ಗ್ರಾಮ ಪಂಚಾಯತ್ ಸಾರಥಿಗಳಲ್ಲಿ ಮಹಿಳೆಯರದ್ದೇ ಮೇಲುಗೈ !

0

ಸುಳ್ಯ ತಾಲೂಕಿನ ತಲಾ 17 ಪಂಚಾಯತ್‌ಗಳಲ್ಲಿ ಮಹಿಳೆಯರಿಗೆ ಅಧ್ಯಕ್ಷತೆ, ಉಪಾಧ್ಯಕ್ಷತೆ

ನಾಲ್ಕು ಪಂಚಾಯತ್ ಗಳಲ್ಲಿ ಹಿಂದಿನ ಉಪಾಧ್ಯಕ್ಷರುಗಳೇ ಈಗ ಅಧ್ಯಕ್ಷರು

ದುರ್ಗಾಕುಮಾರ್ ನಾಯರ್‌ಕೆರೆ

ಸುಳ್ಯ ತಾಲೂಕಿನ 25 ಗ್ರಾಮ ಪಂಚಾಯತ್‌ಗಳಲ್ಲೂ ನೂತನ ಸಾರಥಿಗಳ ಆಯ್ಕೆ ನಡೆದಿದೆ. ಸುಳ್ಯ ತಾಲೂಕಿನ ಗಡಿ ಪ್ರದೇಶವಾದ 6 ಪಂಚಾಯತ್ ಗಳಲ್ಲೂ ಅಧ್ಯಕ್ಷ – ಉಪಾಧ್ಯಕ್ಷರ ಆಯ್ಕೆ ಆಗಿದೆ.

ವಿಶೇಷವೆಂದರೆ ಈ ಬಾರಿ ಈ ಎಲ್ಲ ಗ್ರಾಮ ಪಂಚಾಯತ್‌ಗಳ ಸಾರಥಿಗಳ ಪೈಕಿ ಮುಕ್ಕಾಲು ಭಾಗ ಮಹಿಳೆಯರದ್ದೇ ಪ್ರಾಬಲ್ಯ.

ಸುಳ್ಯ ತಾಲೂಕಿನ 25 ಗ್ರಾಮ ಪಂಚಾಯತ್‌ಗಳಲ್ಲಿ ದೇವಚಳ್ಳ ಹೊರತುಪಡಿಸಿ ಉಳಿದ ಎಲ್ಲಾ ಪಂಚಾಯತ್‌ಗಳಲ್ಲಿ ಅಧ್ಯಕ್ಷರ ಆಯ್ಕೆ ನಡೆದಿದೆ. ಈ ಪೈಕಿ 17 ಗ್ರಾಮ ಪಂಚಾಯತ್‌ಗಳಲ್ಲಿ ಮಹಿಳೆಯರು ಅಧ್ಯಕ್ಷರಾಗಿದ್ದಾರೆ. ಎಲ್ಲಾ ಗ್ರಾಮ ಪಂಚಾಯತ್‌ಗಳಲ್ಲಿ ಉಪಾಧ್ಯಕ್ಷರುಗಳ ಆಯ್ಕೆ ನಡೆದಿದ್ದು, 17 ಗ್ರಾ.ಪಂ.ಗಳಲ್ಲಿ ಮಹಿಳೆಯರು ಉಪಾಧ್ಯಕ್ಷರಾಗಿದ್ದಾರೆ.

ಮರ್ಕಂಜ, ಗುತ್ತಿಗಾರು, ಕೊಡಿಯಾಲ, ಜಾಲ್ಸೂರು, ಪಂಜ, ಆಲೆಟ್ಟಿ, ಬೆಳ್ಳಾರೆ, ಕೊಲ್ಲಮೊಗ್ರ, ಮುರುಳ್ಯ, ಐವರ್ನಾಡು, ಅಮರಮುಡ್ನೂರು, ಸಂಪಾಜೆ, ಬಾಳಿಲ, ಉಬರಡ್ಕ ಮಿತ್ತೂರು, ಕನಕಮಜಲು, ಮಡಪ್ಪಾಡಿ, ಹಾಗೂ ಅಜ್ಜಾವರ ಗ್ರಾ.ಪಂ.ಗಳಲ್ಲಿ ಮಹಿಳೆಯರು ಅಧ್ಯಕ್ಷರಾಗಿದ್ದಾರೆ.

ಮರ್ಕಂಜ, ಗುತ್ತಿಗಾರು, ಅರಂತೋಡು, ಜಾಲ್ಸೂರು, ನೆಲ್ಲೂರು ಕೆಮ್ರಾಜೆ, ಕೊಡಿಯಾಲ, ಕಳಂಜ, ಮಂಡೆಕೋಲು, ಆಲೆಟ್ಟಿ, ಬೆಳ್ಳಾರೆ, ಮುರುಳ್ಯ, ಅಮರಮುಡ್ನೂರು, ದೇವಚಳ್ಳ, ಪೆರುವಾಜೆ, ಉಬರಡ್ಕ ಮಿತ್ತೂರು, ಕಲ್ಮಡ್ಕ, ಮಡಪ್ಪಾಡಿ ಪಂಚಾಯತ್‌ಗಳಲ್ಲಿ ಉಪಾಧ್ಯಕ್ಷತೆ ಮಹಿಳೆಯರಿಗೆ ದೊರೆತಿದೆ.

