೆದ ಪ್ರಥಮ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯು ಎರಡು ಗಿನ್ನಿಸ್ ದಾಖಲೆಯನ್ನು ನಿರ್ಮಿಸಿತು. ವಿಶ್ವದ ಅತಿ ದೊಡ್ಡ ಯೋಗ ಕ್ಲಾಸ್ ನಲ್ಲಿ ದಾಖಲೆಯ 35,985 ಮಂದಿ ಭಾಗವಹಿಸಿ ದಾಖಲೆ ನಿರ್ಮಿಸಿದರೆ, ಗರಿಷ್ಠ ಸಂಖ್ಯೆಯ ರಾಷ್ಟ್ರೀಯತೆಯನ್ನು ಹೊಂದಿರುವ ವ್ಯಕ್ತಿಗಳು (84) ಭಾಗವಹಿಸಿ ದಾಖಲೆ ನಿರ್ಮಿಸಿದ್ದರು. ಅಷ್ಟು ಮಾತ್ರವಲ್ಲದೇ 2015ರ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಸ್ಮರಣಾರ್ಥವಾಗಿ ಭಾರತೀಯ ರಿಸರ್ವ್ ಬ್ಯಾಂಕ್ ರೂ. 10 ನಾಣ್ಯವನ್ನು ಬಿಡುಗಡೆ ಮಾಡಿತು.

ಜೂನ್ 21ನ್ನೇ ಯಾಕೆ ಆಯ್ಕೆ
ಜೂನ್ 21 ವರ್ಷದಲ್ಲಿ ಬರುವ ಅತಿ ದೀರ್ಘ ದಿನ. ಉತ್ತರ ಗೋಳಾರ್ಧದ ಅತಿ ಉದ್ದದ ಹಾಗೂ ದಕ್ಷಿಣ ಗೋಳಾರ್ಧದ ಅತಿ ಚಿಕ್ಕ ದಿನ ಜೂನ್ 21 ಎಂದು ಗುರುತಿಸಿಕೊಂಡಿದೆ. ಆ ಕಾರಣಕ್ಕಾಗಿ ಆ ದಿನವನ್ನು ಅಂತಾರಾಷ್ಟ್ರೀಯ ಯೋಗ ದಿನದ ಆಚರಣೆಗೆ ಆಯ್ಕೆ ಮಾಡಲಾಗಿದೆ. ಈ ದಿನವನ್ನು ಬೇಸಿಗೆ ಆಯನ ಸಂಕ್ರಾಂತಿ ದಿನ ಅಂದರೆ ವರ್ಷದಲ್ಲಿ ಅತೀ ಹೆಚ್ಚು ಹಗಲು ದಿನವೆಂದು ಕರೆಯಲಾಗಿತ್ತು.

*ಈ ದಿನದ ಮಹತ್ವ :

“ಯೋಗಶ್ಚಿತ್ತವೃತ್ತಿನಿರೋಧಃ” ಎಂದವರು ಯೋಗ ಪ್ರವರ್ತಕರೂ, ಮಹಾ ಯೋಗಾಚಾರ್ಯರೂ ಆದ ಪತಂಜಲಿ ಮಹರ್ಷಿಗಳು.ಅಂದರೆ ಚಿತ್ತವೃತ್ತಿಯನ್ನು ನಿರೋಧಿಸುವುದು ಯೋಗದ ಉದ್ದೇಶ.

ಯೋಗದಿಂದ ಮನುಷ್ಯನ ದೇಹ, ಮನಸ್ಸು ಮತ್ತು ಆತ್ಮಕ್ಕೆ ಬಹಳಷ್ಟು ಪ್ರಯೋಜನಗಳಿವೆ. ಇದು ಸ್ವಯಂ ಚಿಕಿತ್ಸೆಯನ್ನು ಉತ್ತೇಜಿಸುವುದಲ್ಲದೇ ಸ್ವಯಂ ಜಾಗೃತಿಯನ್ನು ಹೆಚ್ಚಿಸುತ್ತದೆ. ಸಮತೋಲನ ಮತ್ತು ಸಾಮರಸ್ಯವನ್ನು ಸಾಧಿಸಲು ಸಹಾಯ ಮಾಡುವ ಯೋಗ ವ್ಯಕ್ತಿಯ ನರಮಂಡಲವನ್ನು ಸಕ್ರಿಯಗೊಳಿಸುತ್ತದೆ. ಅದು ಮನುಷ್ಯನ ಭೌತಿಕ ಮತ್ತು ಬೌದ್ಧಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ಯೋಗದಿಂದ ಕೇವಲ ದೇಹವನ್ನು ಸರಿಪಡಿಸುವುದು ಮಾತ್ರವಲ್ಲ ಮನಸ್ಸು, ದೇಹ ಮತ್ತು ಆತ್ಮ ಸೇರಿದಂತೆ ಮೂರು ಅಂಶಗಳನ್ನು ಶುದ್ಧೀಕರಿಸಲು ನೆರವಾಗುತ್ತದೆ. ಯಾವಾಗ ಮನುಷ್ಯ ಈ ಮೂರು ಅಂಶಗಳೊಂದಿಗೆ ಸಮತೋಲನವನ್ನು ಸಾಧಿಸುತ್ತಾನೋ ಆವಾಗ ಆರೋಗ್ಯವಾಗಿದ್ದಾನೆ ಎಂದರ್ಥ. ಯೋಗ ಮನುಷ್ಯ ಮತ್ತು ಪ್ರಕೃತಿಯ ಜೊತೆಗೆ ಸಂಪರ್ಕವನ್ನು ಕಲ್ಪಿಸುತ್ತದೆ. ಮತ್ತು ಪ್ರಕೃತಿ ಮತ್ತು ಮನುಷ್ಯನ ಜೊತೆ ಸಾಮರಸ್ಯವನ್ನುಂಟು ಮಾಡುತ್ತದೆ. ಇದು ಮನಸ್ಸು ಮತ್ತು ದೇಹ, ಚಿಂತನೆ ಮತ್ತು ಕ್ರಿಯೆ, ಸಂಯಮ ಮತ್ತು ಸಾರ್ಥಕತೆಯನ್ನು ಒಗ್ಗೂಡಿಸುತ್ತದೆ. ನಾವೆಲ್ಲರೂ ವಿಶ್ವ ಶಾಂತಿಯನ್ನು ಬಯಸುತ್ತೇವೆ, ಆದರೆ ಮೊದಲು ನಮ್ಮ ಮನಸ್ಸಿನಲ್ಲಿ ಶಾಂತಿ ಸೃಷ್ಟಿಸದ ಹೊರತು ವಿಶ್ವ ಶಾಂತಿಯನ್ನು ಎಂದಿಗೂ ಸಾಧಿಸಲಾಗುವುದಿಲ್ಲ. ಮನ ಶಾಂತಿಗಾಗಿ ಯೋಗ ಅತ್ಯಂತ ಪರಿಣಾಮಕಾರಿ. ಒಟ್ಟಿನಲ್ಲಿ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಯೋಗ ಪ್ರಯೋಜನಕಾರಿ.

