ನೆರೆ ನೀರು ದಾಟಿ ಬಂದು ಸೆಮಿಸ್ಟರ್ ಪರೀಕ್ಷೆ ಬರೆದ ಪದವಿ ವಿದ್ಯಾರ್ಥಿಗಳು

0


ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ಬಳಿ ಕಂಡು ಬಂದ ದೃಶ್ಯ


ಪರೀಕ್ಷೆ ಮುಂದೂಡಲು ಕೇಳಿ ಬರುತ್ತಿದೆ ಆಗ್ರಹ

ಕರಾವಳಿಯಲ್ಲಿ ಇಂದು ಕೂಡಾ ಭಾರೀ ಮಳೆ ಮುಂದುವರಿದಿದ್ದು, ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕುಮಾರಧಾರ ಸಮೀಪ ಹೆದ್ದಾರಿಯಲ್ಲಿ ಜಲಾವೃತಗೊಂಡ ರಸ್ತೆಯಲ್ಲಿಯೇ ವಿದ್ಯಾರ್ಥಿಗಳು ನೆರೆ ನೀರಿನಲ್ಲಿ ದಾಟಿ ಬಂದು ಸೆಮಿಸ್ಟರ್ ಪರೀಕ್ಷೆ ಬರೆಯಬೇಕಾದ ಅನಿವಾರ್ಯತೆ ಬಂತು.


ಭಾರೀ ಮಳೆಯ ಹಿನ್ನಲೆಯಲ್ಲಿ ಹಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ಮಂಗಳೂರು ವಿ.ವಿ. ಕೊಡಗು ಜಿಲ್ಲೆಯಲ್ಲಿ ಸೆಮಿಸ್ಟರ್ ಪರೀಕ್ಷೆಗಳನ್ನು ಮುಂದೂಡಲಾಗಿತ್ತು. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರೀಕ್ಷೆ ಮುಂದೂಡಲಾಗಿರಲಿಲ್ಲ.


ನಿನ್ನೆಯಿಂದಲೇ ಪಂಜ ಮಾರ್ಗವಾಗಿ ಕುಕ್ಕೆ ಸುಬ್ರಹ್ಮಣ್ಯವನ್ನು ಸಂಪರ್ಕಿಸುವ ಸುಬ್ರಹ್ಮಣ್ಯ ಮಂಜೇಶ್ವರ ರಸ್ತೆ ಜಲಾವೃತಗೊಂಡಿತ್ತು. ಅಲ್ಲಿ ಸ್ನಾನಘಟ್ಟ ಮುಳುಗಡೆಯಾಗಿತ್ತು. ನಿನ್ನೆ ರಾತ್ರಿ ವೇಳೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕೆಲವರನ್ನು ಬೋಟ್ ಮೂಲಕ ದಾಟಿಸಲಾಗಿತ್ತು.
ಇಂದು ಬೆಳಿಗ್ಗೆ ರಸ್ತೆಯ ಮೇಲಿದ್ದ ನೀರು ಸ್ವಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದ್ದರೂ ಪೂರ್ಣವಾಗಿ ಸಂಚಾರ ಯೋಗ್ಯವಾಗಿಲ್ಲ.
ಪದವಿ ಪರೀಕ್ಷೆಗಳು ಎಂದಿನಂತೆ ನಡೆಯುವ ಹಿನ್ನಲೆಯಲ್ಲಿ ಪಂಜ ಭಾಗದಿಂದ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಜಲಾವೃತಗೊಂಡ ರಸ್ತೆಯಲ್ಲಿಯೇ ಹೋಗಿ ಪರೀಕ್ಷೆ ಬರೆದರು. ಇದು ಸಾಕಷ್ಟು ಟೀಕೆಗೂ ಕಾರಣವಾಗಿದೆ. ಈ ಅಪಾಯಕಾರಿ ಪರಿಸ್ಥಿತಿಯಲ್ಲಿ ಪರೀಕ್ಷೆಗಳನ್ನು ಮುಂದೂಡುವುದು ಸೂಕ್ತ ಎಂದು ಅಭಿಪ್ರಾಯಗಳೂ ಕೇಳಿಬಂದಿದೆ.