ಈ ಪೈಕಿ ಬಹುತೇಕ ಗ್ರಾ.ಪಂ.ಗಳ ಅಧ್ಯಕ್ಷ, ಉಪಾಧ್ಯಕ್ಷತೆ ಮೀಸಲಾತಿ ಅರ್ಹತೆ ಪ್ರಕಾರ ಮಹಿಳೆಯರಿಗೆ ದೊರೆತಿದ್ದರೆ, ಕೆಲವು ಕಡೆ ಮಹಿಳಾ ಮೀಸಲು ಇಲ್ಲದ ಕಡೆಯೂ ಮಹಿಳೆಯರೇ ಅಧ್ಯಕ್ಷರಾಗಿರುವುದು ಹೊಸ ಬೆಳವಣಿಗೆ.

ಸುಳ್ಯ ತಾಲೂಕಿನ 9 ಪಂಚಾಯತ್‌ಗಳಲ್ಲಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಮಹಿಳೆಯರೇ ಆಗಿದ್ದಾರೆ. ಮರ್ಕಂಜ, ಗುತ್ತಿಗಾರು, ಜಾಲ್ಸೂರು, ಆಲೆಟ್ಟಿ, ಬೆಳ್ಳಾರೆ, ಮುರುಳ್ಯ, ಅಮರ ಮುಡ್ನೂರು, ಉಬರಡ್ಕ ಮಿತ್ತೂರು, ಮಡಪ್ಪಾಡಿ ಈ ಗ್ರಾಮ ಪಂಚಾಯತ್ ಗಳು. ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯತ್ ನಲ್ಲಿ ಮಾತ್ರ ಎರಡೂ ಸ್ಥಾನಗಳು ಪುರುಷರ ಪಾಲಾಗಿದೆ.

ಮುರುಳ್ಯ ಮತ್ತು ಹರಿಹರ ಪಲ್ಲತ್ತಡ್ಕ ಗ್ರಾ.ಪಂ.ಗಳಲ್ಲಿ ಪ್ರಥಮ ಅವಧಿಯಲ್ಲಿ ಅಧ್ಯಕ್ಷರಾದವರು ಉಪಾಧ್ಯಕ್ಷರಾಗಿ, ಉಪಾಧ್ಯಕ್ಷರಾಗಿದ್ದವರು ಅಧ್ಯಕ್ಷರಾಗಿ ಸ್ಥಾನ ಪಲ್ಲಟ ನಡೆದಿದೆ.

ನೆಲ್ಲೂರು ಕೆಮ್ರಾಜೆ, ಕೊಡಿಯಾಲ, ಮಡಪ್ಪಾಡಿ, ಕಲ್ಮಡ್ಕ ಗ್ರಾಮ ಪಂಚಾಯತ್‌ಗಳಲ್ಲಿ ಮೊದಲ ಸಾಲಿನಲ್ಲಿ ಉಪಾಧ್ಯಕ್ಷರು ಈ ಬಾರಿ ಅಧ್ಯಕ್ಷರಾಗಿದ್ದಾರೆ.

ಉಬರಡ್ಕ ಮಿತ್ತೂರು, ಮುರುಳ್ಯ ಪಂಚಾಯತ್‌ಗಳಲ್ಲಿ ಮೊದಲ ಅವಧಿಯಲ್ಲಿ ಅಧ್ಯಕ್ಷರಾಗಿದ್ದವರು ಈ ಬಾರಿ ಉಪಾಧ್ಯಕ್ಷರಾಗಿದ್ದಾರೆ.

ಸುಳ್ಯ ತಾಲೂಕಿನ ಉಬರಡ್ಕ ಮಿತ್ತೂರು ಮತ್ತು ಜಾಲ್ಸೂರು ಪಂಚಾಯತ್‌ಗಳಲ್ಲಿ ಕಾಂಗ್ರೆಸ್ ಬೆಂಬಲಿತರಿಗೆ ಬಹುಮತ ಇಲ್ಲದಿದ್ದರೂ ಮೀಸಲಾತಿ ಆಧಾರದಲ್ಲಿ ಉಪಾಧ್ಯಕ್ಷತೆ ಕಾಂಗ್ರೆಸ್ ಬೆಂಬಲಿತರ ಪಾಲಾಗಿದೆ.

ಸುಳ್ಯ ತಾಲೂಕಿನ ಗ್ರಾಪಂ.ಗಳ ಪೈಕಿ ಪೆರುವಾಜೆಯಲ್ಲಿ ಮಾತ್ರ ಹಿಂದಿನ ಅಧ್ಯಕ್ಷರ ಪುನರಾಯ್ಕೆಯಾಗಿದೆ.