ಈ ಹಿಂದಿನ ಥೀಮ್ ಗಳು
ಪ್ರತಿ ವರ್ಷ ಈ ಯೋಗ ದಿನಾಚರಣೆಯನ್ನು ವಿಭಿನ್ನ ಥೀಮ್ ಗಳನ್ನು ಇಟ್ಟುಕೊಂಡು ಆಚರಿಸಲಾಗುತ್ತದೆ. ಆ ಮೂಲಕ ಮನುಷ್ಯರನ್ನು ಎಚ್ಚರಿಸುವುದರೊಂದಿಗೆ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ.

2015 ರಲ್ಲಿ ಸಾಮರಸ್ಯ ಮತ್ತು ಶಾಂತಿಗಾಗಿ ಯೋಗ
2016ರಲ್ಲಿ ಯುವಕರನ್ನು ಸಂಪರ್ಕಿಸಿ
2017ರಲ್ಲಿ ಆರೋಗ್ಯಕ್ಕಾಗಿ ಯೋಗ
2018ರಲ್ಲಿ ಶಾಂತಿಗಾಗಿ ಯೋಗ
2019 ರಲ್ಲಿ ಹೃದಯಕ್ಕಾಗಿ ಯೋಗ
2020 ರಲ್ಲಿ ಮನೆಯಲ್ಲಿ ಯೋಗ ಕುಟುಂಬದೊಂದಿಗೆ ಯೋಗ
2021 ರಲ್ಲಿ ಯೋಗ ಯೋಗಕ್ಷೇಮಕ್ಕಾಗಿ
2022 ರಲ್ಲಿ ಒಟ್ಟಿಗೆ ಯೋಗ

2023ರ ಯೋಗ ದಿನದ ಥೀಮ್“ಮಾನವೀಯತೆ”

ಯೋಗ ದಿನದ ಆಚರಣೆಯು ಯೋಗದ ಸಮಗ್ರ ಸ್ವರೂಪದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಉತ್ತಮ ಆರೋಗ್ಯದ ಬಗ್ಗೆ ಪ್ರಪಂಚದಾದ್ಯಂತ ಅರಿವು ಮೂಡಿಸುವ ಗುರಿಯನ್ನು ಹೊಂದಿದೆ. “ಮಾನವೀಯತೆ” ಇಂದಿನ ಸಮಾಜದ ಅನಿವಾರ್ಯತೆ. ಆಧುನಿಕತೆಗೆ ತೆರೆದುಕೊಂಡಂತೆ ಮನುಷ್ಯ ಮನಸ್ಸನ್ನು ಅರಳಿಸುವ ಕೆಲಸ ಮಾಡುವುದಕ್ಕಿಂತಲೂ ಕೆರಳಿಸುವ ಕೆಲಸದಲ್ಲಿ ಹೆಚ್ಚು ನಿರತನಾಗುತ್ತಿದ್ದಾನೆ. ಅಂತಹ ಸಂದರ್ಭದಲ್ಲಿ ಮಾನವೀಯತೆ ನಾಶವಾಗಿ ಮನುಷ್ಯತ್ವ ಮರೆತು ಆತ ವರ್ತಿಸುತ್ತಾನೆ. ವಿಕೃತ ಸ್ವಭಾವವನ್ನು ದೂರ ಮಾಡಿ ಮನುಷ್ಯನ ಮನದಲ್ಲಿ ಶಾಂತಿ ಸ್ವಭಾವ ಮೂಡಿ ಮಾನವೀಯತೆ ಮೆರೆಯಲು ಯೋಗ ದಿನ ಸಹಕಾರಿಯಾಗಲಿ ಎನ್ನುವ ನಿಟ್ಟಿನಲ್ಲಿ 2023 ರ ಥೀಮ್ “ಮಾನವೀಯತೆ” ಎಲ್ಲರ ಮನದಲ್ಲಿ ಮೊಳಕೆಯೊಡೆಯಲಿ ಎಂಬುದು ನಮ್ಮೆಲ್ಲರ ಸದಾಶಯ.

ಲೇಖಕರು:
ಡಾ. ಅನುರಾಧಾ ಕುರುಂಜಿ
ವ್ಯಕ್ತಿತ್ವ ವಿಕಸನ ತರಬೇತುದಾರರು, ಸುಳ್ಯ