ಕೇರಳ ಸರಕಾರಿ ಸಾರಿಗೆ ಬಸ್ ಹಾಗೂ ಇನೋವಾ ಕಾರು ಅಪಘಾತ ಪ್ರಕರಣ

0


ಆರೋಪಿ ಬಸ್ ಚಾಲಕ ದೋಷಮುಕ್ತಿ


2019 ರಲ್ಲಿ ಅಡ್ಕಾರಿನ ಮಾವಿನಕಟ್ಟೆ ಬಳಿ ನಡೆದ ಘಟನೆ


ಜಾಲ್ಸೂರು ಗ್ರಾಮದ ಅಡ್ಕಾರಿನ ಮಾವಿನಕಟ್ಟೆ ಬಳಿ ನಡೆದ ಕೇರಳ ಸರಕಾರಿ ಸಾರಿಗೆ ಬಸ್ ಹಾಗೂ ಇನೋವಾ ಕಾರು ನಡುವೆ ನಡೆದ ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರ ಸಾವಿಗೆ ಕಾರಣರಾದ ಸಾರಿಗೆ ಬಸ್‌ನ ಚಾಲಕ ಕುಂಞಣ್ಣ ರೈ ಅವರನ್ನು ಆರೋಪದಿಂದ ದೋಷಮುಕ್ತಗೊಳಿಸಿ ಸುಳ್ಯ ನ್ಯಾಯಾಲಯ ತೀರ್ಪು ನೀಡಿದೆ.


2019 ಅಕ್ಟೋಬರ್ 11ರಂದು ಸಂಜೆ 6 ಗಂಟೆಯ ವೇಳೆಗೆ ಕಾಸರಗೋಡಿನಿಂದ ಸುಳ್ಯಕ್ಕೆ ಬರುತ್ತಿದ್ದ ಕೇರಳ ಸರಕಾರಿ ಸಾರಿಗೆ ಬಸ್ (ಕೆಎಲ್ 15 ಎ 1747) ಮತ್ತು ಸುಳ್ಯ ಕಡೆಯಿಂದ ಪುತ್ತೂರು ಕಡೆಗೆ ಮಜೀದ್ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಇನೋವಾ ಕಾರು (ಕೆಎ 22 ಎನ್ 7974) ನಡುವೆ ಅಪಘಾತವಾಗಿ ಕಾರಿನ ಚಾಲಕ ಮಜೀದ್ ಎಂ., ಸಹಪ್ರಯಾಣಿಕರಾದ ಮಹಮ್ಮದ್ ಸಾದಿಕ್ ಮತ್ತು ಫಾತಿಮತ್ ಸುನೈನಾ ಎಂಬ ಮೂವರು ವ್ಯಕ್ತಿಗಳು ಮೃತಪಟ್ಟಿರುವುದಾಗಿ ಈ ಅಪಘಾತಕ್ಕೆ ಬಸ್ ಚಾಲಕ ಕುಂಞಣ್ಣ ರೈವರ ಅತಿ ವೇಗ ಮತ್ತು ಅಜಾಗರೂಕತೆ ಚಾಲನೆಯೇ ಕಾರಣವೆಂದು ಕುಂಞಣ್ಣ ರೈಯವರ ವಿರುದ್ಧ ಸುಳ್ಯ ಠಾಣಾ ಪ್ರಕರಣ ನಂಬ್ರ 79/2019ರಂತೆ ಭಾರತೀಯ ದಂಡ ಸಂಹಿತೆಯ ಕಲಂ 279.337, 338 ಮತ್ತು 304(ಎ) ರ ಅಪರಾಧಗಳಿಗಾಗಿ ಕೇಸು ದಾಖಲಾಗಿದ್ದು, ಈ ಪ್ರಕರಣದ ತನಿಖೆಯನ್ನು ಪೂರೈಸಿದ ತನಿಖಾಧಿಕಾರಿ ಸುಳ್ಯ ವೃತ್ತ ನಿರೀಕ್ಷಕ ನವೀನ್‌ಚಂದ್ರ ಜೋಗಿಯವರು ಆರೋಪಿಯ ಮೇಲಿನ ಆರೋಪವು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಸುಳ್ಯ ನ್ಯಾಯಾಲಯದಲ್ಲಿ ಸಿಸಿ ನಂ. 3/2021ರಂತೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು.

ಪ್ರಕರಣದ ಸುದೀರ್ಘ ವಿಚಾರಣೆಯ ಬಳಿಕ ಆರೋಪಿ ಪರ ವಕೀಲರ ಹಾಗೂ ಸರಕಾರಿ ಅಭಿಯೋಜಕರ ವಾದ ವಿವಾದಗಳನ್ನು ಆಲಿಸಿದ ಸುಳ್ಯ ಸಿವಿಲ್ ಜಡ್ಜ್ ಹಿರಿಯ ವಿಭಾಗದ ನ್ಯಾಯಾಲಯದ ನ್ಯಾಯಾಧೀಶ ಮೋಹನ್ ಬಾಬುರವರು ಅಭಿಯೋಜನೆಯು ಆರೋಪಿಯ ಮೇಲಿನ ಆರೋಪವನ್ನು ವಿಫಲವಾಗಿದೆ ಎಂದು ತೀರ್ಮಾನಿಸಿ ಆರೋಪಿಯನ್ನು ಆತನ ಮೇಲಿರುವ ಆರೋಪಗಳಿಂದ ದೋಷಮುಕ್ತಿಗೊಳಿಸಿ ಜೂ. 6ರಂದು ತೀರ್ಪು ನೀಡಿದ್ದಾರೆ.


ಆರೋಪಿಯ ಪರವಾಗಿ ವಕೀಲರಾದ ನಾರಾಯಣ ಕೆ., ಚಂದ್ರಶೇಖರ ಬಿ., ಅನಿತಾ ಆರ್. ನಾಯಕ್, ವಿಫುಲ್ ಎನ್. ವಿ. ವಾದಿಸಿದ್ದಾರೆ.