ಅರಂತೋಡಿನಲ್ಲಿ ಅಧ್ಯಕ್ಷತೆಗೆ, ಮರ್ಕಂಜದಲ್ಲಿ ಉಪಾಧ್ಯಕ್ಷತೆಗೆ ಬಿಜೆಪಿಯೊಳಗೇ ಗೊಂದಲ ಉಂಟಾಗಿ ಚುನಾವಣೆ ನಡೆಯಬೇಕಾಗಿ ಬಂತು. ಗುತ್ತಿಗಾರು ಮತ್ತು ಉಬರಡ್ಕ ಮಿತ್ತೂರುಗಳಲ್ಲಿ ಕೆಲವು ಬಿಜೆಪಿ ಬೆಂಬಲಿತ ಸದಸ್ಯರು ಚುನಾವಣೆಗೆ ಗೈರು ಹಾಜರಾದ ವಿದ್ಯಮಾನವೂ ನಡೆಯಿತು.

ಸಂಪಾಜೆಯಲ್ಲಿ ಉಪಾಧ್ಯಕ್ಷತೆಗೆ ಕಾಂಗ್ರೆಸ್‌ನೊಳಗೆ ಗೊಂದಲ ಉಂಟಾಗಿ ಸ್ಪರ್ಧೆ ಉಂಟಾಯಿತು. ದೇವಚಳ್ಳದಲ್ಲಿ ಇದುವರೆಗೂ ಅಧ್ಯಕ್ಷರ ಆಯ್ಕೆ ನಡೆದಿಲ್ಲ. ಇಲ್ಲೂ ಅಧ್ಯಕ್ಷತೆ ಮಹಿಳಾ ವಿಭಾಗಕ್ಕೇ ಮೀಸಲಾಗಿರುವುದು.

ಮಡಿಕೇರಿ ತಾಲೂಕಿನ ಕೊಡಗು ಸಂಪಾಜೆ, ಚೆಂಬು ಹಾಗೂ ಪೆರಾಜೆ ಗ್ರಾ.ಪಂ.ಗಳಲ್ಲಿ ಎರಡು ಕಡೆ ಅಧ್ಯಕ್ಷತೆ ಹಾಗೂ ಎರಡು ಕಡೆ ಉಪಾಧ್ಯಕ್ಷತೆ ಮಹಿಳೆಯರ ಪಾಲಾಗಿದೆ. ಕೊಡಗು ಸಂಪಾಜೆ ಮತ್ತು ಪೆರಾಜೆ ಗ್ರಾ.ಪಂ.ಗಳಲ್ಲಿ ಅಧ್ಯಕ್ಷತೆ ಮಹಿಳೆಯರಿಗೆ ಲಭಿಸಿದ್ದರೆ, ಕೊಡಗು ಸಂಪಾಜೆ ಮತ್ತು ಚೆಂಬು ಗ್ರಾ.ಪಂ.ಗಳಲ್ಲಿ ಉಪಾಧ್ಯಕ್ಷತೆ ಮಹಿಳೆಯರಿಗೆ ದೊರೆತಿದೆ. ಬಿಜೆಪಿ ಹಾಗೂ ಮೈತ್ರಿಕೂಟ ಸಮಬಲ ಏರ್ಪಟ್ಟಿದ್ದ ಹಿನ್ನಲೆಯಲ್ಲಿ ಚೆಂಬು ಪಂಚಾಯತ್ ನ ಪ್ರಥಮ ಅವಧಿಯ ಅಧ್ಯಕ್ಷತೆ ಕಾಂಗ್ರೆಸ್ ಬೆಂಬಲಿತರಿಗೆ ದೊರೆತಿತ್ತು. ಅಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಒಂದು ಸ್ಥಾನ ಗಳಿಸಿದ್ದ ಹಿನ್ನಲೆಯಲ್ಲಿ ಬಹುಮತ ಗಳಿಸಿ ಈಗ ಬಿಜೆಪಿ ಬೆಂಬಲಿತರು ಅಧ್ಯಕ್ಷರಾಗಿದ್ದಾರೆ. ಪೆರಾಜೆ ಗ್ರಾ.ಪಂ.ನಲ್ಲಿ ಪ್ರಥಮ ಅವಧಿಯಲ್ಲಿ ಅಧ್ಯಕ್ಷರಾಗಿದ್ದ ಚಂದ್ರಕಲಾ ಅವರೇ ಈ ಬಾರಿಯೂ ಅಧ್ಯಕ್ಷರಾಗಿದ್ದಾರೆ.

ಕಡಬ ತಾಲೂಕಿನ ಸುಬ್ರಹ್ಮಣ್ಯ, ಬಳ್ಪ ಮತ್ತು ಎಡಮಂಗಲ ಗ್ರಾ.ಪಂ.ಗಳ ಪೈಕಿ ಸುಬ್ರಹ್ಮಣ್ಯ ಗ್ರಾ.ಪಂ.ನಲ್ಲಿ ಅಧ್ಯಕ್ಷತೆ ಮಹಿಳೆಯರ ಪಾಲಾಗಿದೆ. ಎಡಮಂಗಲ ಮತ್ತು ಬಳ್ಪ ಪಂಚಾಯತ್ ನ ಉಪಾಧ್ಯಕ್ಷತೆ ಮಹಿಳೆಯರ ಪಾಲಾಗಿದೆ.